ರಂಗ ಬಿಗಿದ ಮೃದಂಗ

ಲಯ ಚರ್ಮವಾದ್ಯಗಳ ತಯಾರಿಗೆ ಹಸು, ಮೇಕೆ, ಎಮ್ಮೆ ಚರ್ಮ ಬಳಸಲಾಗುತ್ತದೆ. ಶರೀರ ಹಲಸಿನ ಮರದ್ದು...
ಮೃದಂಗ ತಯಾರಿಕೆ ನಿರತ ರಾಮಸ್ವಾಮಿ
ಮೃದಂಗ ತಯಾರಿಕೆ ನಿರತ ರಾಮಸ್ವಾಮಿ

ಲಯ ಚರ್ಮವಾದ್ಯಗಳ ತಯಾರಿಗೆ ಹಸು, ಮೇಕೆ, ಎಮ್ಮೆ ಚರ್ಮ ಬಳಸಲಾಗುತ್ತದೆ. ಶರೀರ ಹಲಸಿನ ಮರದ್ದು. ಲೆಕ್ಕಾಚಾರದ ಬಿಗಿತಕ್ಕೆ ಹಾಗೂ ಎಳೆತಕ್ಕೆ ಎಮ್ಮೆಯ ಚರ್ಮದ ದಾರವೇ ಹೆಚ್ಚು ಯುಕ್ತ...

ಮೆಜೆಸ್ಟಿಕ್ಕಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಎದುರು, ಕೆಳ ರಸ್ತೆ ತಲುಪಿಸುವ ಮೆಟ್ಟಿಲುಗಳನ್ನು ಇಳಿದು ಹತ್ತು ಹೆಜ್ಜೆ ಹಾಕುತ್ತಿದ್ದಂತೆ `ತಾಧಿ ತೋಮ್ ನಂ' ಶಬ್ದ ಅನುರಣಿಸುತ್ತದೆ. ಇದೇನು ಸಂಗೀತ ಕಚೇರಿಗೆ ಕಲಾವಿದರ ತಂಡವೊಂದು ಅಣಿಯಾಗುತ್ತಿರಬಹುದೆ? ಲಯವಾದ್ಯದ ಶ್ರುತಿ ಹದಗೊಳ್ಳುತ್ತಿದೆ ಸರಿ.

ಆದರೆ ಬಲಕ್ಕೆ ಕಾಣುವ ಪುಟಾಣಿ ಮುಂಗಟ್ಟಿನಿಂದ ಹೊರಟ ನಾದವದು. ಮೃದಂಗ, ತಬಲಾ, ಕಂಜರಾಗಳಿಗೆ ಕಾಯಕಲ್ಪ  ನೀಡುವ ಕಿರಿದಾದರೂ ಹಿರಿ ವೇದಿಕೆಯಿದು. ಅಲ್ಲಿ
ನಡೆಯುತ್ತಿರೋದು ಕಚೇರಿಗೆ ಪೂರ್ವಭಾವಿ ಕಚೇರಿಯೆನ್ನೋಣ. `ನೋಡಿ, ಶಾನೆ ದೊಡ್ಡ ದೊಡ್ಡ ಕಲಾವಿದರಿಗೆಲ್ಲ ನಾನು ಮೃದಂಗ, ತಬಲಾ ಮಾಡ್ಕೊಟ್ಟಿದೀನಿ... ನನ್ನದು ಅರವತ್ತು ವರ್ಷ ಸರ್ವೀಸು ಸಾರ್' ಅಂತ ಕುಕ್ಕರಗಾಲಿನಲ್ಲಿ ಕುಂತು ತಬಲಾಗೆ ಚರ್ಮದ ದಾರ ಕರಾರುವಾಕ್ಕಾಗಿ ಬಿಗಿಯುತ್ತಿದ್ದ ಎಪ್ಪತ್ತು ದಾಟಿದ ಎಂ.ಆರ್. ರಂಗಸ್ವಾಮಿ ಪರಿಚಯಿಸಿಕೊಂಡರು. ಅವರ ಸಹಾಯಕ ಪ್ರಕಾಶ್ ಎರಡು ಬೋಗುಣಿಗಳಲ್ಲಿ ಕಪ್ಪು ಬಣ್ಣದ ಕರಣೈ ಮತ್ತು ಸುಣ್ಣ ಕಣಕಗಳ ತಯಾರಿಯಲ್ಲಿದ್ದರು. ಅಕ್ಕಿ ಹಿಟ್ಟಿನ ಕಣಕವನ್ನು ಚರ್ಮಕ್ಕೆ ಬಳಿಯುತ್ತಾರೆ.

ಚರ್ಮವಾದ್ಯ ತಯಾರಿಯ ಮರ್ಮ
ರಂಗಸ್ವಾಮಿಗೆ ಲಯವಾದ್ಯ ವೃತ್ತಿ ಪಿತ್ರಾರ್ಜಿತ. ಅವರ ತಂದೆ ರಂಗಯ್ಯ ಅರಳೆಪೇಟೆಯಲ್ಲಿ ಚರ್ಮವಾದ್ಯ ಅಂಗಡಿಯನ್ನಿಟ್ಟುಕೊಂಡಿದ್ದರು. ಹಳೇ ವಾದ್ಯಗಳಿಗೆ ಮರುಜೀವ ನೀಡುವುದು ಹೊಸದರ ನಿರ್ಮಿತಿಗಿಂತ ತ್ರಾಸ ಅಂತಾರೆ ಅವರು. ಒಂದು ಮೃದಂಗ ಅಥವಾ ತಬಲಾ ಹೊಸದಾಗಿ ಆರ್ಡರ್ ಕೊಟ್ಟು ಮಾಡಿಸಲು 3ರಿಂದ 10 ಸಾವಿರ ರು.ವರೆಗೆ ತಗಲುತ್ತದೆ. ಅದನ್ನವರು ಒಂದರಿಂದ ಒಂದೂವರೆ ತಿಂಗಳಲ್ಲಿ ಪೂರೈಸುತ್ತಾರೆ. ಹೊರ ಊರುಗಳೇನು, ಹತ್ತಿರದ ಹೊರ ರಾಜ್ಯದವರೂ ಆರ್ಡರ್ ಮಾಡುತ್ತಾರೆ. ವಾದ್ಯಗಳಿಗೆ ಶ್ರುತಿಚಿಕಿತ್ಸೆ ಪಡೆಯುತ್ತಾರೆ.

