ಚಂದ್ರ ಲೇಖನ

ಚಂದ್ರ ಲೇಖನ
Updated on: 

ಕಲೆ, ಸಾಹಿತ್ಯಗಳು ಯಾರಲ್ಲಿ ಯಾವಾಗ ಚಿಗುರುವುದೋ ಯಾರು ಬಲ್ಲರು? ಕೆಲವರಿಗೆ ಉತ್ತಮ ಪರಿಸರ ಸಿಗದೆ, ಪ್ರತಿಭೆಯೇ ಕಮರಿ ಹೋಗಬಹುದು. ಇನ್ನೂ ಕೆಲವರಿಗೆ ಅವರ ಹಿರಿಯರೇ ಪ್ರೋತ್ಸಾಹಿಸಿ ಕಲಾವಿದನಾಗಿ ಬೆಳೆಯಲು ಸಹಕರಿಸುತ್ತಾರೆ. ಈ ಎರಡನೇ ವರ್ಗಕ್ಕೇ ಸೇರಿದವರು ಬಹುಮುಖ ಪ್ರತಿಭೆಯ ಹಿರಿಯ ಕಲಾವಿದ ಎಚ್.ವಿ. ರಮೇಶ್. 'ರಮೇಶ್ ಚಂದ್ರ' ಎಂದೇ ಜನಜನಿತವಾದ ಇವರು ತಮ್ಮ ಶಾಲಾ ದಿನಗಳಿಂದಲೇ ಸಾಹಿತ್ಯ ಮತ್ತು ನಾಟಕದ ಗೀಳನ್ನು ಅಂಟಿಸಿಕೊಂಡರು. ಈಗ ಇವರ ಕಾಯಕ್ಕೆ ಮುಪ್ಪಾಗಿದೆ. ಆದರೆ, ಇವರೊಳಗಿನ ಕಲಾವಿದನಿಗೆ ಪುಟಿದೇಳುವ ಪ್ರಾಯ. ಈ ಇಳಿವಯಸ್ಸಿನಲ್ಲೂ ನಾಟಕದ ತಾಲೀಮಿಗೆ ಚಿಗಿದು ಹೊರಡುವಂಥ ಹುಮ್ಮಸ್ಸು.
ಹೊನ್ನುಡಿಕೆಯ ಮೂಲದವರಾಗಿದ್ದರೂ ಬೆಂಗಳೂರಿನಲ್ಲೇ ಬಾಲ್ಯ ಕಳೆದರು ರಮೇಶ್. ಇವರ ಎಲ್ಲಾ ಬೆಳವಣಿಗೆಗೆ ಸಾಹಿತ್ಯ ಪ್ರೇಮಿಗಳಾಗಿದ್ದ ತಂದೆ ಎಚ್. ವೆಂಕಟರಾವ್ ಮತ್ತು ತಾಯಿ ತಾರಾಬಾಯಿ ಕಾರಣವಂತೆ. ಅಲ್ಲದೆ, ಗುರುಗಳಾದ ವಿ. ನಂಜುಂಡಯ್ಯ ಮತ್ತು ಕೆ.ಟಿ. ಬನಶಂಕರಮ್ಮ ಅವರ ಮಾರ್ಗದರ್ಶನವೂ ಇದೆ. ಇವರ 'ಸಾಗರಗಾಥಾ' ಕವನ ಸಂಕಲನವನ್ನು ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ಬಿಡುಗಡೆಗೊಳಿಸಿ ಬೆನ್ನು ತಟ್ಟಿದ್ದರು. ಆ ದೃಶ್ಯ ಈಗಲೂ ಕಣ್ಣಲ್ಲೇ ಇದೆ ಎಂದು ವಿನಮ್ರವಾಗಿ ನೆನೆಯುತ್ತಾರೆ.
ಕೆಜಿಎಫ್‌ನಲ್ಲಿನ ಬೆಮೆಲ್‌ನ ಉದ್ಯೋಗಿಯಾಗಿದ್ದ ಇವರು ಸದ್ಯ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹನಿಗವನ, ಲಲಿತ ಪ್ರಬಂಧ, ಸಣ್ಣ ಕಥೆ ಮತ್ತು ನಾಟಕಗಳ ರಚನೆಯಲ್ಲಿ ಈಗಲೂ ತೊಡಗಿಸಿಕೊಂಡಿದ್ದಾರೆ. ಬೆಮೆಲ್‌ನ ಕನ್ನಡ ಮಿತ್ರರು ಪ್ರತಿವರ್ಷ ನಡೆಸುತ್ತಿದ್ದ ನಾಟಕ ಸ್ಪರ್ಧೆಗಳಿಗೆ ತಾವೇ ನಾಟಕ ಬರೆದು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಕೆಲವು ನಾಟಕಗಳಿಗೆ ಪುರಸ್ಕಾರಗಳೂ ಸಂದಿವೆ. ಕೆಲವು ಬಾರಿ ತೀರ್ಪುಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರು ರಚಿಸಿದ 'ಕಣ್ಣು ಕಾಣದ ಗಾವಿಲರು' ನಾಟಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 'ವಿಜಯೋತ್ಸವ', 'ಕೊರಗು', 'ಒಸಗೆ', 'ಸಂಜೆಗೆಂಪು' ಇವರ ಇತರ ಕವನ ಸಂಕಲನಗಳು. 'ನೆನಪಿನ ಅಂಗಳ' ಅನುಭವ ಕಥನ, ಪುಷ್ಯರಾಗ ಹನಿಗವನಗಳ ಗುಚ್ಛ, ರಜನೀಗಂಧ, ಕಾರ್ಮಿಕ ಜಗತ್ತಿನ ಮಾಯಾದರ್ಪಣಗಳನ್ನು ತಮ್ಮದೇ ಆದ ಶ್ರೀನಿಧಿ ಪ್ರಕಾಶನದಿಂದ ಹೊರತಂದಿದ್ದಾರೆ. ಹಲವು ಗ್ರಂಥಗಳನ್ನೂ ಸಂಪಾದಿಸಿದ್ದಾರೆ. 'ನಾ ಕೊಂದ ಹುಡುಗಿ', 'ಪ್ರತಿಮಾ ಗೃಹ', 'ಹಬ್ಬಿದಾ ಮಲೆ ಮಧ್ಯದೊಳಗೆ', 'ಫಿರ್ದೌಸಿ', 'ಕೀರ್ತಿ ಪತಾಕೆ', 'ಮೈಸೂರು ಹುಲಿ', 'ಅಸ್ತಂಗತ' ನಾಟಕಗಳು ಇವರಿಗೆ ಹೆಸರು ತಂದುಕೊಟ್ಟಿವೆ. ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ 'ತುಕ್ಕೋಜಿ' ನಾಟಕದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯು 'ಕಾರ್ಮಿಕ ರಂಗೋತ್ಸವ' ಗೌರವ ನೀಡಿದೆ. ಸಂಸ್ಕಾರ ಭಾರತೀ ಪ್ರತಿಷ್ಠಾನ '2012ರ ವರ್ಷದ ವ್ಯಕ್ತಿ'ಯೆಂದು ಗುರುತಿಸಿದೆ.
ಇತ್ತೀಚೆಗೆ ರಾಜರಾಜೇಶ್ವರಿ ನಗರದ ಹಿರಿಯ ನಾಗರೀಕ ವೇದಿಕೆಯು ಇವರ ಲಲಿತ ಪ್ರಬಂಧಗಳ ಸಂಕಲನ 'ನನ್ನ ಗಾಡಿ ಎಂಬ ಮೋಡಿ'ಯನ್ನು ಹೊರತಂದಿದೆ.

- ಸಂಕೇತ್ ಗುರುದತ್ತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com