

ಯೋಗ ಹಾಗೂ ತತ್ವಪದಗಳ ಶ್ರೇಷ್ಠ ಪರಂಪರೆಯ ಮುಂದುವರಿದ ಭಾಗದಂತೆ ಸದ್ದಿಲ್ಲದೆ ಸಾಧನೆ ಮಾಡುತ್ತಿರುವವರು ಯೋಗಗುರು ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ...
ಅವರು ಹಠಯೋಗದ ಸಾಧಕರು. ಅಂತರಾಳದ ತಾತ್ವಿಕ ಶಕ್ತಿಗೆ ಆಡುನುಡಿಗಳಲ್ಲಿ ದೇಸೀಯ ಶೈಲಿಯ ಹಾಡುಗಳ ರೂಪ ನೀಡಿದವರು. ಯೋಗ ಹಾಗೂ ತತ್ವಪದಗಳ ಶ್ರೇಷ್ಠ ಪರಂಪರೆಯ ಮುಂದುವರಿದ ಭಾಗದಂತೆ ಸದ್ದಿಲ್ಲದೆ ಸಾಧನೆ ಮಾಡುತ್ತಿರುವವರು ಯೋಗಗುರು ಡಾ. ಹೊನ್ನಪ್ಪ ಫಕೀರಪ್ಪ ನಾಯ್ಕರ.
ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಪಶುಪತಿಹಾಳದ ಡಾ. ಎಚ್.ಎಫ್. ನಾಯ್ಕರ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದ ಡಾ. ವಿ.ಕೆ. ಗೋಕಾಕ ಅವರ ಮೆಚ್ಚಿನ ಶಿಷ್ಯರಾಗಿ ಅವರ ಕ್ವಾರ್ಟರ್ಸ್ನ ಒಂದು ಕೋಣೆಯಲ್ಲೇ ವಾಸವಿದ್ದರು. ಕುಸ್ತಿಯಲ್ಲಿ ಕರ್ನಾಟಕ ವಿವಿಯನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿ ನಿರಂತರ ಬಹುಮಾನ ತಂದುಕೊಟ್ಟವರು. ಮುಂದೆ ಸಬ್ ಇನ್ಸ್ಪೆಕ್ಟರ್ ಆಗಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆಗೈದು ಡಿಐಜಿ ಆಗಿಯೂ ಆದರು. 1994ರಲ್ಲಿ ಸೇವಾ ನಿವೃತ್ತಿ ಹೊಂದಿದರು. ಸರ್ಕಾರದ ಈ ಜವಾಬ್ದಾರಿಯ ನಡುವೆಯೂ ಯೋಗ ಹಾಗೂ ಅಧ್ಯಾತ್ಮದ ಸಾಧನೆಯನ್ನು ಸದಾ ಜಾಗೃತವಾಗಿಟ್ಟುಕೊಂಡು ಬಂದರು.
ಶಕ್ತಿಪಾತ ವಿದ್ಯೆಯ ನಿಜ ಸಾಧಕ
ಜಾಗತೀಕರಣದ ಈ ಕಾಲಘಟ್ಟದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನಗಳೂ ಮಾರುಕಟ್ಟೆ ಸರಕಾಗಿವೆ. ಯೋಗದ ಅಆಇಈ ಕೂಡ ಅರಿಯದವರು ಶಕ್ತಿಪಾತ ವಿದ್ಯೆ ಧಾರೆ ಎರೆಯುತ್ತೇನೆ ಎಂದು ಹೊರಟು ಹಣ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್.ಎಫ್. ನಾಯ್ಕರ ಅವರು ತಮ್ಮದೇ ಅನುಭಾವಿಕ ನೆಲೆಯಲ್ಲಿ ಬೇಸರ, ಆಕ್ರೋಶ ವ್ಯಕ್ತಪಡಿಸುವುದು ಹೀಗೆ...
ಬೇಜಾರ ಬೇಜಾರ ಬಂದದ. ಬಜಾರದೊಳಗ ಯೋಗದ ಹರಾಜ ನಡೆದದ
ಜಗ್ಗಿ ಜಿಗಿಯುವ ಹಗ್ಗದ ಯೋಗ, ಸುಗ್ಗಿ ತಂದಿದೆ ಈಗೀಗ
ಹಗ್ಗಾ ಜಗ್ಗಿ ಹೊಡೆವರು ಲಾಗ, ಹಗ್ಗದ ಮೇಲೂ ನಡೆದಿದೆ ಯೋಗ
ಕಂಬಿ ಮೇಲಿನ ಕಸರತ್ತಂತೆ, ದೊಂಬರಾಟವೂ ಯೋಗವಂತೆ,
ತಂಬುದೊಳಗಿನ ಸಕಸ್ಸಂತೆ, ಶಂಭುಲಿಂಗ- ಇದು ಹುಚ್ಚರ ಸಂತೆ !
ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ನಿಕಟ ಶಿಷ್ಯರಾಗಿದ್ದ ಎಚ್.ಎಫ್. ನಾಯ್ಕರ ಅವರ ತಂದೆ ಫಕೀರಪ್ಪ ಸ್ವತಃ ಸಿದ್ಧಾರೂಢರಿಂದ ಹಠಯೋಗದ ದೀಕ್ಷೆ ಪಡೆದಿದ್ದರು. ಈ ಜ್ಞಾನವನ್ನು ತಮ್ಮ ಮಗನಿಗೆ ಆರು ವರ್ಷದ ಬಾಲಕನಾಗಿದ್ದಾಗಲೇ ಶಕ್ತಿಪಾತದ ಮೂಲಕ ಧಾರೆ ಎರೆದರು. ಆ ದಾರಿಯಲ್ಲಿ ಸತತ ಸಾಧನೆ, ಕಠಿಣ ಪರಿಶ್ರಮ ಮಾಡಿಕೊಂಡು ಬಂದಿರುವ ನಾಯ್ಕರ ಹಠಯೋಗಿಯಾಗಿ ಸಾವಿರಾರು ಜನರಿಗೆ ಯೋಗ ಕಲಿಸುತ್ತಿದ್ದಾರೆ. ಅನುಭಾವಿ ಕವಿಯಾಗಿ 7800ಕ್ಕೂ ಹೆಚ್ಚು ಅಪೌರುಷೇಯವಾದ ಅದ್ಭುತ ಲಯಬದ್ಧ ಕವಿತೆಗಳನ್ನು ರಚಿಸಿದ್ದಾರೆ.
ವಜ್ರೋಳಿ ಮುದ್ರೆ ವಿದ್ಯೆಯ ಪರಿಚಯವೂ ಇವರಿಗಿದೆ. ವೀರ್ಯ, ಹಸಿವು ನಿಗ್ರಹಿಸುವ ಈ ವಜ್ರೋಳಿಮುದ್ರೆ ಯೋಗದ ಕುರಿತು, "ಬಿಟ್ಬಿಟ್ಟು ಎಳೆದಾಗ ಬಟ್ಟಲ ಬೀಜ/ ಹುಟ್ಟಿ ಮೇಲೇರಿತು ನೆತ್ತಿಗೆ ಸೂರ್ಯ/ ಗುಟ್ಟಾಗಿ ನುಡಿಯಿತು ಕಷ್ಟದ ಕಾರ/ ಕೊಟ್ಟಾನೋ ನಮ್ಮಪ್ಪ ಇಷ್ಟೊಂದು ಧೈರ್ಯ" ಎಂದು ಹಾಡುತ್ತಾರೆ ನಾಯ್ಕರ. ಯೋಗಾಭ್ಯಾಸ ಕ್ಷೇತ್ರಕ್ಕೆ ಎಚ್.ಎಫ್. ನಾಯ್ಕರ ಕೊಡುಗೆ ಗುರುತಿಸಿ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, 2013ರಲ್ಲಿ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಿದೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಈ ಗೌರವ ಪ್ರದಾನ ಮಾಡಿದ್ದರು.
1979ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಪ್ಟರ್ಗಳ ಸಮಾವೇಶದಲ್ಲಿ ಜೆ.ಡಬ್ಲು. ಲೋಬೊ 'ಯೋಗದಲ್ಲಿ ಎಚ್.ಎಫ್. ನಾಯ್ಕರ್ ಸರ್ವೋನ್ನತ ತಜ್ಞರು. ಯೋಗ ವಿಷಯದಲ್ಲಿ ಏನೇ ಇದ್ದರೂ ಅವರದೇ ಸರಿ' ಎಂದು ಘೋಷಣೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಯಾಗಿ ನಾಯ್ಕರ ಅವರು ಮಾಡಿರುವ ಸೇವೆಗಾಗಿ ನಾಗಾಲೆಂಡಿನ ವಿಶೇಷ ಕಾರ್ಯಪಡೆಯ ಶ್ರಮಸಾಧ್ಯ ಸೇವಾ ಪದಕ, ರಾಷ್ಟ್ರಪತಿಗಳ ಚಿನ್ನದ ಪದಕ, ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ನಿರಂತರ ಯೋಗ ಶಿಕ್ಷಣ
ಡಾ. ಎಚ್.ಎಫ್. ನಾಯ್ಕರ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ವ್ಯಾಲಿ ಸ್ಕೂಲ್ ಹತ್ತಿರದ ಬಿ.ಎಂ. ಕಾವಲ್ನಲ್ಲಿ 10 ಎಕರೆಗೂ ವಿಶಾಲವಾದ ಜಮೀನಿನಲ್ಲಿ ಮಹಾಯೋಗಕ್ಷೇತ್ರ ಸ್ಥಾಪಿಸಿದ್ದಾರೆ. ಈ ಪ್ರಶಾಂತ ಸ್ಥಳದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ಉಚಿತವಾಗಿ ಟ್ರೇನರ್ಸ್ ಟ್ರೇನಿಂಗ್ ಕೋರ್ಸ್ ನಡೆಸುತ್ತಾರೆ.
ರಾಜಯೋಗ
ಕನ್ನಡದ ವರನಟ ಡಾ. ರಾಜಕುಮಾರ್ ಕೂಡ ಇವರಲ್ಲೇ ಯೋಗ ಶಿಕ್ಷಣ ಆರಂಭಿಸಿದರು. ಇಬ್ಬರ ನಡುವೆ ಗುರು-ಶಿಷ್ಯರ ಸಂಬಂಧಕ್ಕಿಂತ, ಯೋಗ ಮಾರ್ಗದಲ್ಲಿನ ಮಹಾನ್ ಯೋಗ ಸಾಧಕರ ಸಂಬಂಧ ಏರ್ಪಟ್ಟಿತು. ಕಾಮನಬಿಲ್ಲು, ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಡಾ. ರಾಜ್ ಪ್ರದರ್ಶಿಸಿದ ಯೋಗದ ನಿರ್ದೇಶಕರೂ ಎಚ್.ಎಫ್. ನಾಯ್ಕರ್ ಅವರೇ.
-ಮಂಜುನಾಥ ಡಿ.ಡೊಳ್ಳಿನ