

ವೆನೆಜುವೆಲಾ ಅಧ್ಯಕ್ಷನಿಗೆ ಪದೇ ಪದೇ ಎಚ್ಚರಿಕೆಗಳನ್ನು ಕೊಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ರಾತ್ರೋರಾತ್ರಿ ವಾಯುದಾಳಿಯನ್ನು ನಡೆಸಿದ್ದಾರೆ. ಶನಿವಾರ ನಸುಕಿನ ಜಾವ ವೆನೆಜುವೆಲಾ ಕಾಲಮಾನ 2 ಗಂಟೆಯ ವೇಳೆಗೆ ರಾಜಧಾನಿ ಕ್ಯಾರಕಾಸ್(Caracas) ಮೇಲೆ ಅಮೆರಿಕದ ವಾಯುಸೇನೆ ಏರ್‌ಸ್ಟ್ರೈಕ್ ನಡೆಸಿತ್ತು. ಸೂಪರ್‌ಸಾನಿಕ್ ವಿಮಾನಗಳ ಘರ್ಜನೆ ಇದ್ದಕ್ಕಿದ್ದಂತೆ ವೆನೆಜುವೆಲಾದ ಆಕಾಶದಲ್ಲಿ ಪ್ರತಿಧ್ವನಿಸಿತು. ಇತಿಹಾಸವು ಕೆಲವೇ ಕ್ಷಣಗಳಲ್ಲಿ ಬದಲಾಗಲಿದೆ ಎಂದು ಯಾರೂ ಊಹಿಸಲು ಸಾಧ್ಯವಾಗಲಿಲ್ಲ. ಅಮೆರಿಕ ದಾಳಿ ನಡೆಸಿದ ಬೆನ್ನಲ್ಲೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ದಿದೆ. ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿದ್ದಾಗಿ ಟ್ರಂಪ್ ದೃಢಪಡಿಸಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಶಿಯಲ್‌ನಲ್ಲಿ ಅಮೆರಿಕದ ಕಾರ್ಯಾಚರಣೆಯನ್ನು ದೃಢಪಡಿಸಿದರು. ಅಮೆರಿಕವು ವೆನೆಜುವೆಲಾದ ಮೇಲೆ ಪ್ರಮುಖ ದಾಳಿಯನ್ನು ನಡೆಸಿ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಏಜೆನ್ಸಿಗಳ ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಶನಿವಾರ ಮಧ್ಯರಾತ್ರಿಯ ಸ್ವಲ್ಪ ಸಮಯದ ನಂತರ, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸರಣಿ ಸ್ಫೋಟಗಳಿಂದ ನಡುಗಿತು. ಸ್ಥಳೀಯ ಸಮಯ ಬೆಳಗಿನ ಜಾವ 1:50ರ ಸುಮಾರಿಗೆ, ರಾಜಧಾನಿಯ ವಿವಿಧ ಭಾಗಗಳಲ್ಲಿ ಕನಿಷ್ಠ ಏಳು ದೊಡ್ಡ ಸ್ಫೋಟಗಳು ಕೇಳಿಬಂದವು. ವೆನೆಜುವೆಲಾದ ಮೇಲಿನ ಸಂಪೂರ್ಣ ದಾಳಿ ಸುಮಾರು 30 ನಿಮಿಷಗಳಲ್ಲೇ ನಡೆದು ಹೋಯಿತು ಎಂದು ವರದಿಯಾಗಿದೆ.
ಹಿಗುರೋಟ್ ವಿಮಾನ ನಿಲ್ದಾಣದಲ್ಲಿ ಭಾರಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದ ವಿಡಿಯೋಗಳು ವೈರಲ್ ಆಗಿವೆ. ಕಾರ್ಯಾಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ತಡೆಯಲು ಅಮೆರಿಕ ಈ ಹಿಂದೆ ವೆನೆಜುವೆಲಾದ ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ನಾಶಪಡಿಸಿತ್ತು ಎಂದು ನಂಬಲಾಗಿದೆ. ಕ್ಯಾರಕಾಸ್‌ನ ಅತಿದೊಡ್ಡ ಮಿಲಿಟರಿ ಸಂಕೀರ್ಣವಾದ ಫ್ಯುರ್ಟೆ ಟಿಯುನಾದಿಂದ ಹೊಗೆ ಮೇಲೇರುತ್ತಿರುವುದು ಕಂಡುಬಂದಿದೆ. ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡು ಅವ್ಯವಸ್ಥೆ ಸೃಷ್ಟಿಯಾಗಿದೆ.
ವೆನೆಜುವೆಲಾ ಸರ್ಕಾರ ಇದನ್ನು ಯುಎಸ್ ಸಾಮ್ರಾಜ್ಯಶಾಹಿಯ ದಾಳಿ ಎಂದು ಕರೆದಿದೆ. ಸಾರ್ವಜನಿಕರು ಬೀದಿಗಿಳಿಯುವಂತೆ ಮನವಿ ಮಾಡಿದೆ. ಆದಾಗ್ಯೂ, ಮಡುರೊರನ್ನು ಸೆರೆಹಿಡಿದಿರುವುದು ಅಲ್ಲಿನ ಅಧಿಕಾರದ ಸಮತೋಲನವನ್ನು ಸಂಪೂರ್ಣವಾಗಿ ಅಡ್ಡಿಪಡಿಸಿದೆ ಎಂದು ತೋರುತ್ತದೆ.
Advertisement