ಗೆಣಸಾ ನೀನು!?

ಗೆಣಸಾ ನೀನು!?
Updated on: 

ರುಚಿ, ಬಣ್ಣ, ಆಕಾರ ಎಲ್ಲದರಲ್ಲೂ ಗೆಣಸಿಗಿಂತ ಸಂಪೂರ್ಣ ಭಿನ್ನ ಈ ಸಿಹಿಗೆಣಸು. ಗೆಣಸು ಬೆಳೆಗಾರರ ಪ್ರಮಾಣಕ್ಕೆ ಹೋಲಿಸಿದರೆ ಸಿಹಿಗೆಣಸು ಬೆಳೆಯುವವರ ಸಂಖ್ಯೆ ರಾಜ್ಯದಲ್ಲಿ ತೀರಾ ಕಮ್ಮಿ. ಕರಾವಳಿಯಲ್ಲಿ ಅಡಕೆ ತೋಟದ ಮಧ್ಯೆ ಇತರ ತರಕಾರಿ ಬೆಳೆಗಳೊಂದಿಗೆ ಐದು ವರ್ಷಗಳಿಂದ ಸಿಹಿಗೆಣಸು ಬೆಳೆಯುತ್ತಿರುವ ಕಾರ್ಕಳ ತಾಲೂಕಿನ ಬೇಳ್ಮಣುವಿನ ರಾಘವೇಂದ್ರ ನಾಯಕರಿಗೆ ಈ ಬೆಳೆ ಬಗ್ಗೆ ಸಾಕಷ್ಟು ಅನುಭವ.
ಜೇಡಿಮಣ್ಣನ್ನು ಹೊರತುಪಡಿಸಿ ಇತರೆಲ್ಲಾ ಮಣ್ಣಲ್ಲೂ ಬೆಳೆಯಬಹುದು. ಮಾರ್ಚ್‌ನಲ್ಲಿ ನೆಟ್ಟರೆ ಮೇನಲ್ಲಿ ಕಟಾವಿಗೆ ಬರುತ್ತೆ. ಅಂದರೆ ಮೂರು ತಿಂಗಳಲ್ಲಿ ಮಾರಾಟಕ್ಕೆ ಸಿದ್ಧ. ನಾಟಿಗೆ ಬೇಕಾದ ಗಡ್ಡೆ ಬೆಳೆಗಾರರ ಬಳಿ ಲಭ್ಯ. ಬೆಳೆಗೆ ಒಂಚೂರು ನೀರಿನ ಅವಶ್ಯಕತೆ ಇದೆ.
ಬೆಳೆಯುವ ಬಗೆ
ಬಳ್ಳಿಯಿಂದ ಬಳ್ಳಿಗೆ ಅರ್ಧ ಅಡಿ ಅಂತರ ಬಿಟ್ಟು ಅರ್ಧ ಅಡಿ ಆಳದಲ್ಲಿ ನಾಟಿ ಮಾಡಬೇಕು. ನಿತ್ಯ ಹನಿ ನೀರಾವರಿ ಮೂಲಕ ನೀರು ಪೂರೈಸಬೇಕು. ಗಡ್ಡೆ ಚಿಗುರೊಡೆದ ನಂತರ ಎರಡು ದಿನಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ನಾಟಿಯಾದ ಒಂದು ತಿಂಗಳ ಬಳಿಕ ಒಂದು ಬಾರಿ ಮಣ್ಣನ್ನು ಬೂದಿಯ ಮಿಶ್ರಣದೊಂದಿಗೆ ಏರಿ ಹಾಕಿದರೆ ಒಳ್ಳೆಯದು.
ನೀರಿನ ಸೌಲಭ್ಯ ಇರುವ ಕಡೆ ವರ್ಷದಲ್ಲಿ ಮೂರು ಬಾರಿ ಸಿಹಿಗೆಣಸು ಬೆಳೆಯಬಹುದು. ಗೊಬ್ಬರ, ನೀರನ್ನು ಸಿಹಿಗೆಣಸಿನ ಬಳ್ಳಿಯ ಸಾಲಿಗೆ ನೀಡಬೇಕು.
ಚಿಪ್ಸ್ ತಯಾರಿ, ಪದಾರ್ಥ, ಪೋಡಿ, ಹಪ್ಪಳ ಮುಂತಾದವುಗಳ ತಯಾರಿಯಲ್ಲಿ ಬಳಕೆಯಾಗುವ ಸಿಹಿಗೆಣಸನ್ನು ಬೇಯಿಸಿ ಕೂಡ ತಿನ್ನಬಹುದು. ಹೆಸರೇ ಸೂಚಿಸುವಂತೆ ಗಡ್ಡೆ ಸಿಹಿಯಾಗಿದ್ದು, ಕೆಂಬಣ್ಣ ಹೊಂದಿರುತ್ತದೆ.
ಕೊಟ್ಟಿಗೆ ಗೊಬ್ಬರ ಬೆಳೆಗೆ ಸೂಕ್ತ. ಕೆಜಿಗೆ ಹತ್ತರಿಂದ ಹದಿನೈದು ರುಪಾಯಿ ದರವಿದೆ.
ರಾಘವೇಂದ್ರ (ಮೊ. 8861866920) ಅವರ ಪ್ರಕಾರ, ಮೂರು ತಿಂಗಳಲ್ಲಿ ಅಧಿಕ ಇಳುವರಿ ನೀಡಬಲ್ಲದು. ಮೆಣಸು, ಸುವರ್ಣಗಡ್ಡೆ, ಬಾಳೆ ತೋಟದ ಮಧ್ಯೆ ಮಿಶ್ರ ತರಕಾರಿ ಬೆಳೆಯಾಗಿ ಬೆಳೆಯಬಹುದು. ನಾಟಿಯ ಆರಂಭದಲ್ಲಿ ಬಿಸಿಲು ಅತ್ಯಗತ್ಯ. ಮೂರು ತಿಂಗಳಲ್ಲಿ ಬಳ್ಳಿ ಒಣಗುವುದು. ನಂತರ ಗಡ್ಡೆ ಅಗೆದು ತೆಗೆಯಬಹುದು. ನೀರು, ನೀಡಿದ ಗೊಬ್ಬರ, ಮಣ್ಣಿನ ಸಡಿಲತೆಗಳಿಗನುಗುಣವಾಗಿ ಗಡ್ಡೆ ದೊಡ್ಡದಾಗಿ ಬೆಳೆಯುತ್ತದೆ. ಒಂದು ಬಳ್ಳಿ ಎರಡರಿಂದ ಮೂರು ಕೆಜಿ ಇಳುವರಿ ನೀಡುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆ. ಕೆಂಬಣ್ಣದಲ್ಲಿರುವ ಗಡ್ಡೆಯನ್ನು ಹಸಿಯಾಗಿ ಕೂಡಾ ಸೇವಿಸುತ್ತಾರೆ.

- ಚಂದ್ರಹಾಸ ಚಾರ್ಮಾಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com