

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅವರು ಅಧ್ಯಕ್ಷರಾಗಿರುವ ಗಾಜಾ ಶಾಂತಿ ಮಂಡಳಿಯ ಭಾಗವಾಗಲು ಭಾರತವನ್ನು ಆಹ್ವಾನಿಸಿದ್ದಾರೆ. ಗಾಜಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಹಾಗೂ ಜಾಗತಿಕ ಸಂಘರ್ಷ ಶಮನಗೊಳಿಸುವ ನಿಟ್ಟಿನಲ್ಲಿ ಗಾಜಾ ಶಾಂತಿ ಮಂಡಳಿ ಸ್ಥಾಪಿಸಲಾಗುತ್ತಿದೆ.
ಮೋದಿಗೆ ಟ್ರಂಪ್ ಬರೆದಿರುವ ಪತ್ರವನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಗಟ್ಟಿಗೊಳಿಸುವ ನಿರ್ಣಾಯಕ ಐತಿಹಾಸಿಕ ಪ್ರಯತ್ನದಲ್ಲಿ ತಮ್ಮೊಂದಿಗೆ ಸೇರಲು ಮತ್ತು "ಜಾಗತಿಕ ಸಂಘರ್ಷವನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸ ವಿಧಾನವನ್ನು ಪ್ರಾರಂಭಿಸಲು ಪ್ರಧಾನಿಯನ್ನು ಆಹ್ವಾನಿಸುವುದು ಅವರಿಗೆ ಸಿಕ್ಕ ದೊಡ್ಡ ಗೌರವ ಎಂದು ಟ್ರಂಪ್ ಪತ್ರದಲ್ಲಿ ಹೇಳಿದ್ದಾರೆ.
ಗಾಜಾಕ್ಕೆ ಶಾಶ್ವತ ಶಾಂತಿಯನ್ನು ತರಲು" ಶಾಂತಿ ಮಂಡಳಿಯಲ್ಲಿ ಭಾಗವಹಿಸಲು ಮೋದಿಯವರಿಗೆ ಟ್ರಂಪ್ ಆಹ್ವಾನಿಸಿರುವುದು ಅವರಿಗೆ ಸಿಕ್ಕ ಗೌರವವಾಗಿದೆ. ಮಂಡಳಿಯು ಸ್ಥಿರತೆ ಮತ್ತು ಸಮೃದ್ಧಿಯನ್ನು ಸಾಧಿಸಲು ಪರಿಣಾಮಕಾರಿ ಆಡಳಿತವನ್ನು ಬೆಂಬಲಿಸುತ್ತದೆ ಎಂದು ಸೆರ್ಗಿಯೋ ಗೋರ್ ಹೇಳಿದ್ದಾರೆ.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದ ಭಾಗವಾಗಿ ಗಾಜಾ ಶಾಂತಿ ಮಂಡಳಿ ಸ್ಥಾಪಿಸಲಾಗುತ್ತಿದೆ.
Advertisement