ಸ್ವಾವಲಂಬಿ ಬದುಕು; ಮಾದರಿ ಕೃಷಿ ಕುಟುಂಬ

ಸ್ವಾವಲಂಬಿ ಬದುಕು; ಮಾದರಿ ಕೃಷಿ ಕುಟುಂಬ
Updated on: 

ತುರುವೇಕೆರೆ ತಾಲ್ಲೂಕು ಚಿಕ್ಕಶೆಟ್ಟಿಕೆರೆಯ ಹುಚ್ಚಪ್ಪ ಅವರಿಗೆ ಐದು ಎಕರೆ ಜಮೀನಿದೆ. ತೆಂಗು, ಅಡಕೆ, ಬತ್ತ, ರಾಗಿ ಪ್ರಮುಖ ಬೆಳೆಗಳು. ಚೆಂಡು ಹೂವು, ನಾಟಿ ಈರುಳ್ಳಿ, ವೀಳ್ಯದೆಲೆ ಹಾಗೂ ವಿವಿಧ ತರಕಾರಿಗಳನ್ನು ಮನೆ ಬಳಕೆಗೆ ಬೆಳೆದುಕೊಳ್ಳುತ್ತಾರೆ. ಮಿಡಿ ಸೌತೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುವುದು ರೂಢಿ. ಹುಚ್ಚಪ್ಪ, ಅವರ ಪತ್ನಿ ಹಾಗೂ ಮಗ- ಸೊಸೆಯರೇ ಆದಷ್ಟೂ ಕೆಲಸ ಮಾಡಿಕೊಳ್ಳುತ್ತಾರೆ. ಒಂದೇ ಬೆಳೆಯನ್ನಾಗಲೀ, ಕೂಲಿಕಾರರನ್ನಾಗಲೀ ಅವಲಂಬಿಸದ ಕೃಷಿ ಇವರದು. ಸಾವಯವ ಕೃಷಿಕರಾಗಿ ಬದಲಾಗಿರುವ ಇವರು ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಮಾರ್ಗದರ್ಶನ ಸದುಪಯೋಗಪಡಿಸಿಕೊಂಡಿದ್ದಾರೆ.
ಎರೆಗೊಬ್ಬರ ಇವರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದೆ. ಕಳೆದ ವರ್ಷ ಸುಮಾರು 15 ಟನ್ ಎರೆಗೊಬ್ಬರ ಉತ್ಪಾದಿಸಿದ್ದಾರೆ. ರಾಗಿ, ತೊಗರಿ, ಅವರೆ ಹಾಗೂ ಮಿಡಿಸೌತೆಗೆ ಬಳಸಿದ್ದಾರೆ. ಉತ್ತಮ ಫಲಿತಾಂಶವೂ ಬಂದಿದೆ. ಈ ಗೊಬ್ಬರದ ಬಳಕೆ ಶುರುವಾದ ಮೇಲೆ ರಸಗೊಬ್ಬರಗಳ ಬಳಕೆ ಗಣನೀಯವಾಗಿ ಕಡಿಮೆ ಮಾಡಿದ್ದಾರೆ. ಎರೆಗೊಬ್ಬರ ತೊಟ್ಟಿಯಿಂದಾಗಿರುವ ಮತ್ತೊಂದು ಉಪಯೋಗವೆಂದರೆ ತ್ಯಾಜ್ಯಗಳ ಸದುಪಯೋಗ. ಮೊದಲೆಲ್ಲಾ ತೋಟದಿಂದ ದೊರೆಯುತ್ತಿದ್ದ ಅಪಾರ ತ್ಯಾಜ್ಯಗಳನ್ನು ಅಲ್ಲಿ- ಇಲ್ಲಿ ಬಿಸಾಡುತ್ತಿದ್ದರು, ಕೆಲವೊಮ್ಮೆ ಉರುವಲಾಗಿ, ಇಲ್ಲವಾದರೆ ಸುಟ್ಟು ಹಾಕುತ್ತಿದ್ದರು. ಆದರೆ, ಈಗ ಪ್ರತಿಯೊಂದನ್ನೂ ಎರೆಹುಳು ಘಟಕಕ್ಕೆ ಹಾಕುತ್ತಾರೆ. ತೋಟವೂ ಅಚ್ಚುಕಟ್ಟಾಯಿತು. ಫಲವತ್ತಾದ ಗೊಬ್ಬರವೂ ಸಿಕ್ಕಿತು ಎನ್ನುತ್ತಾರೆ ಹುಚ್ಚಪ್ಪನವರ ಮಗ.