`ಶಾಸ್ತ್ರೀಯ ಸಂಗೀತ/ವಾದ್ಯ ಸಂಗೀತ ಕಲಿಯಲು ಮುಂದೆ ಬರುವ ಯುವಕರ ಸಂಖ್ಯೆ ಬೆರಳೆಣಿಕೆಯಷ್ಟು ಸಹ ಇಲ್ಲ. ಎಷ್ಟಾದರೂ ಇದು ಮೊಬೈಲ್, ಐಪ್ಯಾಡ್ ಕಾಲ ಸಾರ್. ಇನ್ನು ನನ್ನ ಈ ಕಸುಬು ಯಾರನ್ನು ತಾನೆ ಕೈ ಬೀಸಿ ಕರೆಯುತ್ತದೆ ಹೇಳಿ' ಎಂದವರು ರಾಗವೆಳೆದಾಗ ಅವರ ಮುಖದಲ್ಲಿ ವಿಷಾದದ ಗೆರೆಗಳಿದ್ದವು. ಅಂದಹಾಗೆ ಲಯ ಚರ್ಮವಾದ್ಯಗಳ
ತಯಾರಿಗೆ ಹಸು, ಮೇಕೆ, ಎಮ್ಮೆ ಚರ್ಮ ಬಳಸಲಾಗುತ್ತದೆ. ಶರೀರ ಹಲಸಿನ ಮರದ್ದು. ಲೆಕ್ಕಾಚಾರದ ಬಿಗಿತಕ್ಕೆ ಹಾಗೂ ಎಳೆತಕ್ಕೆ ಎಮ್ಮೆಯ ಚರ್ಮದ ದಾರವೇ ಹೆಚ್ಚು ಯುಕ್ತ.

ಕರಣೈಯನ್ನು ವಾದ್ಯದ ಕೇಂದ್ರಭಾಗಕ್ಕೆ ಬಳಿದು ಚಕ್ಕುಲಿ ಒರಳು ಬಿಲ್ಲೆಯಂಥ ವೃತ್ತಾಕೃತಿ ನಿರ್ಮಿಸಲಾಗುವುದು. ಅದರ ಮೇಲಿನ ತಾಡನದಿಂದ ಘಂಟಾಧ್ವನಿ ಹೊಮ್ಮುತ್ತದೆ, ಫೆರಿಕ್
ಆಕ್ಸೈಡ್ ಮತ್ತು ಗಂಜಿಪುಡಿಯನ್ನೂ ಹದ ಶ್ರುತಿಗೆ ಲೇಪಿಸುವುದುಂಟು.

ಸುಣ್ಣ ಏಕೆ? ಯಾವ ಉದ್ದೇಶಕ್ಕೆ?ಎಂದು ಪಶ್ನಿಸಿದ್ದಕ್ಕೆ ರಂಗಸ್ವಾಮಿ ಪ್ರತಿಕ್ರಿಯಿಸಲಿಲ್ಲ. ಅದು ವೃತ್ತಿರಹಸ್ಯವೆಂದು ನಾನು ತೆಪ್ಪಗಾದೆ. ಕರ್ನಾಟಕ ಸಂಗೀತಕ್ಕೆ ಮೃದಂಗ. ಹಿಂದೂಸ್ತಾನಿ ಸಂಗೀತಕ್ಕೆ ಅದಕ್ಕೆ ಸಂವಾದಿಯಾಗಿ ತಬಲಾ. ಮೃದಂಗ ಎರಡು ಭಾಗಗಳಾಗಿ ತಬಲಾ ಆಯಿತೆಂಬ ಮಾತಿದೆ. ಎರಡೂ ದೈವಿಕ ವಾದ್ಯಗಳೆಂಬ ನಂಬಿಕೆ ಪ್ರಚಲಿತ. ಶಿವ, ಗಣಪತಿ ಚರ್ಮವಾದ್ಯ ಹಿಡಿದವರೇ ತಾನೆ? ತಾಳ ಬೇಕು, ತಾಳಕ್ಕೆ ತಕ್ಕ ಮೇಳ ಬೇಕು ಎಂಬ ದಾಸವಾಣಿ ನೆನೆಯುವಾಗ ಹರಿಕಥಾ ಕಾಲಕ್ಷೇಪ ಕಲೆ ನೇಪಥ್ಯಕ್ಕೆ ಸರಿಯಿತಲ್ಲ ಎಂಬ ವ್ಯಥೆ ಸಹಜವಾಗಿಯೇ ಕಾಡುತ್ತದೆ.

-ಚಿತ್ರ, ಬರಹ: ಬಿಂಡಿಗನವಿಲೆ ಭಗವಾನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com