ಫೈದರ್ಬಿಯಾ ಅಲ್ಬಿಡ

ಫೈದರ್ಬಿಯಾ ಅಲ್ಬಿಡ
Updated on: 

ಆಫ್ರಿಕಾದ ಕೀನ್ಯಾ ಎಂದಾಕ್ಷಣ ನೆನಪಾಗುವುದು ವಿಸ್ತಾರವಾದ ಹುಲ್ಲುಗಾವಲು, ಡಿಸ್ಕವರಿ ಚಾನೆಲ್ಲಿನಲ್ಲಿ ತೋರಿಸುವ ಕಾಡು ಪ್ರಾಣಿಗಳು, ಮಸಾಯ್ಮಾರದ ಅದ್ಭುತ ಪ್ರಾಣಿಗಳ ವಲಸೆ ಇತ್ಯಾದಿ...
ಇದೆಲ್ಲದರ ಜತೆಗೆ ಗಮನಿಸಬೇಕಾದ ಮತ್ತೊಂದು ವಿಶೇಷ- ಇಲ್ಲಿರುವ ವಿಶ್ವ ಕೃಷಿ ಅರಣ್ಯ ಸಂಸ್ಥೆ (http://www.worldagroforestrycentre.org). ಇದು ಕೀನ್ಯಾದ ನೈರೋಬಿಯಲ್ಲಿದೆ. ಅಂತಾರಾಷ್ಟ್ರೀಯ ಕೃಷಿ ಸಂಶೋಧನಾ ಸಲಹಾ ಮಂಡಳಿಯಲ್ಲಿರುವ 15 ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಈ ವಿಶ್ವ ಕೃಷಿ ಅರಣ್ಯ ಸಂಸ್ಥೆಯ ದಕ್ಷಿಣ ಏಷ್ಯಾ ವಲಯದ ಕಚೇರಿ ನವದೆಹಲಿಯಲ್ಲಿದೆ. 1970ರಿಂದ ಈಚೆಗೆ ಆಫ್ರಿಕಾದ ಜನಸಂಖ್ಯೆ ಇಮ್ಮಡಿಯಾಗಿದೆ. ಭೂ ಹಿಡುವಳಿ ಕಡಿಮೆಯಾಗಿದೆ. ಇದರಿಂದಾಗಿ ರಾಸಾಯನಿಕ ಗೊಬ್ಬರಗಳ ಬಳಕೆ ಹತ್ತು ಪಟ್ಟು ಜಾಸ್ತಿಯಾಗಿದೆ.

ಅರಣ್ಯಾಧಾರಿತ ಸಂರಕ್ಷಕ ಕೃಷಿ
ಬಡತನದಿಂದಾಗಿ ಭೂಮಿ ಸಾಗುವಳಿ ಬಿಡುವ ಹಂತಕ್ಕೆ ಹೋಗಿದೆ. ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ವಿಶ್ವ ಕೃಷಿ ಅರಣ್ಯ ಸಂಸ್ಥೆ ಆಫ್ರಿಕಾದ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಅರಣ್ಯಾಧಾರಿತ ಸಂರಕ್ಷಕ ಕೃಷಿ ಮತ್ತು ಅರಣ್ಯಾಧಾರಿತ ಜೋಳ ಕೃಷಿಗಳಿಗೆ ತಾಂತ್ರಿಕ ಮಾಹಿತಿ ಹಾಗೂ ಮಾರ್ಗದರ್ಶನ ಕೊಡುತ್ತದೆ. ನಮಗೆ ಅಷ್ಟಾಗಿ ಹೊಸತಲ್ಲದ ಅರಣ್ಯಾಧಾರಿತ ಸಂರಕ್ಷಕ ಕೃಷಿಯಲ್ಲಿ ಕನಿಷ್ಠ ಉಳುಮೆ, ಬೆಳೆ ಪರಿವರ್ತನೆ ಹಾಗೂ ಸಾರಜನಕ ಸ್ಥಿರೀಕರಿಸುವ ಗಿಡ- ಮರ ಬೆಳೆಸುವುದು. ಉದಾಹರಣೆಗೆ ಶೇಂಗಾ, ಅಲಸಂದೆ, ಸೋಯಾಬೀನ್, ಗ್ಲಿರಿಸೀಡಿಯ (ಗೊಬ್ಬರದ ಗಿಡ) ಮತ್ತು ಹಲವು ರೀತಿಯ ಮರ ಬೆಳೆಸುವುದು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಕಾರ್ಬನ್ ಅಂಶ ಹೆಚ್ಚಾಗುತ್ತದೆ ಹಾಗೂ ಗುಣಮಟ್ಟವೂ ವೃದ್ಧಿಸುತ್ತದೆ. ಕೀಟ ಮತ್ತು ರೋಗ ಬಾಧೆ ಕಡಿಮೆಯಾಗಿ ಇಳುವರಿ ಜಾಸ್ತಿಗೆ ಸಹಕಾರಿಯಾಗುತ್ತದೆ. ಇವುಗಳ ಜತೆಗೆ ಪರಿಸರಕ್ಕೆ ಹಾನಿ ತಪ್ಪಿಸುತ್ತದೆ.

