ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ ಆಟೋ ಚಾಲಕಿ ಯಲ್ಲಮ್ಮ!

22 ಹರೆಯದ ಯೆಲ್ಲಮ್ಮ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದರೂ ಆಕೆಯಲ್ಲೊಂದು ಛಲವಿದೆ, ಐಎಎಸ್ ಆಗಬೇಕೆಂಬ ಕನಸೂ...
ಆಟೋ ಚಾಲಕಿ ಯಲ್ಲಮ್ಮ
ಆಟೋ ಚಾಲಕಿ ಯಲ್ಲಮ್ಮ
ಬೆಂಗಳೂರಿನ ಬ್ಯುಸಿ ರಸ್ತೆಗಳಲ್ಲಿ ಯಲ್ಲಮ್ಮ ಆಟೋ ಓಡಿಸುತ್ತಿದ್ದಾರೆ. ಇದು ಈಕೆಯ ಹೊಟ್ಟೆ ಪಾಡು ಮಾತ್ರವಲ್ಲ ಮಹತ್ ಸಾಧನೆಯ ದಾರಿಯಲ್ಲಿರುವ ಓಟವೂ ಹೌದು.
22 ಹರೆಯದ ಯಲ್ಲಮ್ಮ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದರೂ ಆಕೆಯಲ್ಲೊಂದು ಛಲವಿದೆ, ಐಎಎಸ್ ಆಗಬೇಕೆಂಬ ಕನಸೂ. ಹೌದು ಈಕೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. 
ಯಲ್ಲಮ್ಮನಿಗೆ 18 ವರುಷವಿದ್ದಾಗ ಡೆಕೊರೇಟರ್ ಒಬ್ಬನ ಜತೆ ಮದುವೆಯಾಗಿತ್ತು. ಆ ಸಂಬಂಧದಲ್ಲಿ ಒಂದು ಮಗುವೂ ಇದೆ. ಆದರೆ ಈಕೆ ಈಗ ಸಿಂಗಲ್ ಮದರ್.  
ತನ್ನ ಭಾವನ ಸಹಾಯದಿಂದ ಆಟೋ ಚಾಲನೆ ಮಾಡಲು ಕಲಿತ ಯಲ್ಲಮ್ಮನಿಗೆ ಮೊದಲು ಯಾರೊಬ್ಬರೂ ಆಟೋ ನೀಡಲು ಮುಂದೆ ಬರಲಿಲ್ಲ. ಬಾಡಿಗೆಗೆ ಆಟೋ ಚಾಲನೆ ಮಾಡುವುದಾಗಿ ಆಟೋ ಮಾಲೀಕರನ್ನು ಭೇಟಿಯಾದಾಗ, ಮಹಿಳೆಯರಿಗೆ ಆಟೋ ನೀಡುವುದಿಲ್ಲ ಎಂಬ ಉತ್ತರ ಸಿಕ್ಕಿತು. ಹೀಗೆ ತುಂಬ ಪ್ರಯತ್ನಗಳನ್ನು ಮಾಡಿದ ನಂತರ ಮೆಕ್ಯಾನಿಕ್ ಒಬ್ಬರು ದಿನಕ್ಕೆ ರು. 130 ಬಾಡಿಗೆಗೆ ಆಟೋ ಕೊಟ್ಟರು. ಯಲ್ಲಮ್ಮ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಆಟೋ ಚಲಾಯಿಸುತ್ತಾರೆ. ಬಿಡುವಿನಲ್ಲಿ ಸುದ್ದಿ ಪತ್ರಿಕೆ, ಮ್ಯಾಗಜಿನ್‌ಗಳನ್ನೋದಿ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ.
ದಿನಕ್ಕೆ  ರು. 700-800 ಸಂಪಾದನೆ ಮಾಡುವ ಯಲ್ಲಮ್ಮನಿಗೆ ದುಡಿದ ದುಡ್ಡಿನ ಸಮಾರ್ಧ ಪಾಲು ಆಟೋ ಮಾಲೀಕನಿಗೆ ಮತ್ತು ಇಂಧನಕ್ಕೆ ವ್ಯಯವಾಗುತ್ತದೆ. ಅಷ್ಟೇ ಅಲ್ಲ, ಆಟೋ  ಚಾಲನೆಗಾಗಿ ರೋಡಿಗಿಳಿದಾಗ ಇತರ ಆಟೋ ಚಾಲಕರು ಈಕೆಯಿಂದಾಗಿ ತಮ್ಮ ಬಾಡಿಗೆಗೆ ಸಂಚಕಾರವುಂಟಾಗುತ್ತದೆ ಎಂದು ಮೂತಿ ತಿರುವಿದ್ದೂ ಉಂಟು. ಆದರೆ ಯೆಲ್ಲಮ್ಮ ಧೈರ್ಯಗುಂದದೆ ತಮ್ಮ ಕಾಯಕ ನಿರ್ವಹಿಸುತ್ತಿದ್ದಾರೆ. 
ತನ್ನ ಜೀವನ ನಿರ್ವಹಣೆಯೊಂದಿಗೆ ದೊಡ್ಡ ಕನಸೊಂದನ್ನು ಇಟ್ಟುಕೊಂಡು ಅದಕ್ಕಾಗಿ ಪರಿಶ್ರಮ ಪಡುತ್ತಿರುವ ಯಲ್ಲಮ್ಮನಿಗೆ ಶುಭವಾಗಲಿ.
ಆಕೆಗೆ ನಿಮ್ಮ ಹಾರೈಕೆಯೂ ಇರಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com