

ಇಪ್ಪತ್ತು ವರ್ಷಗಳ ಹಿಂದೆ ಅದೊಂದು ಸಮತಟ್ಟಾದ ಬೋಳು ಜಾಗ. ಅಲ್ಲಲ್ಲಿ ಕರಿಕಲ್ಲು ಹಾಸಿದಂತೆ ಹರಡಿತ್ತು. ಆದರೀಗ ಅದು ಅಕೇಶಿಯಾ ಗಿಡಗಳಿಂದ ಸಮೃದ್ಧ. ಕಾಡೆಂದು ಒಳಹೊಕ್ಕರೆ ಸುತ್ತಲೂ ಅಕೇಶಿಯಾವಿದ್ದು, ಮಧ್ಯದಲ್ಲಿ ತರಹೇವಾರಿ ತರಕಾರಿ ಬೆಳೆದು ನಿಂತಿವೆ.
ಈ ಚಿತ್ರಣ ಕಾಣಸಿಗುವುದು ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮದ ನಾಜಗಾರಿನ ಗುಡ್ಡದ ಮೇಲೆ. ಈ ರೀತಿಯಲ್ಲಿ ಗುಡ್ಡದ ಮೇಲಿನ ಸಂಪೂರ್ಣ ಚಿತ್ರಣ ಬದಲಿಸಿದ ರೈತ ಸ್ಥಳೀಯ ನಿವಾಸಿ ಬಡಕ ಹನುಮಂತ ಗೌಡ.
ಜೀವನದಲ್ಲಿ ಹೊಸತನ್ನು ಆವಿಷ್ಕರಿಸಲು ಪ್ರಯತ್ನಿಸುವ ಅತೀವ ಹಂಬಲವಿರುವ ಇವರು ಬೇಸಿಗೆಯಲ್ಲಿ ಚಮಚ ನೀರಿಗೂ ಗತಿಯಿರದ ಈ ಜಾಗದಲ್ಲಿ ಮೊದಲು ಸುತ್ತಲೂ ಅಕೇಶಿಯಾ ನೆಟ್ಟರು. ನಂತರ ಮಧ್ಯದಲ್ಲಿ ಸುಮಾರು 300ಕ್ಕೂ ಅಧಿಕ ಗೇರುಗಿಡ, ವಿವಿಧ ಜಾತಿಯ ಮಾವು, ಹಲಸಿನ ತಳಿಯನ್ನು ಬದುಕಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಾತ್ರ ಇಲ್ಲಿ 8ಕ್ಕೂ ಅಧಿಕ ಬಗೆಯ ತರಕಾರಿ ಗಿಡ ನೆಟ್ಟು ತಕ್ಕ ಮಟ್ಟಿಗಿನ ಲಾಭ ಗಳಿಸುತ್ತಿದ್ದಾರೆ. ಈ ವರ್ಷ ಇವರು ಸುಮಾರು ಎರಡು ಎಕರೆ ಜಾಗದಲ್ಲಿ ಬೂದುಕುಂಬಳು, ಸಿಹಿಗುಂಬಳು, ಬೆಂಡೆ, ಮುಳ್ಳುಸೌತೆ, ಹಾಗಲು, ಹೀರೆ, ಸೋಡಿಗೆ, ಕೆಂಪುಹರಿವೆ ಸೊಪ್ಪನ್ನು ಬೆಳೆದಿದ್ದಾರೆ. ಇನ್ನುಳಿದ ಒಂದು ಎಕರೆ ಜಾಗದಲ್ಲಿ ಮೊಗೆ ಮತ್ತು ಇಬ್ಬಡಲು ಹಣ್ಣಿನ ಬೀಜ ಹಾಕಿದ್ದಾರೆ.
ಕೃಷಿ ಹೇಗೆ?
