

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದಾರೆ. ಸುಮಾರು ಏಳು ವರ್ಷಗಳ ಬಳಿಕ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ, ಹೀಗಾಗಿ ಸಹಜವಾಗಿ ಕುತೂಹಲ ಕೆರಳಿಸಿದೆ.
ಹಲವು ವರ್ಷಗಳ ರಾಜತಾಂತ್ರಿಕ ಮತ್ತು ಸೇನಾ ಬಿಕ್ಕಟ್ಟಿನ ಬಳಿಕ ಭಾರತ-ಚೀನಾ ಸಂಬಂಧಗಳನ್ನು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಕ್ಸಿ ಜಿನ್ ಪಿಂಗ್ ಅವರ ಭಾರತ ಭೇಟಿ ಮಹತ್ವ ಪಡೆದುಕೊಂಡಿದೆ.
ಶೃಂಗಸಭೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕ್ಸಿ ಜಿನ್ ಪಿಂಗ್ ಅವರು ಕುತೂಹಲ ಕೆರಳಿಸಿರುವ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಬಲಪಡಿಸುವುದು ಹಾಗೂ ಬಾಕಿ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮಾತುಕತೆ ನಡೆಯುವ ನಿರೀಕ್ಷೆಯಿದೆ.
2019ರಲ್ಲಿ ಮಾಮಲ್ಲಪುರಂನಲ್ಲಿ ಮೋದಿ ಅವರೊಂದಿಗೆ ಅನೌಪಚಾರಿಕ ಶೃಂಗಸಭೆ ನಡೆಸಿದ ಬಳಿಕ ಕ್ಸಿ ಜಿನ್ ಪಿಂಗ್ ಭಾರತಕ್ಕೆ ಮರಳುತ್ತಿರುವುದು ಈ ಭೇಟಿಯ ವಿಶೇಷತೆಯಾಗಿದೆ. 2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಮಾರಣಾಂತಿಕ ಗಡಿ ಸಂಘರ್ಷದ ಬಳಿಕ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದವು. ಈ ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರು ಮೃತಪಟ್ಟಿದ್ದು, ವಾಸ್ತವಿಕ ನಿಯಂತ್ರಣ ರೇಖೆ (LAC) ಉದ್ದಕ್ಕೂ ದೀರ್ಘಕಾಲದ ಸೇನಾ ಬಿಕ್ಕಟ್ಟು ಉಂಟಾಗಿತ್ತು.
ಆ ಬಳಿಕ, ವಿವಾದಿತ ಗಡಿಯ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಕಡಿಮೆ ಮಾಡಲು ಭಾರತ ಮತ್ತು ಚೀನಾ ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳ ವಿಚಾರದಲ್ಲಿ ಎರಡೂ ದೇಶಗಳು ಎಚ್ಚರಿಕೆಯ ನಿಲುವನ್ನು ಮುಂದುವರಿಸಿವೆ.
ಕ್ಸಿ ಜಿನ್ ಪಿಂಗ್ ಅವರ ನಿಯೋಗದಲ್ಲಿ ಅವರ ಆಪ್ತ ಸಹವರ್ತಿ ಕೈ ಕಿ ಕೂಡ ಇದ್ದಾರೆ. ಅವರು ಚೀನಾದ ಕಮ್ಯುನಿಸ್ಟ್ ಪಕ್ಷದ (CPC) ಪೊಲಿಟ್‌ಬ್ಯೂರೊದ ಪ್ರಭಾವಿ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದು, CPC ಕೇಂದ್ರ ಸಮಿತಿಯ ಸಾಮಾನ್ಯ ಕಚೇರಿಯ ನಿರ್ದೇಶಕರಾಗಿದ್ದಾರೆ. ಚೀನಾದ ವಿದೇಶಾಂಗ ಸಚಿವ ಹಾಗೂ CPC ಕೇಂದ್ರ ಸಮಿತಿಯ ಪೊಲಿಟ್‌ಬ್ಯೂರೊ ಸದಸ್ಯ ವಾಂಗ್ ಯಿ ಕೂಡ ನಿಯೋಗದಲ್ಲಿದ್ದಾರೆ.