ಏನಿದರ ವಿಶೇಷ?
ಸಾರಜನಕ ಸ್ಥಿರೀಕರಿಸುವ ಗುಣ ಹೊಂದಿರುವುದು. ಜೊತೆಗೆ, ವಿಶಿಷ್ಟ ಎಲೆ ಉದುರಿಸುವ ಸ್ವಭಾವ. ಸಾಮಾನ್ಯವಾಗಿ ಎಲ್ಲ ಮರಗಳು ಬೇಸಿಗೆಯಲ್ಲಿ ಚಿಗುರಿ, ಮಳೆಗಾಲದಲ್ಲಿ ಬೆಳೆದು ಚಳಿಗಾಲದಲ್ಲಿ ಎಲೆ ಉದುರಿಸುತ್ತದೆ. ಆದರೆ, ಫೈದರ್ಬಿಯಾ ಅಲ್ಬಿಡ ಮರವು ಮಳೆಗಾಲಕ್ಕಿಂತ ಮುಂಚೆ ಎಲೆಯುದುರಿಸುತ್ತದೆ. ಮಳೆಗಾಲ ಮುಗಿದ ನಂತರ ಚಿಗುರುವುದಕ್ಕೆ ಶುರು. ಇದರಿಂದ ಉದುರಿದ ಎಲೆಗಳು ಮಳೆಗಾಲದಲ್ಲಿ ಕೊಳೆತು, ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಈ ಗುಣ ಬೆಳೆ ಬೆಳೆಯಲು ಅನುಕೂಲ. ಈ ಮರ ಬೆಳೆಗಳ ಜೊತೆ ಬೆಳಕು, ಪೋಷಕಾಂಶ ಅಥವಾ ನೀರಿಗಾಗಿ ಸ್ಪರ್ಧಿಸುವುದಿಲ್ಲ. ಜೊತೆಗೆ ಈ ಮರದ ಪಕ್ಕದಲ್ಲಿ ವಾರ್ಷಿಕ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುವುದು ಕಂಡುಬಂದಿದೆ. ಈ ಮರ ಬೆಳೆಸುವುದಕ್ಕೆ ವಿಶ್ವ ಕೃಷಿ ಅರಣ್ಯ ಸಂಸ್ಥೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಈ ಮರವನ್ನು ಹೈದರಾಬಾದಿನಲ್ಲಿರುವ ಒಣಭೂಮಿ ಸಂಶೋಧನಾ ಕೇಂದ್ರದಲ್ಲಿ ಬಿಳಿ ಜೋಳದೊಂದಿಗೆ ಬೆಳೆಸಿ ಉತ್ತೇಜಕರ ಫಲಿತಾಂಶ ಪಡೆದಿದ್ದಾರೆ. ಒಣ ಭೂಮಿಯ ಬೇರೆ ಮರಗಳಿಗಿಂತ ಇದು ಧನಾತ್ಮಕ ಫಲಿತಾಂಶ ಕೊಟ್ಟಿದೆ. ಹೆಚ್ಚುತ್ತಿರುವ ಪರಿಸರಸ್ನೇಹಿ ಕೃಷಿಯ ಹಿನ್ನೆಲೆಯಲ್ಲಿ ಈ ಮರವನ್ನು ಇಂದು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವ ಅಗತ್ಯ ಇದ್ದೇ ಇದೆ.

ಭರವಸೆ
ಸಾಮಾನ್ಯವಾಗಿ ಬೆಳೆಗಳಿಗೆ ಪೋಷಕಾಂಶವನ್ನು ರಸಗೊಬ್ಬರಗಳು, ಹಟ್ಟಿ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳ ಮೂಲಕ ಒದಗಿಸಲಾಗುತ್ತದೆ. ಆದರೆ, ಆಫ್ರಿಕಾದ ರೈತರು ಗೊಬ್ಬರದ ಕಾರ್ಖಾನೆ ಎಂದು ಕರೆಯುವ ಸುಲಭದ ವಿಧಾನ ಅಳವಡಿಸಿದ್ದಾರೆ. ಸಾರಜನಕ ಸ್ಥಿರೀಕರಿಸುವ ಮರ ಬೆಳೆಸುತ್ತಾರೆ. ಆ ಮರಗಳ ಎಲೆ ಭೂಮಿಗೆ ಬಿದ್ದರೆ ಫಲವತ್ತತೆ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಆಫ್ರಿಕಾಕ್ಕೆ ಅಲ್ಲಿಯದೇ ಆದ ಫೈದರ್ಬಿಯಾ ಅಲ್ಬಿಡ ಎಂಬ ಅಕೇಶಿಯಾ ಜಾತಿಯ, ನಮ್ಮ ಬಳ್ಳಾರಿ ಜಾಲಿ ಹೋಲುವ ಮರ ಬಹಳ ಭರವಸೆ ಮೂಡಿಸಿದೆ. ಇದರ ಎಲೆ ಮತ್ತು ಕಾಯಿಗಳು ಪ್ರೋಟಿನ್‌ಭರಿತ. ತೊಗಟೆಯಲ್ಲಿ ಅಗಾಧ ಔಷಧೀಯ ಗುಣ. ಮರಗಳನ್ನು ಕಟ್ಟಿಗೆ ಅಥವಾ ನಿರ್ಮಾಣ ಸಾಮಗ್ರಿಯಾಗಿ ಬಳಸುತ್ತಾರೆ.

- ಸೌಖ್ಯ ಮೋಹನ್ ತಲಕಾಲುಕೊಪ್ಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com