

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂಬ ರಷ್ಯಾ ಆರೋಪವನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿ ಮಾಡಿದೆ. ಪುಟಿನ್ ಅವರನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದಾರೆ ಎಂಬುದು ಮಾಸ್ಕೋದ ಆರೋಪವಾಗಿದೆ.
ಪುಟಿನ್ ನಿವಾಸದ ಮೇಲೆ ಯಾವುದೇ ದಾಳಿ ನಡೆದಿರುವುದಕ್ಕೆ ಸೂಕ್ತ ಪುರಾವೆಗಳು ಸಿಕ್ಕಿಲ್ಲ ಎಂದು ಕೇಂದ್ರ ಗುಪ್ತಚರ ಏಜೆನ್ಸಿಯ (CIA) ವರದಿಗಳನ್ನು ಆಧರಿಸಿ ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು CIA ನಿರಾಕರಿಸಿದೆ.
ಪುಟಿನ್ ನಿವಾಸದಂತೆಯೇ ರಷ್ಯಾದಲ್ಲಿರುವ ಮಿಲಿಟರಿ ಕಟ್ಟಡಗಳನ್ನು ಹೊಡೆಯಲು ಉಕ್ರೇನ್ ಯೋಜಿಸಿತ್ತು ಎಂದು ಅಮೆರಿಕದ ಗುಪ್ತಚರ ಏಜೆನ್ಸಿ ನಿರ್ಧರಿಸಿತ್ತು. ಆದರೆ ಅದನ್ನು ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿರುವುದಾಗಿ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.
ಪುಟಿನ್ ನಿವಾಸದ ಮೇಲೆ ದಾಳಿ ನಡೆದಿದೆಯೇ ಎಂಬ ನ್ಯೂಯಾರ್ಕ್ ಪೋಸ್ಟ್ ಸಂಪಾದಕೀಯವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಟ್ರೂತ್ ಸೋಶಿಯಲ್ ನಲ್ಲಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಆರೋಪವನ್ನು ತಳ್ಳಿಹಾಕಿದ್ದಾರೆ.
ಈ ಪೋಸ್ಟ್ ಗೆ ಕೇಂದ್ರ ಗುಪ್ತಚರ ಏಜೆನ್ಸಿಯ ನಿರ್ದೇಶಕ ಜಾನ್ ರಾಟ್‌ಕ್ಲಿಫ್, ಪ್ರತಿಕ್ರಿಯಿಸಿದ್ದು, ಯಾವುದೇ ದಾಳಿ ನಡೆದಿಲ್ಲ ಎಂದಿದ್ದಾರೆ. ಯುಎಸ್ ಗುಪ್ತಚರ ಸಂಸ್ಥೆಗಳು ಸ್ಯಾಟಲೈಟ್ ಫೋಟೋಗಳು, ರಾಡಾರ್ ಕವರೇಜ್ ಮತ್ತಿತರ ಸಾಕ್ಷ್ಯಧಾರಗಳ ಮೂಲಕ ರಷ್ಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಪತ್ತೆ ಹಚ್ಚುತ್ತಿವೆ ಎಂದು WSJ ವರದಿ ಮಾಡಿದೆ.
Advertisement