ಅಜೋಲಾ ಇವರಿಗೆ ಹೊಸತಾದರೂ ಅತ್ಯುಪಯುಕ್ತವಾಗಿದೆ. ಆರ್ಡರ್ ಸ್ವಯಂಸೇವಾ ಸಂಸ್ಥೆಯವರು ಪರಿಚಯಿಸುವವರೆಗೂ ಅಜೋಲಾ ಹೆಸರೇ ಇವರಿಗೆ ಅಪರಿಚಿತ. ನೋಡಿಯೂ ಇರಲಿಲ್ಲ. ಅಜೋಲಾ ಅಂದ್ರೆ ಬಳ್ಳೀನೋ, ಗಿಡಾನೋ ಇರ್ಬೇಕು ಅಂದ್ಕಂಡಿದ್ದೆ ಎಂದು ಮುಗ್ಧವಾಗಿ ನಗುತ್ತಾರೆ ಹುಚ್ಚಪ್ಪ. ಆದರೆ ಒಮ್ಮೆ ಇದರ ರುಚಿ ಕಂಡ ನಂತರ ಅದನ್ನು ಬಿಟ್ಟಿರಲಾರದಷ್ಟು ಬಾಂಧವ್ಯ ಬೆಳೆದಿದೆ. ಹಾಗಾಗಿಯೇ ಎರಡು ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಹಾಲು ಕರೆಯುವ ಹಸುಗಳಿಗೆ, ಕೋಳಿಗಳಿಗೆ ಈಗ ದಿನನಿತ್ಯ ಅಜೋಲಾ ಕಡ್ಡಾಯವಾಗಿದೆ. ಕೋಳಿಗಳಂತೂ ಕುಕ್ಕಿ- ಕುಕ್ಕಿ ತಿನ್ನುತ್ತವೆ. ಹಸುಗಳು ಅಜೋಲಾ ತಿಂದ ನಂತರ ಅರ್ಧ ಲೀಟರ್‌ವರೆಗೂ ಹೆಚ್ಚು ಹಾಲು ಕೊಡುತ್ತವೆ ಎನ್ನುತಾರೆ. ಪ್ರತಿ ಹಸುವಿಗೆ ಒಮ್ಮೆಗೆ ಕಾಲು ಕೆಜಿಯಷ್ಟು ಅಜೋಲಾ ಹಾಕುವುದು ರೂಢಿ.
ರಸಸಾರ ಘಟಕ (ಬಯೋಡೈಜೆಸ್ಟರ್) ಸಹ ಇವರಿಗೆ ಹೊಸ ಅನುಭವ ಹಾಗೂ ಹೆಚ್ಚು ಲಾಭ ಕೊಟ್ಟಂತಹುದು. ತಮ್ಮ ಗದ್ದೆಗೆ ನೀರು ಹಾಯುವ ಕಾಲುವೆ ಪಕ್ಕದಲ್ಲೇ ತೊಟ್ಟಿ ನಿರ್ಮಿಸಿದ್ದು, ನೀರು ಹರಿಯುವಾಗ ರಸಸಾರ ಘಟಕದ ತೊಟ್ಟಿಯ ಔಟ್‌ಲೆಟ್ ಪೈಪ್‌ಅನ್ನು ತೆರೆಯುತ್ತಾರೆ. ಕಿರುಬೆರಳು ಗಾತ್ರದಲ್ಲಿ ಹರಿಯುವ ಕಷಾಯ ಕಾಲುವೆ ನೀರಿನೊಂದಿಗೆ ಬೆರೆತು ಬತ್ತ ಮುಂತಾದ ಬೆಳೆಗಳಿಗೆ ಹಾಯುತ್ತದೆ. ಈ ಘಟಕದ ತೊಟ್ಟಿ ನಿರ್ಮಾಣಕ್ಕೆ ಸ್ವತಃ ಐದಾರು ಸಾವಿರ ವ್ಯಯಿಸಿದ್ದಾರೆ.
ಮೆಣಸಿನಗಿಡ, ಸೌತೆ, ಟೊಮೆಟೋ ಬೆಳೆಗೆ ಕೀಟಗಳ ಹಾವಳಿ ಅತಿಯಾದಾಗ ಸಸ್ಯಜನಕ ಕೀಟನಾಶಕ ಸಿಂಪಡಿಸಿ ಯಶ ಕಂಡಿದ್ದಾರೆ. ಒಂದು ಮಣ್ಣಿನ ಮಡಕೆಯ ತುಂಬಾ ಗಂಜಲ ಹಾಕಿ ಅದಕ್ಕೆ ಚೆನ್ನಾಗಿ ಜಜ್ಜಿದ ಲಕ್ಕಿ ಸೊಪ್ಪು ಮತ್ತು ಕತ್ತಾಳೆ ಪಟ್ಟೆಯನ್ನು ತುಂಬಿ ಒಂದು ವಾರ ಕೊಳೆ ಹಾಕಿದರೆ ಸಸ್ಯಜನಕ ಕೀಟನಾಶಕ ತಯಾರು. ಇದನ್ನು ಸೋಸಿಕೊಂಡು ಒಂದು ಲೀಟರ್ ಕಷಾಯಕ್ಕೆ ಹತ್ತು ಲೀಟರ್ ನೀರು ಬೆರೆಸಿಕೊಂಡು ಸಿಂಪಡಿಸುತ್ತಾರೆ. ಕೀಟದ ಹಾವಳಿ ನೋಡಿಕೊಂಡು ಎರಡರಿಂದ ಮೂರು ಬಾರಿ ಬಳಕೆ. ಸದಾ ತೋಟದಲ್ಲಿ ಸುತಾಡುವುದು, ಬೆಳೆಗಳ ಮೇಲೆ ನಿಗಾ ಮಾಡುವುದು ಹುಚ್ಚಪ್ಪನವರ ಅಭ್ಯಾಸ. ಮಗನಿಗೂ ಅದೇ ಹಾದಿಯಲ್ಲಿ ನಡೆಯುವ ಹುಮ್ಮಸ್ಸು.

- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com