ಅಂಟಾರ್ಟಿಕ್ ಸಾಗರದಲ್ಲಿ ಈಜಿ ದಾಖಲೆ ಬರೆದ 'ಭಕ್ತಿ'!

ಭಾರತದ ಈಜುಗಾರ್ತಿ ಭಕ್ತಿ ಶರ್ಮಾ ಹೊಸ ದಾಖಲೆಯನ್ನು ಬರೆದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕೇವಲ 1 ಡಿಗ್ರಿ ಸೆಲ್ಶಿಯಸ್...
ಭಕ್ತಿ ಶರ್ಮಾ (ಕೃಪೆ : ಭಕ್ತಿ ಶರ್ಮಾ ಅವರ ವೆಬ್ಸೈಟ್ ಗ್ಯಾಲರಿಯಿಂದ)
ಭಕ್ತಿ ಶರ್ಮಾ (ಕೃಪೆ : ಭಕ್ತಿ ಶರ್ಮಾ ಅವರ ವೆಬ್ಸೈಟ್ ಗ್ಯಾಲರಿಯಿಂದ)

ನವದೆಹಲಿ:  ಭಾರತದ ಈಜುಗಾರ್ತಿ ಭಕ್ತಿ ಶರ್ಮಾ ಹೊಸ ದಾಖಲೆಯನ್ನು ಬರೆದು ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕೇವಲ 1 ಡಿಗ್ರಿ ಸೆಲ್ಶಿಯಸ್ ಉಷ್ಣತೆಯಿರುವ ಅಂಟಾರ್ಟಿಕ್ ಸಾಗರದಲ್ಲಿ ಈಜಿ 52 ನಿಮಿಷದಲ್ಲಿ 1.4 ಮೈಲುಗಳನ್ನು ಕ್ರಮಿಸಿದ ಭಕ್ತಿ ಶರ್ಮಾ ಈ ಮೂಲಕ ಹೊಸ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ಬ್ರಿಟಿಷ್ ಓಪನ್ ವಾಟರ್ ಈಜುಗಾರ್ತಿ ಲೂಯಿಲ್ ಪೂಹ್ ಮತ್ತು ಅಮೆರಿಕದ ಈಜುಗಾರ್ತಿ ಲೆನ್ನೆ ಕಾಕ್ಸ್ ಅವರ ದಾಖಲೆ ಮುರಿದು ಭಕ್ತಿ ಶರ್ಮಾ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಸಾಧನೆ ಮಾಡಿದ ಮೊದಲ ಏಷ್ಯಾದ ಮಹಿಳೆ ಮತ್ತು ಅತೀ ಕಿರಿಯ ಈಜುಗಾರ್ತಿ ಎಂಬ ಹಿರಿಮೆಯೂ ಭಕ್ತಿಯ ಪಾಲಾಗಿದೆ.

ಭಕ್ತಿ ಶರ್ಮಾ ಅವರ ಈ ಸಾಧನೆಗೆ ನಾವು ಹೆಮ್ಮೆ ಪಡುತ್ತೇವೆ. ಇಡೀ ದೇಶವೇ ಆಕೆಯ ಬಗ್ಗೆ ಹೆಮ್ಮೆ ಪಡುತ್ತಿದೆ. ಅದರಲ್ಲೂ ಹುಡುಗಿಯರು ಆಕೆಯಿಂದ ಪ್ರೇರಿತರಾಗಿ ಈಜು ಕಲಿಯಲು ಉತ್ಸುಕರಾಗುತ್ತಾರೆ. ಒಳ್ಳೆಯ ಬೆಂಬಲ ಮತ್ತು ಅವಕಾಶ ಸಿಕ್ಕರೆ ಭಾರತದಲ್ಲಿ ಇಂಥಾ ಪ್ರತಿಭೆಗಳನ್ನು ಬೆಳೆಸಬಹುದು ಎಂಬುದು ಈಕೆಯ ಈ ಸಾಧನೆಯಿಂದ ಸ್ಪಷ್ಟವಾಗುತ್ತದೆ ಎಂದು ಹಿಂದೂಸ್ತಾನ್ ಜಿಂಕ್‌ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅಖಿಲೇಶ್ ಜೋಷಿ ಹೇಳಿದ್ದಾರೆ.


2010ರಲ್ಲಿ ಟೆನ್‌ಜಿಂಗ್ ನೋರ್ಗೇ ರಾಷ್ಟ್ರೀಯ ಸಾಹಸ ಪ್ರಶಸ್ತಿ ಗಳಿಸಿದ್ದ ಭಕ್ತಿ ತನ್ನ ಸಾಧನೆಗೆ ಬೆಂಬಲ ನೀಡಿದ ಹಿಂದೂಸ್ತಾನ್ ಜಿಂಕ್‌ಗೆ ಧನ್ಯವಾದಗಳನ್ನರ್ಪಿಸಿದ್ದಾರೆ.  ಕಳೆದ 10 ವರ್ಷಗಳಿಂದ ಭಕ್ತಿ ಓಪನ್ ವಾಟರ್ ಸ್ವಿಮಿಂಗ್ ಅಭ್ಯಾಸ ಮಾಡುತ್ತಿದ್ದಾರೆ.

ಅಂಟಾರ್ಟಿಕ್ ಸಾಗರದಲ್ಲಿ ಈಜುವ ಸಾಧನೆ ಮಾಡುವ ಮೂಲಕ ಇದೀಗ 5 ಸಾಗರಗಳನ್ನೂ ಈಜಿದ ಸಾಹಸಿ ಎಂಬ ಖ್ಯಾತಿಗೆ ಭಕ್ತಿ ಶರ್ಮಾ ಪಾತ್ರವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com