'ಮಾನಸಿ'ಯ ಶಕ್ತಿ ಮತ್ತು ಸಾಧನೆಯ ಜೋಷ್!

ಇಷ್ಟೆಲ್ಲಾ ಆದ ಮೇಲೆ ನನ್ನ ಮುಂದೆ ಇದ್ದದ್ದು ಎರಡೇ ಎರಡು ದಾರಿ. ಒಂದು ಇದು ನನ್ನ ಹಣೆಬರಹ ಎಂದು ಸುಮ್ಮನಾಗುವುದು. ಇಲ್ಲವೇ ಈ ಕಷ್ಟವನ್ನು ಎದುರಿಸಿ ಜೀವನ ಸಾಗಿಸುವುದು...
ಮಾನಸಿ ಜೋಷಿ
ಮಾನಸಿ ಜೋಷಿ
ಬದುಕಿನಲ್ಲಿ ಅನಿರೀಕ್ಷಿತವಾಗಿ ನಡೆದ ಒಂದು ದುರ್ಘಟನೆ. ಅದರ ಆಘಾತದಿಂದ ಹೊರಬರುವುದು ತುಂಬಾ ಕಷ್ಟ. ದಿನವಿಡೀ ಕಣ್ಣೀರು ಸುರಿಸಿ ಹೀಗಾಯ್ತಲ್ಲಾ ಎಂದು ದುಃಖಿಸುವ ಮಂದಿ ಈ ಹೆಣ್ಮಗಳ ಕಥೆಯನ್ನು ಕೇಳಿದರೆ, ಭರವಸೆಯ ಕಿರಣಗಳು ನಿಮ್ಮ ಮನದೊಳಗೆ ನುಗ್ಗಬಹುದು.
ಈಕೆಯ ಹೆಸರು ಮಾನಸಿ ಜೋಷಿ. ಮುಂಬೈಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆ ತನ್ನ ಜೀವನ ಕಥೆಯನ್ನು ಹೇಳಿದ್ದು ಹೀಗೆ...
2011ರ ಇಸ್ವಿ. ಅಂದೊಂದು ದಿನ ದ್ವಿಚಕ್ರ ವಾಹನದಲ್ಲಿ ಆಫೀಸಿಗೆ ಹೋಗುತ್ತಿರುವಾಗ ಟ್ರಕ್‌ವೊಂದು ಬಂದು ಗುದ್ದಿತ್ತು. ಈ ಅಪಘಾತದಲ್ಲಿ ನನ್ನ ಎಡಕಾಲು ಸಂಪೂರ್ಣ ನಜ್ಜುಗುಜ್ಜಾಯಿತು. ಅಪಘಾತದ ಸ್ಥಳದಿಂದ ಯಾರೋ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ಅಪಘಾತ ನಡೆದದ್ದು ಬೆಳಗ್ಗೆ ಒಂಭತ್ತೂವರೆ ಗಂಟೆಗೆ. ಅದೇ ದಿನ ಸಂಜೆ ಐದೂವರೆಗೆ ನನ್ನ ಕಾಲಿನ ಶಸ್ತ್ರ ಕ್ರಿಯೆ ನಡೆದಿತ್ತು.
ನನ್ನ ಕಾಲನ್ನು ಉಳಿಸುವುದಕ್ಕಾಗಿ ವೈದ್ಯರು ತುಂಬಾ ಪ್ರಯತ್ನಪಟ್ಟರು. ಆದರೆ ಕೆಲವೇ ದಿನಗಳಲ್ಲಿ ಸೋಂಕು ತಗಲಿದ ಕಾರಣ ಕಾಲನ್ನು ಬೇರ್ಪಡಿಸಲೇ ಬೇಕಾದ ಸ್ಥಿತಿ ಬಂತು. ಯಾಕೆ ಇಷ್ಟೊಂದು ಯೋಚನೆ ಮಾಡುತ್ತಿದ್ದೀರಾ? ಕಾಲನ್ನು ಬೇರ್ಪಡಿಸಿ, ಇದು ಪೂರ್ಣ ಗುಣವಾಗುವುದಿಲ್ಲ ಎಂದು ನನಗೆ ಗೊತ್ತು ಎಂದು ವೈದ್ಯರಲ್ಲಿ ನಾನೇ ಹೇಳಿದೆ. ಹಾಗೆ ನನ್ನ ಕಾಲನ್ನು ನನ್ನ ದೇಹದಿಂದ ಬೇರ್ಪಡಿಸಿದರು.
ಇಷ್ಟೆಲ್ಲಾ ಆದ ಮೇಲೆ ನನ್ನ ಮುಂದೆ ಇದ್ದದ್ದು ಎರಡೇ ಎರಡು ದಾರಿ. ಒಂದು ಇದು ನನ್ನ ಹಣೆಬರಹ ಎಂದು ಸುಮ್ಮನಾಗುವುದು. ಇಲ್ಲವೇ ಈ ಕಷ್ಟವನ್ನು ಎದುರಿಸಿ ಜೀವನ ಸಾಗಿಸುವುದು. ನಾನು ಎರಡನೇ ದಾರಿಯನ್ನು ಆಯ್ಕೆ ಮಾಡಿಕೊಂಡೆ.
