

ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಒಸ್ಮಾನ್ ಹಾದಿ ಅವರ ಪಕ್ಷ ಆತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪೊಲೀಸ್ ಚಾರ್ಜ್ ಶೀಟ್ ನ್ನು ತಿರಸ್ಕರಿಸಿದ್ದು, ಸರ್ಕಾರವೇ ಈ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದೆ ಎಂಬ ಗಂಭೀರ ಆರೋಪ ಮಾಡಿದೆ.
ನ್ಯಾಯವನ್ನು ಖಚಿತಪಡಿಸದಿದ್ದರೆ 'ರಕ್ತ ಸುರಿಸಿದವರು' 'ರಕ್ತವನ್ನು ತೆಗೆದುಕೊಳ್ಳುವಂತೆ' ಒತ್ತಾಯಿಸಲಾಗುವುದು ಎಂದು ಇಂಕ್ವಿಲಾಬ್ ಮೊಂಚೊ ಎಚ್ಚರಿಸಿದೆ ಎಂದು ಬಂಗಾಳಿ ದಿನಪತ್ರಿಕೆ ಪ್ರೋಥೋಮ್ ಅಲೋ ಬುಧವಾರ ವರದಿ ಮಾಡಿದೆ.
ಢಾಕಾ ಮೆಟ್ರೋಪಾಲಿಟನ್ ಪೊಲೀಸರ (ಡಿಎಂಪಿ) ಪತ್ತೇದಾರಿ ಶಾಖೆಯು ಮಂಗಳವಾರ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಶಂಕಿತ ಫೈಸಲ್ ಕರೀಮ್ ಮಸೂದ್ ಸೇರಿದಂತೆ 17 ಜನರ ವಿರುದ್ಧ ಔಪಚಾರಿಕ ಚಾರ್ಜ್ ಶೀಟ್ ದಾಖಲಿಸಿದೆ ಮತ್ತು ಅವಾಮಿ ಲೀಗ್ ನಾಮನಿರ್ದೇಶಿತ ವಾರ್ಡ್ ಕೌನ್ಸಿಲರ್ ತೈಜುಲ್ ಇಸ್ಲಾಂ ಚೌಧರಿ ಬಪ್ಪಿ ಅವರ ಆದೇಶದ ಮೇರೆಗೆ 'ರಾಜಕೀಯ ಸೇಡಿನ' ಪರಿಣಾಮವಾಗಿ ಹಾದಿಯನ್ನು ಕೊಲ್ಲಲಾಗಿದೆ ಎಂದು ಹೇಳಿದೆ.
ಇಂಕ್ವಿಲಾಬ್ ಮೊಂಚೊ ಸದಸ್ಯ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಜಾಬರ್, ವಾರ್ಡ್ ಕೌನ್ಸಿಲರ್‌ನ ಸೂಚನೆಯ ಮೇರೆಗೆ ಹಾದಿಯನ್ನು ಕೊಲೆ ಮಾಡಲಾಗಿದೆ ಎಂಬ ಹೇಳಿಕೆಯನ್ನು 'ಒಬ್ಬ ಹುಚ್ಚ ಕೂಡ ನಂಬುವುದಿಲ್ಲ' ಎಂದು ಹೇಳಿದ್ದಾರೆ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯನ್ನು ಪಕ್ಷ ಸ್ವೀಕರಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇಡೀ 'ಕ್ರಿಮಿನಲ್ ಸಿಂಡಿಕೇಟ್' ಹಾಗೂ 'ಸರ್ಕಾರ' ಈ ಹತ್ಯೆಯಲ್ಲಿ ಭಾಗಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
"ಹಾದಿ ಹತ್ಯೆಯ ಆರೋಪಿಗಳನ್ನು ನ್ಯಾಯಕ್ಕೆ ಒಳಪಡಿಸುವವರೆಗೆ, ನಮ್ಮ ಹೋರಾಟ ನಿಲ್ಲುವುದಿಲ್ಲ. ಅವರ ಹೆಸರುಗಳನ್ನು ಒಳಗೊಂಡಿರದ ಯಾವುದೇ ಚಾರ್ಜ್‌ಶೀಟ್ ನಮಗೆ ಸ್ವೀಕಾರಾರ್ಹವಲ್ಲ" ಎಂದು ಪಕ್ಷದ 'ನ್ಯಾಯಕ್ಕಾಗಿ ಮೆರವಣಿಗೆ' ಕಾರ್ಯಕ್ರಮದ ಮುಕ್ತಾಯದ ನಂತರ ಜಾಬರ್ ಹೇಳಿದರು.
ನ್ಯಾಯಕ್ಕಾಗಿ ತನ್ನ ಬೇಡಿಕೆಯನ್ನು ತಿಳಿಸಲು ಇಂಕ್ವಿಲಾಬ್ ಮೊಂಚೊ ಶಾಂತಿಯುತ ಕಾರ್ಯಕ್ರಮಗಳನ್ನು ನಡೆಸಿದೆ . ಆದರೆ ಸರ್ಕಾರ ಸಾರ್ವಜನಿಕ ಭಾವನೆಯನ್ನು ನಿರ್ಲಕ್ಷಿಸಿದೆ ಮತ್ತು 'ಜನರನ್ನು ಮೂರ್ಖರಂತೆ ನಡೆಸಿಕೊಂಡಿದೆ' ಎಂಬುದನ್ನು ಚಾರ್ಜ್ ಶೀಟ್ ತೋರಿಸಿದೆ ಎಂದು ಜಾಬರ್ ಆಕ್ರೋಶ ಹೊರಹಾಕಿದ್ದಾರೆ.
ಹಾದಿಯ ಹತ್ಯೆಗೆ ನ್ಯಾಯ ಸಿಗದಿದ್ದರೆ, ಅದರ ಪರಿಣಾಮಗಳನ್ನು ಜನರೇ ನಿರ್ಧರಿಸುತ್ತಾರೆ ಎಂದು ಜಾಬರ್ ಎಚ್ಚರಿಸಿದ್ದಾರೆ. "ಈ ಜನರು ರಕ್ತ ಚೆಲ್ಲಿದ್ದಾರೆ; ಅಗತ್ಯವಿದ್ದರೆ, ಅವರು ರಕ್ತವನ್ನು ಸಹ ತೆಗೆದುಕೊಳ್ಳುತ್ತಾರೆ" ಎಂದು ಜಾಬರ್ ಹೇಳಿದ್ದಾರೆ. ಇಂಕ್ವಿಲಾಬ್ ಮೊಂಚೊ ವಕ್ತಾರ ಹಾದಿ(32), ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ ಜುಲೈ-ಆಗಸ್ಟ್ 2024 ರ ಸಾಮೂಹಿಕ ಪ್ರತಿಭಟನೆಯ ಸಮಯದಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆ ಪಡೆದಿದ್ದರು. ಡಿಸೆಂಬರ್ 12 ರಂದು ಢಾಕಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಆತನ ತಲೆಗೆ ಗುಂಡು ಹಾರಿಸಲಾಗಿತ್ತು.
ಫೆಬ್ರವರಿ 12 ರಲ್ಲಿ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿದ್ದ ಹಾದಿ ಸಂಸದೀಯ ಅಭ್ಯರ್ಥಿಯೂ ಆಗಿದ್ದರು. ಹಾದಿ ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಯಿತು, ಚಿಕಿತ್ಸೆ ಫಲಿಸದೇ ಡಿಸೆಂಬರ್ 18 ರಂದು ಹಾದಿ ಸಾವನ್ನಪ್ಪಿದ್ದರು.
Advertisement