ತರಕಾರಿ ಗಿಡಗಳಿಗೆ ಬೇಕಾದ ಸಗಣಿ ಗೊಬ್ಬರ, ಕೋಳಿಪಿಟ್ಟಿ ಗೊಬ್ಬರವನ್ನು ಮಳೆಗಾಲಕ್ಕಿಂತ ಮೊದಲೇ ಸಂಗ್ರಹಿಸಿರುತ್ತಾರೆ. ತದನಂತರ ಜೂನ್‌ನಲ್ಲಿ ಆರಂಭಗೊಳ್ಳುವ ಮೊದಲ ಮಳೆಯಲ್ಲಿ ಭೂಮಿ ಹದಗೊಳಿಸಿ ಅರ್ಧ ಜಾಗದಲ್ಲಿ ಬೆಂಡೆ, ಹೀರೆ, ಹಾಗಲು, ಸೌತೆ, ಸೋಡಿಗೆ ಗಿಡ ನೆಡುತ್ತಾರೆ. ಮುಂದೆ ಮೊಗೆ ಮಳೆ ಪ್ರಾರಂಭವಾಗುವಾಗ ಇನ್ನರ್ಧ ಜಾಗದಲ್ಲಿ ಇಬ್ಬುಡಲು ಹಾಗೂ ಮೊಗೆಕಾಯಿಯ ಬೀಜ ಬಿತ್ತುತ್ತಾರಂತೆ. ಅತ್ಯಂತ ಶಿಸ್ತಿನಲ್ಲಿ ತರಕಾರಿ ಗಿಡಗಳ ಸಾಲು ನಿರ್ಮಿಸುವ ಇವರು 30 ಅಡಿ ಉದ್ದ, 2 ಅಡಿ ಅಗಲ 1 ಅಡಿ ಎತ್ತರದ ಮಡಿ ಅಠವ ಪಟ್ಟೆ ನಿರ್ಮಿಸಿ ಸುಮಾರು 2 ಅಡಿ ಅಂತರದಲ್ಲಿ ಬೀಜ ಬಿತ್ತಿದ್ದಾರೆ. ಬೀಜ ಮೊಳಕೆಯೊಡೆದು ಸರಾಸರಿ ನಾಲ್ಕು ಎಲೆ ಬೆಳೆದ ನಂತರ ಸಗಣಿ ಗೊಬ್ಬರವನ್ನು ಬುಡದಲ್ಲಿ ಹಾಕುತ್ತಾರೆ. ಪ್ರತಿ 20 ದಿನಕ್ಕೆ ಒಮ್ಮೆಯಂತೆ ಒಟ್ಟು ಮೂರು ಸಲ ವಿವಿಧ ಬಗೆಯ ಗೊಬ್ಬರ ನೀಡಿರುವ ಇವರು ಹೆಚ್ಚು ಸಗಣಿ ಹಾಗೂ ಕೋಳಿಪಿಟ್ಟಿ ಗೊಬ್ಬರವನ್ನು ಮತ್ತು ಸ್ವಲ್ಪ ಪ್ರಮಾಣದಲ್ಲಿ ಸುಫಲಾ ಗೊಬ್ಬರ ಹಾಕಿದ್ದೇನೆ ಎನ್ನುತ್ತಾರೆ.
ಆದಾಯ
ಅಗಸ್ಟ್ ಮೊದಲ ವಾರದಲ್ಲಿಯೇ ಬೆಂಡೆ, ಹೀರೆ, ಹಾಗಲು, ಸೌತೆ ದೊರೆಯುತ್ತದೆ. ಆರಂಭದಲ್ಲಿ ಇಳುವರಿ ಕಡಿಮೆಯಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಜಾಸ್ತಿಯಿದ್ದು, ಉತ್ತಮ ಬೆಲೆಗೆ ಮಾರಾಟವಾಗುತ್ತದೆಯಂತೆ. ನಿತ್ಯವೂ ಇವರ ಪತ್ನಿ ಹೊನ್ನಾವರಕ್ಕೆ ತರಕಾರಿಗಳನ್ನು ಒಯ್ದು, ರಸ್ತೆ ಬದಿಯಲ್ಲಿ ಕುಳಿತು ಮಾರಿ ಬರುತ್ತಾರೆ. ಇವರೇ ಹೇಳುವಂತೆ 4- 5 ಬೆಂಡೇಕಾಯಿಗೆ 10, 2 ಹಾಗಲಕಾಯಿಗೆ 10, 2- 3 ಹೀರೇಕಾಯಿಗೆ 20, 2 ಸೌತೆಕಾಯಿಗೆ 20 ದೊರೆಯುತ್ತದೆಯಂತೆ. ಹೀಗೆ ಸುಮಾರು ಅಕ್ಟೋಬರ್‌ವರೆಗೂ ಆದಾಯ ಬರುತ್ತಲೇ ಇರುತ್ತದೆ. ಅಕ್ಟೋಬರ್‌ನಲ್ಲಿ ಮೊಗೆಕಾಯಿ ಮತ್ತು ಇಬ್ಬಳೆ ಹಣ್ಣಿನ ಫಸಲು ದೊರೆಯುತ್ತದೆ. ಇಬ್ಬಳಿಗೆ 20ರಿಂದ 50 ಹಾಗೂ ಮೊಗೆಕಾಯಿಗೆ ರು. 30ರಿಂದ 70 ತನಕ ಮಾರಾಟವಾಗುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಲಿವೇಂದ್ರನನ್ನು ಕೂರಿಸಲು ಪ್ರತಿ ಮನೆಯಲ್ಲೂ ಮೊಗೆಕಾಯಿ ಖರೀದಿಸುತ್ತಾರೆ. ಆಗ ಮಾತ್ರ ಒಂದು ಮೊಗೆಕಾಯಿಗೆ 150 ತನಕ ಮಾರಾಟವಾಗುತ್ತದೆ.
- ಪ್ರೊ. ಶಿವಾನಂದ ಎಸ್. ಭಟ್ಟ