

ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದ 'ಸಮಸಾಂಪ್ರತಿ' ನಾಟಕ ತಂಡದ ರೂವಾರಿ ಮೂರ್ತಿ ದೇರಾಜೆ. 28 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು...
ಮಕ್ಕಳಲ್ಲಿನ ಕುತೂಹಲ, ತುಂಟತನ, ಬೆರಗು, ಮುಗ್ಧತೆ, ಸಂಭ್ರಮಗಳೇ ಮಕ್ಕಳ ನಾಟಕದ ಜೀವಾಳ. ಇವೆಲ್ಲವನ್ನೂ ಪ್ರಾಯೋಗಿಕವಾಗಿ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದ 'ಸಮಸಾಂಪ್ರತಿ' ತಂಡದಲ್ಲಿ ಕಾಣಬಹುದು. ಈ ತಂಡದ ರೂವಾರಿ ಮೂರ್ತಿ ದೇರಾಜೆ. 28 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಪ್ರದರ್ಶನಕ್ಕಿಂತಲೂ ಪ್ರಕ್ರಿಯೆ ಮುಖ್ಯ ಎಂಬುದು ದೇರಾಜೆ ನಂಬಿಕೆ. ರೆಡಿಮೇಡ್ ಕಥೆಗಳನ್ನು ಇವರು ಮುಟ್ಟುವುದಕ್ಕೆ ಹೋಗುವುದಿಲ್ಲ. ಪುಟ್ಟ ಮಕ್ಕಳ ವಿಚಿತ್ರ, ವಿಶಿಷ್ಟವಾದ ಕಲ್ಪನೆಗಳನ್ನು ಪ್ರಚೋದಿಸುತ್ತಾ ಅವರ ನಿಜವಾದ ಸ್ವಂತಿಕೆಯನ್ನು ಹೊರಗೆಳೆಯಲೆತ್ನಿಸುತ್ತಾರೆ. ದೇರಾಜೆ ಅವರ ತಂದೆ ಸೀತಾರಾಮಯ್ಯ ಸಾಹಿತ್ಯ ಮತ್ತು ಯಕ್ಷಗಾನ ತಾಳಮದ್ದಳೆ ರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ದೇರಾಜೆ ಹುಟ್ಟಿದ್ದು ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ. ಚಿಕ್ಕಂದಿನಲ್ಲೇ ಯಕ್ಷಗಾನದ ಸಂಪರ್ಕ. ತೆಂಕು ತಿಟ್ಟಿನ ಅಗ್ರಮಾನ್ಯ ಕಲಾವಿದ ಕುರಿಯ ವಿಠಲ ಶಾಸ್ತ್ರಿ ಒಡನಾಟ ಲಭಿಸಿತ್ತು. 'ಶಾಸ್ತ್ರಿಯವರ ಆಂಗಿಕ ಅಭಿನಯ, ತನ್ನ ತಂದೆಯ ವಾಚಿಕ ಅಭಿನಯ ಇದುವೇ ತಮ್ಮನ್ನು ನಾಟಕ ರಂಗಕ್ಕೆ ಸೆಳೆದಿರಬೇಕು' ಎನ್ನುತ್ತಾರೆ ದೇರಾಜೆ.
ರಂಗಾಯಣದಲ್ಲೂ ಸಾಧನೆ
ಮೈಸೂರಿನ ರಂಗಾಯಣದ ಚಿಣ್ಣರ ಮೇಳದಲ್ಲಿ 3 ನಾಟಕಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ಇವರದ್ದು. ಹಲವು ನಾಟಕ ಕೃತಿಗಳನ್ನೂ ರಚಿಸಿದ್ದಾರೆ. 'ಕಪ್ಪು ಕಾಗೆಯ ಹಾಡು' ಮತ್ತು 'ಗುಡು ಗುಡು ಗುಮ್ಮಟ ದೇವರು' ಈಗಾಗಲೇ ಪುಸ್ತಕ ರೂಪ ಪಡೆದು, ನಿರ್ದೇಶನವನ್ನೂ ಕಂಡಿದೆ. 'ರಾಮಧಾನ್ಯ ಚರಿತೆ', 'ನನ್ನ ಗೋಪಾಲ', 'ಪುಣ್ಯಕೋಟಿ ಗೋವಿನ ಹಾಡು', 'ಬಕಾಸುರ ಬೆಟ್ಟ', 'ಬೌಬೌ ಟ್ರ್ಟ್ರ್', 'ಕಪ್ಪು ಕಾಗೆಯ ಹಾಡು', 'ಗುಡುಗುಡು ಗುಮ್ಮಟ ದೇವರು', 'ನಕ್ಷತ್ರಗಳಾಚೆ', 'ಬಾ... ಕೃಷ್ಣ... ಒಮ್ಮೆ... ಕೊಳಲನೂದು', 'ರಾಮಣ್ಣನ ಕತೆ', 'ಹುಣ್ಣಿಮೆ ಅಜ್ಜ ಬಂದಾ'... ಇನ್ನಿತರ ಮಕ್ಕಳ ನಾಟಕಗಳು ಇವರಿಗೆ ಹೆಸರು ತಂದುಕೊಟ್ಟವು.