ಮೋದಿ-ಕ್ಸಿ ಭೇಟಿಯನ್ನು ಚೀನಾ ಹೇಗೆ ನೋಡುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್, ಕಝಾನ್ ಮತ್ತು ಟಿಯಾಂಜಿನ್‌ನಲ್ಲಿ ನಡೆದ ಭೇಟಿಗಳ ಬಳಿಕ ಸತತ ಮೂರನೇ ವರ್ಷ ಉಭಯ ನಾಯಕರು ಭೇಟಿಯಾಗುತ್ತಿದ್ದಾರೆ ಎಂದು ಹೇಳಿದರು.
ಉಭಯ ನಾಯಕರ ಕಾರ್ಯತಂತ್ರದ ಮಾರ್ಗದರ್ಶನವನ್ನು ಅನುಷ್ಠಾನಗೊಳಿಸಲು, ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ನಿರ್ವಹಿಸಲು, ಸಂವಹನವನ್ನು ಹೆಚ್ಚಿಸಲು, ಸಹಕಾರವನ್ನು ಬಲಪಡಿಸಲು ಹಾಗೂ ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲಿದೆ.
ಉತ್ತಮ ನೆರೆಹೊರೆಯ ಸಂಬಂಧ ಹೊಂದಿರುವ ಸ್ನೇಹಿತರು ಮತ್ತು ಪರಸ್ಪರ ಯಶಸ್ಸಿಗೆ ನೆರವಾಗುವ ಪಾಲುದಾರರಾಗಲು ನಾವು ಬಯಸುತ್ತೇವೆ ಎಂದು ಹೇಳಿದರು. ಬ್ರಿಕ್ಸ್ ಶೃಂಗಸಭೆಯು ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಒಗ್ಗಟ್ಟು ಹಾಗೂ ಸಹಕಾರಕ್ಕೆ ಪ್ರಮುಖ ವೇದಿಕೆಯಾಗಿದೆ ಎಂದು ಮಾವೊ ಹೇಳಿದರು.
ಮುಂಬರುವ ಶೃಂಗಸಭೆಯಲ್ಲಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಪ್ರಸಕ್ತ ಅಂತಾರಾಷ್ಟ್ರೀಯ ಪರಿಸ್ಥಿತಿ, ಬ್ರಿಕ್ಸ್ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪ್ರಾಯೋಗಿಕ ಸಹಕಾರವನ್ನು ಮತ್ತಷ್ಟು ಆಳಗೊಳಿಸುವುದು ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಇತರ ರಾಷ್ಟ್ರಗಳ ನಾಯಕರೊಂದಿಗೆ ಅವರು ಆಳವಾದ ಚರ್ಚೆ ನಡೆಸಲಿದ್ದಾರೆ ಎಂದು ಮಾವೊ ಹೇಳಿದರು.
ಹೆಚ್ಚಿನ ಗುಣಮಟ್ಟದ ಬ್ರಿಕ್ಸ್ ಸಹಕಾರದ ಅಭಿವೃದ್ಧಿಗೆ ದಿಕ್ಕು ನೀಡುವ ಪ್ರಮುಖ ಉಪಕ್ರಮಗಳು ಮತ್ತು ಪ್ರಸ್ತಾವನೆಗಳನ್ನು ಚೀನಾ ಮುಂದಿಡಲಿದೆ ಎಂದು ತಿಳಿಸಿದರು.
ಮಾನವಕುಲಕ್ಕೆ ಸಾಮಾನ್ಯ ಭವಿಷ್ಯ ಹೊಂದಿರುವ ಸಮುದಾಯ ನಿರ್ಮಾಣದ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಹೆಚ್ಚಿನ ಸಹಕಾರದಲ್ಲಿ ಸ್ಥಿರ ಹಾಗೂ ನಿರಂತರ ಪ್ರಗತಿಗಾಗಿ ಸಹ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ ಎಂದು ಮಾವೊ ಹೇಳಿದರು.
ಇರಾನ್-ಅಮೆರಿಕ ಸಂಘರ್ಷ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ನಡೆಯುತ್ತಿರುವ ದೆಹಲಿ ಶೃಂಗಸಭೆಯ ಮಹತ್ವದ ಕುರಿತು ಮಾತನಾಡಿದ ಅವರು, ಭದ್ರತೆಗೆ ಸಾಮಾನ್ಯ, ಸಮಗ್ರ, ಸಹಕಾರಾತ್ಮಕ ಮತ್ತು ಸುಸ್ಥಿರವಾದ ವಿಧಾನವನ್ನು ಚೀನಾ ಪ್ರತಿಪಾದಿಸುತ್ತದೆ ಎಂದರು.
