
ಬಳ್ಳಾರಿ: ವಿಶ್ವಸಂಸ್ಥೆಯಿಂದ ಗಾರ್ಡನ್ ಬ್ರೌನ್ ಶೌರ್ಯ ಪ್ರಶಸ್ತಿ ಪಡೆದು, ಅಂಧರಿಗಾಗಿ ಬೆಳಕು ಅಕಾಡೆಮಿ ಶಾಲೆ ನಡೆಸುತ್ತಿರುವ ಅಶ್ವಿನಿ ಅಂಗಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್‌ನ ಕ್ವೀನ್ಸ್ ಯಂಗ್ ಲೀಡರ್ಸ್ ಅವಾರ್ಡ್‌ಗೆ ಭಾಜನರಾಗಿದ್ದಾರೆ.
ಲಂಡನ್‌ನಲ್ಲಿರುವ ದಿ ಕ್ವೀನ್ ಎಲಿಜಬೆತ್ ಡೈಮಂಡ್ ಜೂಬ್ಲಿ ಟ್ರಸ್ಟ್ ಕಾಮನ್‌ವೆಲ್ತ್ ಒಕ್ಕೂಟ ದೇಶಗಳ ಯುವ ಸಾಧಕರಿಗೆ ಕ್ವೀನ್ಸ್ ಯಂಗ್ ಲೀಡರ್ಸ್ ಪ್ರಶಸ್ತಿ ಕೊಡುತ್ತಿದೆ. 2015ನೇ ಸಾಲಿನ ಪ್ರಶಸ್ತಿಗೆ 35 ದೇಶಗಳ 60 ಸಾಧಕರನ್ನು ಆಯ್ಕೆ ಮಾಡಿದ್ದು, ಜ.13ರಂದು ಘೋಷಿಸಲಾದ ಪಟ್ಟಿಯಲ್ಲಿ ಭಾರತದ ಅಶ್ವಿನಿ ಅಂಗಡಿ ಅವರೊಂದಿಗೆ ಅಕ್ಷಯ್ ಜಾಧವ್ ಹಾಗೂ ದೇವಿಕಾ ಮಲಿಕ್ ಇದ್ದಾರೆ.
18ರಿಂದ 29 ವರ್ಷದ ಯುವ ಸಾಧಕರ ಸಾಮಾಜಿಕ ಕೊಡುಗೆ, ಸಾಧನೆ,ಸಮಾಜ ಸೇವೆ ಇತ್ಯಾದಿಗಳನ್ನು ಪರಿಗಣಿಸಿ, ದಿ ಕ್ವೀನ್ ಎಲಿಬೆತ್ ಡೈಮಂಡ್ ಜೂಬ್ಲಿ ಟ್ರಸ್ಟ್ ಮತ್ತು ಕಾಮಿಕ್ ರಿಲೀಫ್ ಆ್ಯಂಡ್ ರಾಯಲ್ ಕಾಮನ್‌ವೆಲ್ತ್ ಸೊಸೈಟಿ ಈ ಪ್ರಶಸ್ತಿ ಕೊಡುತ್ತಿದ್ದು, ಪ್ರಾಜೆಕ್ಟ್ ಮ್ಯಾನೇಜರ್ ಫಾಬಿಯನ್ನೆ ಕ್ಯಾಟಿ ಕ್ಯಾಂ ಜ.13ರಂದು ಪ್ರಶಸ್ತಿಗೆ ಆಯ್ಕೆಯಾದವರ ಹೆಸರು ಘೋಷಣೆ ಮಾಡಿದ್ದಾರೆ. ಜು. 27ರಂದು ಬಕ್ಕಿಂಗ್ ಹ್ಯಾಮ್ ಅರಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ರಿಟನ್ ರಾಣಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಶ್ವಿನಿ ಅಂಗಡಿ 2013ರ ಜು. 12ರಂದು ವಿಶ್ವ ಸಂಸ್ಯೆಯ ಯುವ ಶೌರ್ಯ ಪ್ರಶಸ್ತಿ ಪಡೆದಿದ್ದರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಆಯ್ಕೆ ಮಾಡಿದ ವಿಶ್ವದ 7 ರಾಯಭಾರಿಗಳಲ್ಲಿ ಒಬ್ಬರಾಗಿದ್ದರು. ದುಬೈನಲ್ಲಿ ಗ್ಲೋಬಲ್ ಎಜುಕೇಷನ್ ಕಿಡ್ಸ್ ಫೋರಂ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಾಯಭಾರಿಯಾಗಿ ಭಾಗವಹಿಸಿದ್ದರು. ಕ್ವೀನ್ಸ್ ಯಂಗ್ ಲೀಡರ್ಸ್ ಅಶ್ವಿನಿ ಅಂಗಡಿ ಅವರಿಗೆ ಸಂದ ಮೂರನೇ ಅಂತಾರಾಷ್ಟ್ರೀಯ ಗೌರವ. ಈ ನಡುವೆ ಅಶ್ವಿನಿ ಅಂಗಡಿ ಬೆಂಗಳೂರಿನಲ್ಲಿ ಬೆಳಕು ಅಕಾಡೆಮಿಯನ್ನು ಆರಂಭಿಸಿ, ಸ್ವಂತ ಖರ್ಚಿನಲ್ಲಿ ಅಂಧ ಮಕ್ಕಳಿಗೆ ವಸತಿ ಶಾಲೆ ನಡೆಸುತ್ತಿದ್ದಾರೆ.
ನನಗೆ ಸಿಕ್ಕಿರುವ ಕ್ವೀನ್ಸ್ ಯಂಗ್ ಲೀಡರ್ಸ್ ಅವಾರ್ಡ್ ದೇಶದ ಅಂಗ ವಿಕರಲರ ಪರವಾಗಿ ಹೋರಾಟ ಮಾಡುವ ಪ್ರತಿಯೊಬ್ಬರಿಗೆ ಸಲ್ಲಬೇಕಾಗಿದೆ. ಅಂಗವಿಕಲರ ಪರವಾಗಿ ಕೆಲಸ ಮಾಡುವ ನನ್ನ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುವ ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿರುವುದಕ್ಕೆ ಸಂತೋಷವಾಗಿದೆ.
-ಅಶ್ವಿನಿ ಅಂಗಡಿ
ಗಾರ್ಡನ್ ಬ್ರೌನ್ ಪ್ರಶಸ್ತಿ ಪುರಸ್ಕೃತೆ
-ಶಶಿಧರ ಮೇಟಿ
Advertisement