

ಪುರಾಣ ಪುಣ್ಯ ಕಥೆಗಳನ್ನು ಉಪಕಥೆಗಳ ಮೂಲಕ ಹೇಳುವುದೇ ಹರಿಕಥೆ. ಅಲ್ಲಿ ಪುರುಷರ ಪ್ರಭುತ್ವವೇ ಹೆಚ್ಚು. ಆದರೆ, ಅಲ್ಲಿ ಬೆರಳೆಣಿಕೆಯ ಮಹಿಳೆಯರೂ ಇದ್ದಾರೆ. ಹೊಸನಗರ ತಾಲೂಕಿನ ಕೋಡೂರಿನ ಪ್ರತಿಮಾ ಜಾಗಟಗಾರ್ ಅಂಥವರಲ್ಲಿ ಒಬ್ಬರು...
ಹರಿಕಥೆಯು ಜನಮನ ರಂಜಿಸುವ ಬಹು ಪ್ರಸಿದ್ಧ ಪ್ರಾಚೀನ ಕಲೆ. ನವರಸಗಳನ್ನು ಅದ್ಭುತವಾಗಿ ಅಭಿನಯಿಸುತ್ತಾ ಮಾತಿನಲ್ಲಿ ಎಲ್ಲರನ್ನೂ ಹಿಡಿದಿಡುವ ಈ ಕಲೆ ಕಥೆ, ಕವನ, ಸಂಗೀತ, ನೃತ್ಯ, ತತ್ವ ಎಲ್ಲವನ್ನೂ ಒಳಗೊಡಿದೆ. ಪಕ್ಕವಾದ್ಯದವರಿಂದ ಮತ್ತಷ್ಟು ಕಳೆಗಟ್ಟುತ್ತದೆ.
ಪುರಾಣ ಪುಣ್ಯ ಕಥೆಗಳನ್ನು ಉಪಕಥೆಗಳ ಮೂಲಕ ಹೇಳುವುದೇ ಹರಿಕಥೆ. ಪುರುಷರೇ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಇದರಲ್ಲಿ ಇತ್ತೀಚೆಗೆ ಬೆರಳೆಣಿಕೆಯಷ್ಟು ಮಹಿಳೆಯರೂ ತೊಡಗಿಸಿಕೊಂಡಿದ್ದು, ಅವರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರಿನ ಪ್ರತಿಮಾ ಜಾಗಟಗಾರ್ ಸಹ ಒಬ್ಬರು.
15ನೇ ವಯಸ್ಸಿನಿಂದಲೇ ಹರಿಕಥೆಗಳನ್ನು ನಡೆಸಿಕೊಡುತ್ತಿದ್ದರು. ಸಾಕು ತಂದೆಯೂ, ಗುರುಗಳೂ ಆದ ಹರಿದಾಸ ನಿವಣೆ ಗಣೇಶ ಭಟ್ಟರು ಪ್ರಖಾಂಡ ಪಂಡಿತರೂ, ಪ್ರವಚನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿದ್ವಾಂಸರೂ ಆಗಿದ್ದು ಶ್ರೀಯುತರು ತಮ್ಮ ಜ್ಞಾನವನ್ನೆಲ್ಲ ಧಾರೆಯೆರೆದು ತಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದನ್ನು ಆಕೆ ಹೆಜ್ಜೆಹೆಜ್ಜೆಗೂ ಸ್ಮರಿಸುತ್ತಾರೆ. ಹಾರ್ಮೋನಿಯಂ ನುಡಿಸುತ್ತಾ ತಬಲಾ ಸಾಥ್ನೊಂದಿಗೆ ಇದುವರೆಗೆ ಸಾವಿರಾರು ಕಥಾಪ್ರಸಂಗಗಳ ಹರಿಕಥೆ ಮಾಡಿದ್ದಾರೆ.
ಹರಿಕಥೆಯಲ್ಲಿ ತಮ್ಮ ಗುರುಗಳು ರಚಿಸಿದ- ವೈಭವಪೂರಿತ ಅಯೋಧ್ಯಾನಗರ... ಶೋಭಿಸುತಿಹುದೈ ಗುಡಿಪ್ರಕಾರ... ಮನೆಮನೆಗಳ ವಿಭವದ ಸೌಧಗಳ... ಮನವ ಸೂರೆಗೊಳ್ಳುವ ಸುರನಗರ... ಎಂದು ಅವರು ವರ್ಣಿಸಿ ಹಾಡುವಾಗ ಎಲ್ಲರೂ ಅಯೋಧ್ಯೆಗೆ ಹೋದ ಅನುಭವ ಪಡೆಯಲೇಬೇಕು. ದಾಸರಪದಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.
