

ನವದೆಹಲಿ: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಆರು ದಿನಗಳ ಬಳಿಕ, 22 ವರ್ಷದ ಕರ್ನಾಟಕ ಮೂಲದ ಭಾರತೀಯ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ.
ಕರ್ನಾಟಕದ ಸಾಕೇತ್ ಶ್ರೀನಿವಾಸಯ್ಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ರಾಸಾಯನಿಕ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದರು. ಅವರು ಫೆಬ್ರವರಿ 9 ರಂದು ಕಾಣೆಯಾಗಿದ್ದರು.
ಸಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ವಾಣಿಜ್ಯ ದೂತಾವಾಸ ಕಚೇರಿಯು ಪೊಲೀಸರು ಅವರ ಮೃತದೇಹವನ್ನು ಪತ್ತೆಹಚ್ಚಿರುವುದನ್ನು ದೃಢಪಡಿಸಿದ್ದು, ಅವರ ದೇಹವನ್ನು ಶೀಘ್ರದಲ್ಲೇ ಭಾರತಕ್ಕೆ ಸಾಗಿಸಲು ಅಗತ್ಯವಿರುವ ಎಲ್ಲಾ ಸಹಾಯವನ್ನು ನೀಡುವುದಾಗಿ ತಿಳಿಸಿದೆ. ಈ ಅತ್ಯಂತ ಕಠಿಣ ಸಮಯದಲ್ಲಿ ಅವರ ಕುಟುಂಬ ಮತ್ತು ಆತ್ಮೀಯರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು ಎಂದು ಪ್ರಕಟಣೆ ತಿಳಿಸಿದೆ.
ಶ್ರೀನಿವಾಸಯ್ಯ ಅವರು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ನಾಪತ್ತೆಗೆ ಮುನ್ನ ಕಾಣಿಸಿಕೊಂಡಿದ್ದರು. ಲೇಕ್ ಅಂಝಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ನಗರ ಮಟ್ಟದ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ, ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಹೊಂದಿದ್ದ ಬ್ಯಾಕ್‌ಪ್ಯಾಕ್ ಕ್ಯಾಂಪಸ್‌ಗೆ ಸಮೀಪದ ಟಿಲ್ಡನ್ ಪ್ರಾದೇಶಿಕ ಉದ್ಯಾನವನದ ಬಳಿ ಇರುವ ನಿವಾಸದ ಸಮೀಪ ಪತ್ತೆಯಾಗಿತ್ತು. ಅವರನ್ನು ಪತ್ತೆಹಚ್ಚಲು ಸಮುದಾಯ ಸದಸ್ಯರು ಆನ್‌ಲೈನ್ ಮೂಲಕ ಸಹಕಾರ ನೀಡಿದ್ದು, ರೆಡಿಟ್‌ನಲ್ಲಿ ಅವರನ್ನು ಹುಡುಕುವ ಪ್ರಯತ್ನಗಳ ಕುರಿತು ಚರ್ಚೆಗಳು ನಡೆದವು.
ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾದ ಶ್ರೀನಿವಾಸಯ್ಯ ಅವರು ಬರ್ಕ್ಲಿಯಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದರು. ಅವರು ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಶಾಲಾ ಶಿಕ್ಷಣ ಪಡೆದಿದ್ದರು.
ತಮ್ಮ ಲಿಂಕ್‌ಡಿನ್ ಪ್ರೊಫೈಲ್ ಪ್ರಕಾರ, ಹೈಪರ್‌ಲೂಪ್‌ಗಾಗಿ ಮೈಕ್ರೋಚಾನೆಲ್ ಕೂಲಿಂಗ್ ವ್ಯವಸ್ಥೆ ಮತ್ತು ಅದರ ವಿಧಾನವನ್ನು ಆವಿಷ್ಕರಿಸಿದ ಪೇಟೆಂಟ್ ಹೊಂದಿದ ಆರು ಜನರಲ್ಲಿ ಅವರು ಒಬ್ಬರಾಗಿದ್ದರು. ಚುರುಕು ಬುದ್ದಿಯ, ವಿನಯ, ಮೇಧಾವಿತ್ವ ಮತ್ತು ನಿಷ್ಠೆ ಹೊಂದಿದ ವ್ಯಕ್ತಿಯಾಗಿ ಪರಿಚಿತರಾಗಿದ್ದರು.
ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ಸರ್ಕಾರದ ಕ್ರಮಗಳೇನು?
ವಿದೇಶಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಲೋಕಸಭೆಯಲ್ಲಿ ಸಂಸದ ಅಸದುದ್ದೀನ್ ಒವೈಸಿ ಕೇಳಿದ ಪ್ರಶ್ನೆಗೆ ಉತ್ತರವಾಗಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ.
ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಮತ್ತು ದೂತಾವಾಸಗಳು ತಮ್ಮ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ನಿಯಮಿತ ಸಂಪರ್ಕದಲ್ಲಿರುತ್ತವೆ. ವಿದೇಶಗಳಿಗೆ ಆಗಮಿಸಿದ ಬಳಿಕ ಅವರಿಗೆ ಪೂರ್ವಾಭಿಮುಖತಾ ಕಾರ್ಯಕ್ರಮಗಳನ್ನು ನಡೆಸಿ, ಸಾಧ್ಯವಾದ ಸವಾಲುಗಳು, ಅಪಾಯಗಳು ಮತ್ತು ವಿದೇಶದಲ್ಲಿ ಅಧ್ಯಯನ ಮಾಡುವ ವೇಳೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ, ಅವಶ್ಯಕತೆ ಇದ್ದಾಗ ಸಲಹೆಗಳನ್ನು ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ವಿದೇಶಾಂಗ ಸಚಿವಾಲಯ ಸಹಕಾರ ಕೋರಿದ್ದ ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಾಜನೀಶ್ ಅವರು, ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಸಾಕೇತ್ ಶ್ರೀನಿವಾಸಯ್ಯ (22ವ) ಅವರನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದರು.
ಐಐಟಿ ಮದ್ರಾಸ್‌ನಲ್ಲಿ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದ್ದ ಬಳಿಕ, ಸಾಕೇತ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮಾಡಲು ಕಳೆದ ವರ್ಷ ಫೆಬ್ರವರಿಯಲ್ಲಿ ಅಮೆರಿಕಕ್ಕೆ ತೆರಳಿದ್ದರು.
Advertisement