

ಸರಿದು ಹೋಗುತ್ತಿರುವ ಕನ್ನಡದ ಅಭಿಮಾನದ ಹಾಗೂ ಅಭಿಮಾನಿಗಳ ಮಧ್ಯ ಇಳಿಯ ವಯಸ್ಸಿನಲ್ಲೂ ಕನ್ನಡ ಧ್ವಜ ಹಾರಿಸುತ್ತಿರುವ ಮಂಕಾಳಿ ಅಜ್ಜಿಯನ್ನು ಯಾರೂ ಗುರುತಿಸುತ್ತಿಲ್ಲ. ಇಂಥ ಗಮಕಿ ಎಲ್ಲಿ ಸಿಕ್ಕಾರು?
ಶಾಲೆಯ ಬೆಂಚಿನ ಮೇಲೆ ಬೆಪ್ಪನೆ ಕೂತು ಕಲಿತ ಸರ್ವಜ್ಞನ ಪದಗಳು, ಹಳೆಗನ್ನಡ ಕಾವ್ಯಗಳು, ಜಾನಪದದ ಪದ್ಯಗಳು ಇನ್ನೂ ನಿಮಗೆ ನೆನಪಿದೆಯಾ? ಹಾಗೆ ನೆನಪಿದ್ದರೆ ಒಂದೆರಡು ಸಾಲುಗಳನ್ನು ಉದ್ಧರಿಸಿ ನೋಡೋಣ... ಬಹುಶಃ ಸಾಧ್ಯವಿಲ್ಲ. ಆದರೆ, 73 ವಯಸ್ಸಿನ ತರಕಾರಿ ಮಾರುವ ಅಜ್ಜಿ ಹಳೆಗನ್ನಡದ ಕಾವ್ಯಗೋಷ್ಠಿಯನ್ನೇ ಮಾಡಿಬಿಡುತ್ತಾಳೆ!
ಗೋಕರ್ಣ ಸಮೀಪದ ಬಾವಿಕೊಡ್ಲ ಗ್ರಾಮದ ಈ ಅಜ್ಜಿಯ ಹೆಸರು ಮಂಕಾಳಿ. ಈಕೆಯ ಬಾಯಿಯಿಂದ ವಚನಗಳು, ಹಳೆಗನ್ನಡ ಕಾವ್ಯಗಳು, ಜನಪದ ಗೀತೆಗಳು ಸುಲಲಿತವಾಗಿ ಹೊರಬೀಳುತ್ತವೆ. ಅದಲ್ಲದೆ, ವಚನಗಳ ಸಂದರ್ಭೋಚಿತ ವಿವರಣೆ ನೀಡುವ ಸಾಮರ್ಥ್ಯವೂ ಈಕೆಗಿದೆ. ಅಂದಹಾಗೆ, ಈ ಅಜ್ಜಿ ಓದಿದ್ದು ಕೇವಲ ನಾಲ್ಕನೇ ತರಗತಿ.
1943ರಲ್ಲಿ ಹುಟ್ಟಿದ ಈ ಅಜ್ಜಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷ ಶಾಲೆಗೆ ಸೇರಿದ್ದಂತೆ. ಆಗಿನ ನಾಡುಮಾಸ್ಕೇರಿ ಶಾಲೆಯ ಉದ್ದಂಡ ಮಾಸ್ತರರ ಕಾಲದಲ್ಲಿ 4ನೇ ಕ್ಲಾಸಿನವರೆಗೆ ಕಲಿತು, ಬಾಲ್ಯವಿವಾಹಕ್ಕೆ ತಲೆಬಾಗಿ, ಅನಿವಾರ್ಯವಾಗಿ ಓದುಬಿಟ್ಟಳಂತೆ. ಈ ಬಗ್ಗೆ ಇವತ್ತಿಗೂ ಆಕೆಗೆ ತಂದೆ ಮೇಲೆ ಕೋಪವಿದೆ.
ಸರ್ವಜ್ಞನ ವಚನಗಳು, ಕುಮಾರವ್ಯಾಸನ ಕಾವ್ಯದ ತುಣುಕುಗಳು, ಮೂಲ ಜಾನಪದದ ಪದ್ಯಗಳ ಮೇಲೆ ದೃಷ್ಟಿ ಹಾಯಿಸಲು ಆಕೆಯ ಕಣ್ಣುಗಳಿಂದು ಸಹಕರಿಸುತ್ತಿಲ್ಲ. ಆದರೂ ಕಂಠಪಾಠದಂತೆ ಗುನುಗುತ್ತಾಳೆ. 17 ವರ್ಷದ ಹಿಂದೆ ಈಕೆಯ ಗಂಡ ತೀರಿಹೋದರಂತೆ. ಹಿರಿಯ ಮಗ, ಕೂಲಿ ಕೆಲಸ ಮಾಡುವ ಮಂಜುನಾಥನೊಂದಿಗೆ ಈಕೆಯಿದ್ದಾಳೆ. ವಾಸಕ್ಕೆ ಯೋಗ್ಯ ಮನೆಯಿಲ್ಲ. ಗುಡಿಸಲು ವಾಸಿಯಾದ ಈಕೆ, ತರಕಾರಿ ಬೆಳೆದು ಅಂಕೋಲಾದ ಸಂತೆಯಲ್ಲಿ ಮಾರಿ, ಮಹಾ ಸ್ವಾಭಿಮಾನಿಯಾಗಿ ಬದುಕುತ್ತಿದ್ದಾಳೆ.
ಅಂಕೋಲಾದ ಹಾದಿಯಲ್ಲಿ ದೋಣಿಯವರಿಂದ ಹಿಡಿದು ಬಸ್ ಕಂಡಕ್ಟರ್ವರೆಗೆ ಎಲ್ಲರೂ ಅಜ್ಜಿಯಿಂದ ಹಾಡು ಹೇಳಿಸಿಕೊಂಡು ಮನರಂಜನೆ ಪಡೆಯುತ್ತಾರೆ. ಹಾಗೆಂದು ಹಾಡು ಹೇಳಜ್ಜಿ ಎಂದಾಗ ಒಲ್ಲೆನೆಂಬ ಬಿಗುಮಾನವನ್ನೂ ಈಕೆ ತೋರುವುದಿಲ್ಲ.
ಸರಿದು ಹೋಗುತ್ತಿರುವ ಕನ್ನಡದ ಅಭಿಮಾನದ ಹಾಗೂ ಅಭಿಮಾನಿಗಳ ಮಧ್ಯ ಇಳಿಯ ವಯಸ್ಸಿನಲ್ಲೂ ಕನ್ನಡ ಧ್ವಜ ಹಾರಿಸುತ್ತಿರುವ ಈಕೆಯನ್ನು ಯಾರೂ ಗುರುತಿಸುತ್ತಿಲ್ಲ. ಜೀವನದುದ್ದಕ್ಕೂ ಕಷ್ಟವನ್ನೇ ಹೊತ್ತು ಸಾಗಿದ ಈ ಹಿರಿಯ ಜೀವಕ್ಕೆ ಸರಕಾರವೂ 'ಹೇಗಿದ್ದೀಯಮ್ಮ?' ಅಂತ ವಿಚಾರಿಸಿಲ್ಲ. ಇಂಥ ಒಳ್ಳೆಯ ಗಮಕಿಯ ದನಿ ಆದಷ್ಟು ಬೇಗ ಜನಪ್ರತಿನಿಧಿಗಳನ್ನು ತಲುಪಲಿ...
- ವೆಂಕಟೇಶ ಗೌಡ