84 ಲಕ್ಷ ಜೀವರಾಶಿಗಳಲ್ಲಿ 9 ಲಕ್ಷ ಸಸ್ಯವರ್ಗ, 10 ಲಕ್ಷ ಪಕ್ಷಿವರ್ಗ, 11 ಲಕ್ಷ ಕ್ರಿಮಿಕೀಟಗಳ ವರ್ಗ, 20 ಲಕ್ಷ ಪ್ರಾಣಿವರ್ಗ, 30 ಲಕ್ಷ ಸ್ಥಾವರ ವರ್ಗ, 4 ಲಕ್ಷ ಮಾನವ ವರ್ಗವೆಂದು ಬಣ್ಣಿಸುತ್ತಾರೆ. ಅತಿಥಿ ಸತ್ಕಾರದ ಬಗ್ಗೆ ಹೇಳುತ್ತಾರೆ. ಕಣ್ಣುಗಳಲ್ಲಿ, ಮಾತಿನಲ್ಲಿ, ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡು ಉತ್ತಮ ವಸ್ತುಗಳಿಂದ ಸತ್ಕರಿಸಿ, ಹತ್ತು ಹೆಜ್ಜೆಯಾದರೂ ಅವರೊಂದಿಗೆ ನಡೆದು ಬೀಳ್ಕೊಡಬೇಕು. ನಮ್ಮ ಮನೆಗೆ ಬರುವ ಸಜ್ಜನರು ಪಾಪವನ್ನು ಕಳೆದು, ತಮ್ಮ ಪುಣ್ಯ ನಮಗೆ ಕೊಟ್ಟು ಹೋಗುತ್ತಾರಂತೆ.
ಹಾಗೇ ಶಬರಿಯ ಇತಿಹಾಸ, ಭರ್ತೃಹರಿಯ 'ವೈರಾಗ್ಯಶತಕ' ಕೃತಿಯ ಬಗ್ಗೆ ದಶರಥ ಹಾಗೂ ಜನಕರಾಜನ ವ್ಯಕ್ತಿತ್ವದ ವರ್ಣನೆ ಮಾಡುವಾಗ ಏಕಾಗ್ರತೆಯಿಂದ ಮೈಮರೆತ ಜನರು ಅದರಲ್ಲೇ ಲೀನವಾಗಿ ಬಿಡುತ್ತಾರೆ. ಪ್ರಪಂಚದಲ್ಲಿ ನಾವು ಹೇಗಿರಬೇಕು ಎಂದೂ ಭಗವನ್ನಾಮ ಸ್ಮರಣೆಯ ಮಹತ್ವವನ್ನೂ ಮನಮುಟ್ಟುವಂತೆ ಹೇಳುವಾಗ ಬಾಳುವ ಪಾಠವೂ ಅದರೊಳಗೆ ಅಡಗಿರುತ್ತದೆ.
ಕಾರಣಗಿರಿಯ ರಾಷ್ಟ್ರೋತ್ಥಾನದ 'ಕೀರ್ತನಗಂಗೆ' ಗೌರವ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ರಾಮಚಂದ್ರಾಪುರದ ಸ್ವಾಮಿಗಳು, ಮುಂಬಯಿ ಕನ್ನಡ ಸಂಘಗಳು ಬೆಂಗಳೂರಿನ ವರ್ಡ್ ಕಲ್ಚರ್- ಹೀಗೆ ಹಲವು ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ, ಗೌರವಿಸಿವೆ.
ರುಕ್ಮಿಣಿ ಕಲ್ಯಾಣವೆಂಬ ಹರಿಕಥಾಮೃತ ಸಿಡಿ ಬಿಡುಗಡೆ ಮಾಡಿದ್ದಾರೆ. ಬಂದ ಸಂಭಾವನೆಯನ್ನು 'ಸತ್ಯಂ ಶಿವಂ ಸುಂದರಮ್' ಸೇವಾ ಸಂಸ್ಥೆಗೆ ಮೀಸಲಿಟ್ಟಿದ್ದಾರೆ. ಭಜನಾ ಮಂದಿರ, ಧ್ಯಾನ ಮಂದಿರ, ಪ್ರವಚನ ಮಂದಿರ ನಿರ್ಮಿಸಿದ್ದಾರೆ. ಚಿಕ್ಕ ಮಕ್ಕಳಿಗಾಗಿ ಒಂದು ಶಾಲೆ, ಸ್ತೋತ್ರ ತರಗತಿ, ಭಜನಾ ತರಗತಿಗಳನ್ನು, ಭಗವದ್ಗೀತಾ ತರಗತಿಗಳನ್ನು ನಡೆಸುತ್ತಿದ್ದಾರೆ. ಪ್ರತಿಮಾ ಅವರಿಗೆ ಅಭಿನಂದಿಸಲು 9449205119ಗೆ ಕರೆ ಮಾಡಿ.
-ಸೀತಾ ಎಸ್.ನಾರಾಯಣ