

ಟೆಹರಾನ್: ಇತ್ತೀಚಿಗೆ ಇರಾನ್ ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಸಾವಿರಾರು ಇರಾನಿಯನ್ನರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಂಚಕ, ದ್ರೋಹಿ ಎಂದು ಹೇಳುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಟ್ರಂಪ್ ಅವರ ಹೇಳೋದು ಒಂದು ಮಾಡೋದು ಇನ್ನೊಂದು ಕೆಲಸದ ವಿರುದ್ಧ ಸಿಡಿದೆದಿದ್ದಾರೆ.
ಇರಾನ್ ನಲ್ಲಿ ಪರಿಸ್ಥಿತಿ ಹದಗೆಡುವ ಮುನ್ನ ಸಾರ್ವಜನಿಕವಾಗಿ ಇರಾನ್ ಪ್ರತಿಭಟನಾಕಾರರನ್ನು ಪ್ರೋತ್ಸಾಹಿಸಿದ ಟ್ರಂಪ್, ಟೆಹರಾನ್ ಗೆ ವಾರ್ನಿಂಗ್ ನೀಡಿದ್ದರು.ಅಲ್ಲದೇ ನೆರವಿನ ಭರವಸೆ ನೀಡಿದ್ದರು. ತದನಂತರ ಶಾಂತಿಯುತ ಪ್ರತಿಭಟನಾಕಾರರಿಗೆ ಹಾನಿಯಾದರೆ ಅಮೆರಿಕ ಕೂಡಲೇ ಕ್ರಮ ಕೈಗೊಳ್ಳಲು ಸಜ್ಜಾಗಿದೆ ಅಂತಾ ವಾರ್ನಿಂಗ್ ನೀಡಿದ್ದರು. ಇಂತಹ ಮಾತುಗಳು ಬಹುಶಃ ಮಿಲಿಟರಿ ಹಸ್ತಕ್ಷೇಪದ ಮಾತುಗಳಿರಬಹುದು ಎಂದು ಅನೇಕ ಇರಾನಿಯನ್ನರು ಅಂದುಕೊಂಡಿದ್ದಾರೆ.
ಪ್ರತಿಭಟನಾಕಾರರು ರಸ್ತೆಗಿಳಿಯುತ್ತಿದ್ದಂತೆಯೇ ಇರಾನ್ ರಾಷ್ಟ್ರ ಸಂವಹನ ಕಡಿತ, ಭದ್ರತಾ ಪಡೆಗಳ ನಿಯೋಜನೆ, ಲಾಠಿಚಾರ್ಜ್ ನಂತರ ಕ್ರಮಗಳೊಂದಿಗೆ ಪ್ರತಿಕ್ರಿಯಿಸಿದೆ. ದೇಶಾದ್ಯಂತ ಗುಂಡಿನ ದಾಳಿ, ಮೆಷಿನ್-ಗನ್ ದಾಳಿ ನಡೆದಿದ್ದು, ಹಲವರ ಸಾವು, ನಾಪತ್ತೆ ವರದಿಯಾಗಿದೆ.
ಅಮೆರಿಕ ವಾಯುನೆಲೆಯನ್ನು ಕೆಲವು ಸಿಬ್ಬಂದಿಗಳು ತೊರೆಯುವಂತೆ ಪೆಂಟಗಾನ್ ಆದೇಶಿಸಿದೆ ಎಂಬ ಸುದ್ದಿಯು ಉಲ್ಟಾ ಹೊಡೆದಿದೆ. ಹತ್ಯೆಗಳು ಮತ್ತು ಮರಣದಂಡನೆಗಳನ್ನು ನಿಲ್ಲಿಸುವುದಾಗಿ ಇರಾನ್ ಭರವಸೆ ನೀಡಿದ್ದು, ಮುಂದೆ ಅಮೆರಿಕ ಮಿಲಿಟರಿ ಕ್ರಮ ನಡೆಸುವುದಿಲ್ಲ ಎಂದು ಟ್ರಂಪ್ ಹೇಳಿದ್ದು, ಅಮೆರಿಕ ಮಧ್ಯಪ್ರವೇಶಿಸುತ್ತದೆ ಎಂದು ನಂಬಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಹೋರಾಡುತ್ತಿದ್ದ ಪ್ರತಿಭಟನಾಕಾರರಿಗೆ ಇದು ಆಘಾತ ಮೂಡಿಸಿತು.
"15,000 ಜನರ ಸಾವಿಗೆ ಟ್ರಂಪ್ ಹೊಣೆಗಾರರಾಗಿದ್ದಾರೆ. ಏಕೆಂದರೆ ಅಮೆರಿಕ ದಾಳಿಗೆ ಸಿದ್ದವಾಗಿದೆ ಎಂಬ ಟ್ರಂಪ್ ಪೋಸ್ಟ್ ನೋಡಿ ಅನೇಕ ಮಂದಿ ಬೀದಿಗಿಳಿದಿದ್ದರು. ಆದರೆ ಇರಾನ್ನಿಯನ್ನರಿಗೆ ಈ ರೀತಿ ದ್ರೋಹ ಮಾಡಲು ಇಸ್ಲಾಮಿಕ್ ಗಣರಾಜ್ಯದೊಂದಿಗೆ ಯುಎಸ್ ಒಪ್ಪಂದ ಮಾಡಿಕೊಂಡಿರಬೇಕು ಎಂದು ಟೆಹರಾನ್ ನ ಉದ್ಯಮಿಯೊಬ್ಬರು TIME ಮ್ಯಾಗಜಿನ್ ಗೆ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ನಮ್ಮನ್ನು ವಂಚಿಸಿದ್ದು, ಮೋಸಗೊಳಿಸಿದ್ದಾರೆ ಎಂಬುದು ಇರಾನಿಯನ್ನರ ಭಾವನೆಯಾಗಿದೆ ಎಂದು ಅವರು ತಿಳಿಸಿದರು.
Advertisement