ರಸ್ತೆ ಬದಿ, ರೈಲ್ವೆ ಸ್ಟೇಷನ್ ನಲ್ಲಿ ಬೆಳೆದ ಕೋಲ್ಕತ್ತಾದ ಬಾಲಕ ಇಂದು ಐಟಿ ಕಂಪನಿಯ ಮಾಲೀಕ!

ಕೋಲ್ಕತ್ತಾದಲ್ಲಿ ರಸ್ತೆ ಬದಿ, ರೈಲ್ವೇ ಸ್ಟೇಷನ್ ನಲ್ಲಿ ಬೆಳೆದ ಕೋಲ್ಕತ್ತಾದ ಯುವಕ ಅಶೋಕ್ ಪಾಲ್ ಅಮೆರಿಕಾದಲ್ಲಿ ವ್ಯಾಸಂಗ ಮಾಡಿ ಭಾರತದಲ್ಲೇ ಐಟಿ ಕಂಪನಿಯನ್ನು ಸ್ಥಾಪಿಸಿದ್ದಾನೆ!
ಕೋಲ್ಕತ್ತ
ಕೋಲ್ಕತ್ತ

ಕೋಲ್ಕತ್ತ: ಭಾರತೀಯರು ಮೈಕ್ರೋ ಸಾಫ್ಟ್, ಗೂಗಲ್ ನ ಉನ್ನತ ಹುದ್ದೆಗೆ ನೇಮಕಗೊಂಡು ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ಹೆಮ್ಮೆಯುಂಟಾಗುವಂತೆ ಮಾಡಿದ್ದಾರೆ. ಇವರಂತೆಯೇ ಕೋಲ್ಕತ್ತಾ ಮೂಲದ ಯುವಕ ಐಟಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾನೆ.

ಕೋಲ್ಕತ್ತಾದಲ್ಲಿ ರಸ್ತೆ ಬದಿ, ರೈಲ್ವೆ ಸ್ಟೇಷನ್  ನಲ್ಲಿ ಬೆಳೆದ ಕೋಲ್ಕತ್ತಾದ ಯುವಕ ಅಶೋಕ್ ಪಾಲ್ ಅಮೆರಿಕಾದ ಮಿಯಾಮಿ ಸಮುದಾಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಭಾರತದಲ್ಲೇ ಐಟಿ ಕಂಪನಿಯನ್ನು ಸ್ಥಾಪಿಸಿದ್ದಾನೆ!.

ಪಾರ್ಕ್ ಸರ್ಕಸ್ ನಲ್ಲಿರುವ ತನ್ನ ಚಿಕ್ಕ ರೂಂ ನಲ್ಲೇ ವೆಬ್ ಡೆವಲಪಿಂಗ್ ಸಂಸ್ಥೆ ಸ್ಕೈ ಕರ್ಸರ್ ನ್ನು ಪ್ರಾರಂಭಿಸಿರುವ 21 ವರ್ಷದ ಅಶೋಕ್ ಪಾಲ್, ವೆಬ್ ಡೆವಲಪಿಂಗ್ ಗಾಗಿ ವಿದೇಶಿ ಗ್ರಾಹಕರನ್ನು ಹೊಂದಿದ್ದಾರೆ. ಮಿಯಾಮಿ ಕಾಲೇಜಿನಲ್ಲಿ ಐಟಿ ವ್ಯಾಸಂಗ ಮುಕ್ತಾಯಗೊಳಿಸಿ ಜೂನ್ ನಲ್ಲಿ ಸ್ಕೈ ಕರ್ಸರ್ ನ್ನು ಪ್ರಾರಂಭಿಸಿರುವುದಾಗಿ ಅಶೋಕ್ ಪಾಲ್ ಹೇಳಿದ್ದಾರೆ.

ಬಾಲ್ಯದಿಂದಲೂ ಕಂಪ್ಯೂಟರ್ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಅಮೇರಿಕ ಸರ್ಕಾರದ ಅನುದಾನಿತ ಕಮ್ಯುನಿಟಿ ಕಾಲೇಜು ಇನಿಶಿಯೇಟಿವ್ ಪ್ರೋಗ್ರಾಂ ಗೆ ಆಯ್ಕೆಯಾದಾಗ ಐಟಿ ವಿಷಯವನ್ನು ಆಯ್ಕೆ ಮಾಡಿಕೊಂಡೆ ಎಂದು ಅಶೋಕ್ ಪಾಲ್ ತಿಳಿಸಿದ್ದಾರೆ.  

ಅಶೋಕ್ ಪಾಲ್, ಸ್ಕಾಲರ್ ಶಿಪ್ ನಿಂದ ಬಂದ ಹಣದ ಉಳಿತಾಯದಲ್ಲಿ ಲ್ಯಾಪ್ ಟ್ಯಾಪ್ ಹಾಗೂ ಇಂಟರ್ ನೆಟ್ ಸಂಪರ್ಕವನ್ನು ಪಡೆದಿದ್ದಾರೆ. ಬಾಲ್ಯದಿಂದಲೂ ಅಶೋಕ್ ಪಾಲ್ ಗೆ ಸಂಬಂಧಿಕರಾಗಲೀ ಕುಟುಂಬ ಸದಸ್ಯರಾಗಲಿ ಇಲ್ಲ. ಆತನಿಗೆ ಹತ್ತು ವರ್ಷವಾಗಿದ್ದಾಗ ಡಾನ್ ಬಾಸ್ಕೋ ಆಶಾಲಯಂ ನ ಕಾರ್ಯಕರ್ತರು ರಕ್ಷಿಸಿ ಶಾಲೆಗೆ ಕಳಿಸಿದ್ದರು. ಪ್ರೌಢಶಾಲೆ ಶಿಕ್ಷಣದ ನಂತರ ತನ್ನ ಮುಂದಿನ ಶಿಕ್ಷಣಕ್ಕಾಗಿ ಹಣ ಸಂಪಾದಿಸಲು ಟೆರ್ರಾ ಇಂಡಿಕಾ ಪೀಠೋಪಕರಣಗಳ ಕಾರ್ಖಾನೆಯಲ್ಲಿ ಕೆಲಸ ಮಾಡಿದ್ದರು . ಆ ನಂತರ ಎನ್.ಜಿ.ಒ ಒಂದರ ಸಹಾಯದ ಮೂಲಕ ಯುಎಸ್ ನ ಮಿಯಾಮಿ ಸಮುದಾಯ ಕಾಲೇಜಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com