ಜೊತೆಗಾರರ ಸಾಥ್
ಇವರೊಂದಿಗೆ ಹೆಚ್ಚಿನ ನಾಟಕಗಳಲ್ಲಿ ಗಾಯಕರಾದ ಶಂಕರ ಪ್ರಸಾದ್ ಮತ್ತು ಚಿತ್ರಕಲಾವಿದ ದಿ. ಸುರೇಶ್ ಹಂದಾಡಿ ರಂಗ ಸಹಕಾರ ನೀಡಿದ್ದಾರೆ. ನಾಟಕ ಕಟ್ಟುವಲ್ಲಿ ಸಹಕರಿಸುವ ಇವರ ಮಗ ಭಾರವಿ ದೇರಾಜೆ ಉತ್ತಮ ತಬಲ, ಡೋಲಕ್, ಜ್ಯಾಸ್ ಡ್ರಮ್ಸ್ ಮೊದಲಾದ ವಾದ್ಯ ನಿಪುಣ. ಕಿರಿಯ ಮಗ ಪಾಣಿನಿ ದೇರಾಜೆ ಗಿಟಾರ್ ಮತ್ತು ಕೀ ಬೋರ್ಡ್ ನಿಪುಣ. ಅಳಿಯ ಜಗತ್ಪ್ರಸಿದ್ಧ ಜಾದೂಗಾರ ಜ್ಯೂನಿಯರ್ ಶಂಕರ್ ಮತ್ತು ರಂಗಾಯಣದ ಫೊಟೋಗ್ರಾಫರ್ ಆಗಿದ್ದ ಶ್ಯಾಮ್ ಪ್ರಸಾದ್ ಇವರ ನಾಟಕದ ಬೆಳಕು ವಿನ್ಯಾಸಕಾರರು. ಪತ್ನಿ ಸುಮತಿ, ಮಗಳು ಮೈಥಿಲಿ ಜ್ಯೂನಿಯರ್ ಶಂಕರ್ ಸೊಸೆಯಂದಿರಾದ ಯಶಸ್ವಿನಿ ಭಾರವಿ, ಸುಮಾ ಪಾಣಿನಿ, ತಂಗಿ ಇಂದಿರಾಜಾನಕಿ ಶರ್ಮ ಇವರೆಲ್ಲ ನಾಟಕದ ಹಾಗೂ ರಂಗ ಗೀತೆಗಳ ಗಾಯಕಿಯರು. ಸುಧೀರ್ ಬಾಳೆಪುಣಿ, ಜಗನ್ನಾತ್ ಅರಿಯಡ್ಕ, ಶ್ಯಾಂ ಕುಶಲ್, ಜಯರಾಂ ಇವರೆಲ್ಲಾ ರಂಗಪರಿಕರ, ಪ್ರಸಾಧನಗಳಲ್ಲಿ ಸಹಕರಿಸುವವರು.
ಸುಮಾರು 28 ವರ್ಷಗಳ ಹಿಂದೆ ಹುಟ್ಟಿಕೊಂಡ ಈ ಬಳಗ, ಮಕ್ಕಳೊಂದಿಗೆ ಒಡನಾಡುತ್ತಾ, ಚಟುವಟಿಕೆಯನ್ನು ಮಕ್ಕಳಿಗೆ ಆಟವಾಗಿಸಿ, ಮಕ್ಕಳ ಮೂಲಕವೇ ಮಾತು, ಚಲನೆ ಹುಟ್ಟಿಕೊಂಡು, ಒಂದಷ್ಟು ಮಕ್ಕಳ ನಾಟಕ ಸಿದ್ಧಗೊಂಡಿವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಾಟಕ ತಯಾರಿ- ಪ್ರದರ್ಶನ ಇವರ ವಿಶೇಷ.
ಇತರ ಚಟುವಟಿಕೆ
ರಂಗನಾಟಕ ಶಿಬಿರ, ಚಿತ್ರ, ಮುಖವಾಡ, ಬೊಂಬೆ ತಯಾರಿ, ಕರಕುಶಲ ವಸ್ತುಗಳು, ತ್ಯಾಜ್ಯಗಳಿಂದ ಕಲಾಕೃತಿ ನಿರ್ಮಾಣ, ಸರಳ ಜಾದೂ ಇತ್ಯಾದಿ ಶಿಬಿರಗಳನ್ನೂ ಸಂಯೋಜಿಸುತ್ತಿದೆ. ಮೂರ್ತಿ ದೇರಾಜೆ ಕರ್ನಾಟಕ ನಾಟಕ ಅಕಾಡೆಮಿಯ ಸುವರ್ಣ ರಂಗಭೂಮಿ ಪ್ರಶಸ್ತಿ ಪುರಸ್ಕೃತರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದಿಂದ ಸನ್ಮಾನಿತರು. ದೇರಾಜೆ ಸಂಪರ್ಕ: 9448239519.
- ಉದಯ್
udayvitla@gmail.com