ಆಸ್ಪತ್ರೆಯಲ್ಲಿ ನನ್ನನ್ನು ಭೇಟಿ ಮಾಡಲು ಬಂದವರು ನನ್ನ ಮೇಲೆ ಅನುಕಂಪದ ನೋಟ ಬೀರುವಾಗ ನಾನು ತಮಾಷೆ ಹೇಳಿ ಅವರನ್ನು ನಗಿಸುತ್ತಿದ್ದೆ. ಆಮೇಲೆ ನನಗೆ ಕೃತಕ ಕಾಲು ಜೋಡಿಸಿದರು. ಫಿಸಿಯೋಥೆರಪಿಸ್ಟ್‌ನ ಸಹಾಯದಿಂದ ನಾನು ನಡೆಯಲು ಆರಂಭಿಸಿದೆ. ಆದರೆ ಇನ್ಮುಂದೆ ಬ್ಯಾಡ್ಮಿಂಟನ್ ಆಡಲು ನನ್ನಿಂದ ಸಾಧ್ಯವೆ? ಎಂಬ ಶಂಕೆ ನನ್ನಲ್ಲಿತ್ತು. ಯಾಕೆಂದರೆ ಬ್ಯಾಡ್ಮಿಂಟನ್ ನನ್ನ ನೆಚ್ಚಿನ ಆಟವಾಗಿತ್ತು.
ದಿನ ಕಳೆದಂತೆ ನಾನು ನಡೆಯಲು ಕಲಿತೆ, ಬ್ಯಾಡ್ಮಿಂಟನ್ ಆಡುವುದಕ್ಕೂ ಕಷ್ಟವಾಗಲಿಲ್ಲ. ಹೀಗೆ ಕಾರ್ಪರೇಟ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪದಕಗಳನ್ನೂ ಗಳಿಸಿದೆ.
ಏತನ್ಮಧ್ಯೆ, ಅಂಗವಿಕಲರಿಗೂ ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ಹಿತೈಷಿಯೊಬ್ಬರು ಹೇಳಿದರು. ಅದರಲ್ಲೂ ಭಾಗವಹಿಸಿ ಪದಕಗಳನ್ನು ಗೆದ್ದೆ.  ಅಷ್ಟೇ ಅಲ್ಲ ಇಂಗ್ಲೆಂಡ್ ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ನಾನು ಬೆಳ್ಳಿ ಪದಕವನ್ನೂ ಗೆದ್ದಿದ್ದೇನೆ.
ಈಗ ನಾನು ಪ್ರತೀದಿನ 5 ಗಂಟೆಗಳ ಕಾಲ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತೇನೆ. ನನ್ನ ಕೆಲಸಕ್ಕೆ ಅಡ್ಡಿಯಾಗದಂತೆ ನನ್ನ ದಿನಚರಿಯನ್ನು ಬದಲಾಯಿಸಿಕೊಂಡಿದ್ದೇನೆ. ಅದರ ಮಧ್ಯೆಯೇ ಸ್ಕೂಬಾ ಡೈವಿಂಗ್ ತರಬೇತಿ ಪಡೆದೆ. ದೇಶದ ಹಲವಾರು ರಾಜ್ಯಗಳಿಗೆ ಪ್ರವಾಸ ಮಾಡಿದೆ.
ಇಷ್ಟೊಂದು ಕೆಲಸಗಳನ್ನು ಹೇಗೆ ಮಾಡುತ್ತೀಯಾ? ಎಂದು ಈಗ ಜನ ನನ್ನಲ್ಲಿ ಕೇಳುತ್ತಾರೆ. ಹಾಗೆ ಕೇಳುವವರಿಗೆ ನಾನು"ನಿಮಗೆ ಯಾವ ಅಡೆ ತಡೆಯಿದೆ? " ಎಂದು ಮರುಪ್ರಶ್ನೆಯನ್ನೆಸೆಯುತ್ತೇನೆ.
ಹೌದಲ್ವಾ...ಯಾವುದೇ ಕೆಲಸ ಮಾಡುವಾಗ ಅಥವಾ ಸಾಧನೆ ಮಾಡಬೇಕೆಂದು ಹೊರಟಾಗ, ನನ್ನನ್ನು ತಡೆವರಾರು? ಎಂಬ ಪ್ರಶ್ನೆಯನ್ನು ಸ್ವತಃ ಕೇಳಿಕೊಳ್ಳಿ. ಸಾಧನೆ ಮಾಡುವುದಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬ ಉತ್ತರ ನಿಮಗೆ ಸಿಗುತ್ತದೆ.
ಮಾನಸ ಜೋಷಿ ತನಗೆ ಹೀಗಾಯ್ತಲ್ಲಾ ಎಂದು ಕಣ್ಣೀರಿಟ್ಟು ಕೂರದೆ ತನ್ನ ಕನಸುಗಳನ್ನು ನನಸು ಮಾಡುವತ್ತ ಶ್ರಮ ವಹಿಸಿದಳು. ಅದರಲ್ಲಿ ಆಕೆ ಗೆಲುವನ್ನೂ ಸಾಧಿಸಿದಳು. 
ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂದು ಸಾಧಿಸಿ ತೋರಿಸಿದ, ಇತರರಿಗೆ ಪ್ರೇರಣೆಯಾಗುವಂತೆ ಬದುಕು ಕಟ್ಟಿಕೊಂಡ ಈ ಗಿಟ್ಟಿಗಿತ್ತಿಗೆ ಹ್ಯಾಟ್ಸ್ ಆಫ್..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com