ಕುಂಬಳಕಾಯಿ

ಕುಂಬಳಕಾಯಿ
Updated on: 

ವಿಟಮಿನ್ 'ಎ' ಜೀವಸತ್ವದ ಗಣಿಯಾಗಿರುವ ಕುಂಬಳಕಾಯಿ ಆರೋಗ್ಯಕ್ಕೆ ಒಳ್ಳೆಯದು. ಅದೇ ರೀತಿ ಬೂದುಗುಂಬಳದಲ್ಲಿ ವಿಟಮಿನ್ 'ಎ', 'ಬಿ' ಮತ್ತು 'ಸಿ' ಯಥೇಚ್ಛವಾಗಿತ್ತದೆ. ಇನ್ನು ಹಬ್ಬ- ಹರಿದಿನ ಮೊದಲಾದ ಶುಭ ಕಾರ್ಯದಲ್ಲೂ ಬೂದುಗುಂಬಳವನ್ನು ಬಳಸುತ್ತಾರೆ. ಹಾಗಾಗಿ ಕುಂಬಳಕಾಯಿಗೆ ಬೇಡಿಕೆ ಹೆಚ್ಚುತ್ತಿದೆ.

ಬೆಳೆಯುವ ವಿಧಾನ
ಜಮೀನು ಹದಮಾಡಿದ ಬಳಿಕ 3 ಅಡಿ ಅಂತರದಲ್ಲಿ ಬೀಜ ನಾಟಿ ಮಾಡಬೇಕು. ಸಾಲಿನಿಂದ ಸಾಲಿಗೆ 8 ಅಡಿ ಅಂತರ ಇರಬೇಕು. ಇದರಿಂದ ಬಳ್ಳಿ ಹುಲುಸಾಗಿ ಬೆಳೆಯಲು ಸಹಕಾರಿಯಾಗುತ್ತದೆ. 2 ಸೆಂ.ಮೀ. ಆಳದಲ್ಲಿ ಬೀಜ ಬಿತ್ತಬೇಕು. ಬೀಜದ ಜತೆಗೆ ಆಕಳ ಸಗಣಿ ಪುಡಿ ಹಾಕಿದರೆ ಉತ್ತಮ. 1 ಕೆಜಿ ಬೀಜಕ್ಕೆ 100 ಕೆಜಿಯಷ್ಟು ಆಕಳ ಸಗಣಿ ಪುಡಿ ಬೇಕಾಗುತ್ತದೆ. ಬಿತ್ತಿದ 20 ದಿನದ ಜೀವಾಮೃತ ಸಿಂಪಡಣೆ ಮಾಡಬೇಕು. ಒಟ್ಟು 4 ಬಾರಿ ಜೀವಾಮೃತ ಸಿಂಪಡಿಸಬೇಕು. ಇದರಿಂದ ರೋಗ, ಕೀಟ ಬಾಧೆ ನಿಯಂತ್ರಿಸಬಹುದು. ಜತೆಗೆ ಬೆಳೆಗೆ ಬೇಕಾದ ಪೌಷ್ಟಿಕಾಂಶವನ್ನೂ ಒದಗಿಸುತ್ತದೆ. ಬೀಜ ನಾಟಿ ಮಾಡಿದ 100ರಿಂದ 150 ದಿನದಲ್ಲಿ ಅವಧಿಯಲ್ಲಿ ಫಸಲು ಕೈಗೆ ಸಿಗಲಾರಂಭಿಸುತ್ತದೆ. ಜೂನ್- ಜುಲೈ, ಆಗಸ್ಟ್- ಸೆಪ್ಟೆಂಬರ್, ಜನವರಿ 15ರಿಂದ ಮಾರ್ಚ್ 15ರವರೆಗೆ ಬೀಜ ಬಿತ್ತನೆಗೆ ಸಕಾಲ. ಉತ್ತಮವಾಗಿ ನಿರ್ವಹಣೆ ಮಾಡಿದರೆ ಎಕರೆಗೆ 2000- 3500 ಕಾಯಿ ಪಡೆಯಬಹುದು. ತೂಕದಲ್ಲಿ ಹೇಳಬೇಕೆಂದರೆ 8ರಿಂದ 12 ಟನ್ ಇಳುವರಿ ಪಡೆಯಬಹುದು.

ತಳಿಗಳು
ಬಿಳಿ, ಕೆಂಪು ಕುಂಬಳ, ಬೂದುಗುಂಬಳ, ಸೂರ್ಯಮುಖಿ, ಆರ್ಕಾ ಚಂದನ್ ರಾಜ್ಯದಲ್ಲಿ ಬೆಳೆಯುವ ಪ್ರಮುಖ ತಳಿಗಳಾಗಿವೆ.

ಮಣ್ಣು
ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯಬಹುದು. ಹೆಚ್ಚಿನ ಇಳುವರಿಗಾಗಿ ಮರಳು ಮಿಶ್ರಿತ ಕೆಂಪು ಮಣ್ಣು ಉತ್ತಮ.

ರೋಗಗಳು
ಬೂದಿ ರೋಗ, ಬೂಜ ರೋಗ, ನಂಜು ರೋಗ ಪ್ರಮುಖವಾಗಿ ಬರುತ್ತವೆ. ಹೇನು, ಹಣ್ಣು ನೊಣ, ಎಲೆ ಸುರಂಗ ಕೀಟ, ಕುಂಬಳ ಕೀಟ ಬರಬಹುದು. ನಿಯಂತ್ರಣಕ್ಕೆ ಬೇವು, ಕಲ್ನಾರು, ಸೀತಾಫಲದ ಕಷಾಯ ಮಾಡಿ ಗೋಮೂತ್ರ, ಹುಳಿ ಮಜ್ಜಿಗೆ ಸೇರಿಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗದಗ ತಾಲೂಕಿನ ಹುಲಕೋಟಿ ಗ್ರಾಮದ ಸುರೇಶ್‌ಗೌಡ ಪಾಟೀಲ್ (9480127759) ಅವರನ್ನು ಸಂಪರ್ಕಿಸಬಹುದು.

- ಮಹೇಶ್ ಅರಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com