ಸಂವಾದದ ಮೂಲಕ ಸಂಘರ್ಷದ ಕೇಂದ್ರಬಿಂದುಗಳಲ್ಲಿರುವ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಸಂವಾದ ಮತ್ತು ಮಾತುಕತೆಯನ್ನು ಉತ್ತೇಜಿಸಲು ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸ್ಥಿರತೆಯನ್ನು ಜಂಟಿಯಾಗಿ ಕಾಪಾಡಲು ಬ್ರಿಕ್ಸ್ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಕ್ಸಿ ಅವರ ಭಾಗವಹಿಸುವಿಕೆ ಹಾಗೂ ಮೋದಿ ಅವರೊಂದಿಗಿನ ಭೇಟಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಇತ್ತೀಚೆಗೆ ಸುಧಾರಿಸುತ್ತಿರುವ ಭಾರತ-ಚೀನಾ ಸಂಬಂಧಗಳು ಮತ್ತಷ್ಟು ದೀರ್ಘಕಾಲೀನ ಸುಧಾರಣೆಯತ್ತ ಸಾಗಲಿವೆಯೇ ಎಂಬುದಕ್ಕೆ ಈ ಭೇಟಿ ಸೂಚನೆ ನೀಡುವ ನಿರೀಕ್ಷೆಯಿದೆ.
18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳ ನಾಯಕರು ಜಾಗತಿಕ ಆರ್ಥಿಕ ಸಹಕಾರ, ಅಭಿವೃದ್ಧಿ, ಅಂತಾರಾಷ್ಟ್ರೀಯ ಭದ್ರತೆ ಸೇರಿದಂತೆ ಪ್ರಮುಖ ಭೌಗೋಳಿಕ-ರಾಜಕೀಯ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿದ್ದ ಬ್ರಿಕ್ಸ್ 2024ರಲ್ಲಿ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾವನ್ನು ಸೇರ್ಪಡೆಗೊಳಿಸುವ ಮೂಲಕ ವಿಸ್ತರಣೆಯಾಯಿತು. 2025ರಲ್ಲಿ ಇಂಡೋನೇಷ್ಯಾ ಕೂಡ ಗುಂಪಿಗೆ ಸೇರ್ಪಡೆಯಾಯಿತು.
ಬೆಲಾರಸ್, ಬೊಲಿವಿಯಾ, ಕಜಕಿಸ್ತಾನ, ಕ್ಯೂಬಾ, ಮಲೇಷ್ಯಾ, ನೈಜೀರಿಯಾ, ಥಾಯ್ಲೆಂಡ್, ಉಗಾಂಡಾ, ಉಜ್ಬೇಕಿಸ್ತಾನ ಮತ್ತು ವಿಯೆಟ್ನಾಂ ಕಳೆದ ವರ್ಷ ಬ್ರಿಕ್ಸ್ ಪಾಲುದಾರ ರಾಷ್ಟ್ರಗಳಾದವು.
ಭಾರತ ಬ್ರಿಕ್ಸ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿದ್ದು, 2012, 2016 ಮತ್ತು 2021ರಲ್ಲಿ ಮೂರು ಬಾರಿ ಅಧ್ಯಕ್ಷ ಸ್ಥಾನ ವಹಿಸಿದೆ. ಈ ವರ್ಷದ ಜನವರಿ 1ರಂದು ಭಾರತ ನಾಲ್ಕನೇ ಬಾರಿಗೆ ಬ್ರಿಕ್ಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತು.
2026ರಲ್ಲಿ ಬ್ರಿಕ್ಸ್ ಸ್ಥಾಪನೆಯಾಗಿ 20 ವರ್ಷಗಳು ಪೂರ್ಣಗೊಳ್ಳುತ್ತಿರುವುದು ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಈ ಶೃಂಗಸಭೆಯ ಬಳಿಕ ಬ್ರಿಕ್ಸ್‌ನ ಸರದಿಯ ಅಧ್ಯಕ್ಷ ಸ್ಥಾನವನ್ನು ಚೀನಾ ವಹಿಸಿಕೊಳ್ಳಲಿದೆ.