

ವಿಷಕಾರಿ ಹಾವಿನೊಂದಿಗೆ ಸರಸ ಆಡುತ್ತಾರೆ ಹರಪನಹಳ್ಳಿಯ ರಾಗಿರೊಟ್ಟಿ ಜಾಕೀರ. 20 ವರುಷದಿಂದ ಸಾವಿರಾರು ಹಾವುಗಳನ್ನು ಹಿಡಿದಿದ್ದಾರೆ...
ಹರಪನಹಳ್ಳಿಲ್ಲಿರುವ ರಾಗಿರೊಟ್ಟಿ ಜಾಕೀರನಿಗೆ ವಿಷದ ಹಾವುಗಳನ್ನು ಹಿಡಿಯುವ ಹವ್ಯಾಸ. ಅದು ಈತನಿಗೆ ಸರಸ. ಹಾವು ಹಿಡಿದು ಹಲ್ಲು ಕಿತ್ತು ಅದಕ್ಕೆ ತೊಂದರೆ ಕೊಡಬೇಕೆಂಬುದೇನು ಇವರ ಉದ್ದೇಶವಲ್ಲ.
ಜಾಕೀರ ಹಿಡಿದ ಹಾವನ್ನು ಪಳಗಿಸುವುದಿಲ್ಲ. ಎಲ್ಲಿಯಾದರೂ ಹಾವು ಕಂಡರೆ, ಯಾರಾದರೂ ನಮ್ಮ ಮನೆಯಲ್ಲಿ ಹಾವು ಬಂದಿದೆ ಬಾ ಎಂದು ಕರೆದರೆ ಸಾಕು ಕೂಡಲೇ ಅಲ್ಲಿಗೆ ತೆರಳಿ ಚಾಕಚಕ್ಯತೆಯಿಂದ ಹಿಡಿದು ತೊಂದರೆ ಕೊಡದೆ ಅಡವಿಯಲ್ಲಿ ಬಿಟ್ಟು ಬರುತ್ತಾರೆ.
38 ವರ್ಷದ ಜಾಕೀರ, 20 ವರ್ಷದಿಂದ ಈ ಸೇವೆ ಮಾಡುತ್ತಿದ್ದಾರೆ. ಈವರೆಗೂ ಸಾವಿರಾರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಜಿಪಂ ಎಂಜಿನಿಯರಿಂಗ್ ವಿಭಾಗದ ಕಚೇರಿಯಲ್ಲಿ ಕ್ಯಾಷಿಯರ್ ಆಗಿರುವ ಮಾಲತೇಶ ಮರಿಗೌಡ ನಿರ್ಮಿಸುತ್ತಿರುವ ಮನೆಯಲ್ಲಿ ಜಲ್ಲಿರಾಶಿಯ ಕೆಳಗಡೆ ನಾಗರ ಹಾವು ಕಾಣಿಸಿತು. ಕೂಡಲೇ ರಾಗಿರೊಟ್ಟಿ ಜಾಕೀರ್ಗೆ ಬುಲಾವ್ ಹೋಯಿತು. ಸ್ಥಳಕ್ಕೆ ಆಗಮಿಸಿದ ಅವರು ಸ್ವಲ್ಪ ಹೊತ್ತಿನಲ್ಲಿ ಬುಸುಗುಟ್ಟುತ್ತಿದ್ದ ನಾಗರಹಾವನ್ನು ಒಂದು ಕೋಲಿನ ಸಹಾಯದಿಂದ ಹಿಡಿದು ಅಡವಿಗೆ ಬಿಟ್ಟು ಬಂದರು.
ಜಾಕೀರ ಪ್ರೈಮರಿ ಸ್ಕೂಲಿನಲ್ಲಿ ಓದೋವಾಗ ಗೋಸಾಯಿ ಗುಡ್ಡಕ್ಕೆ ಗೆಳೆಯರ ಜೊತೆ ತೆರಳಿ ಅಲ್ಲಿ ಕಾರಿ ಹಣ್ಣಿನ ಗಿಡದಲ್ಲಿ ಹಣ್ಣು ಕೀಳುವಾಗ ಹೆಬ್ಬಾವು ಕಾಣಿಸಿತಂತೆ. ಜೊತೆಗಿದ್ದ ಗೆಳೆಯರು ಹೆದರಿದರು. ಆಗ ನಾನು ಹಾವು ಹಿಡಿದು ಹೊರ ಹಾಕಿದೆ. ಅಲ್ಲಿಂದ ದೈರ್ಯ ಬಂತು ಎಂದು ನುಡಿದರು. ಧೈರ್ಯ ಇದ್ದರೆ ತಾಂತ್ರಿಕತೆ ಬಂದೇ ಬರುತ್ತೆ ಎಂದು ಅವರ ಅನುಭವದ ನುಡಿ.
ಚಹಾ ಸಹ ಸೇವಿಸಲ್ಲ...
ಹಾವು ಹಿಡಿಯುವುದಕ್ಕೆ ಇವರು ಹಣ ಪಡೆಯುವುದಿಲ್ಲ. ಹಣವಿರಲಿ, ಇವರು ಚಹಾವನ್ನೂ ಸೇವಿಸುವುದಿಲ್ಲ. ಇದು ಸಣ್ಣ ಸಮಾಜ ಸೇವೆ ಎಂಬುದು ಅವರ ನಂಬಿಕೆ. ಸಣ್ಣ ಪ್ರಮಾಣದ ಗುತ್ತಿಗೆದಾರನಾಗಿರುವ ಸ್ನೇಕ್ ರಾಗಿರೊಟ್ಟಿ ಜಾಕೀರನಿಗೆ ಈವರೆಗೂ ಯಾವೊಂದು ಪುರಸ್ಕಾರ, ಸನ್ಮಾನ ಆಗಿಲ್ಲ. ಆ ಬಗ್ಗೆ ಅವರಿಗೆ ಬೇಸರವೂ ಇಲ್ಲ. ಯಾರಾದರೂ ತಮ್ಮ ಮನೆಯಲ್ಲಿ ಹಾವು ಕಂಡರೆ ಈತನಿಗೆ ಒಂದು ಕರೆ ಮಾಡಿ. ಮೊ. 9008535444 ಸಂಪರ್ಕಿಸಬಹುದು.
-ಬಿ. ರಾಮಪ್ರಸಾದ್ ಗಾಂಧಿ