

ಪುಂಡಿ ರೈತರ ಕಲ್ಪವೃಕ್ಷ ಎಂಬ ಮಾತೂ ಇದೆ. ಏಕೆಂದರೆ, ಇದು ಅಡಿಯಿಂದ ಮುಡಿಯವರೆಗೂ ಉಪಯೋಗಕ್ಕೆ ಬರುತ್ತದೆ. ಎಲೆ, ತೊಗಟೆ, ಕಾಳು, ಗಿಡ ಎಲ್ಲವೂ ಮಹತ್ವದ್ದೇ. ಇಲ್ಲಿ ಯಾವುದೇ ಭಾಗ ವೇಸ್ಟ್ ಅಲ್ಲ. ಪುಂಡಿ ಹೆಚ್ಚಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಣಸಿಗುವ ಬೆಳೆ. ಇದನ್ನು ಇಡಿಯಾಗಿ ಹೊಲದಲ್ಲಿ ಒಂದೇ ಬೆಳೆಯಾಗಿ ಬೆಳೆಯುವುದಿಲ್ಲ. ಜೋಳದ ಬೆಳೆಯಲ್ಲಿ ಅಲ್ಲಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಪುಂಡಿ ಗಿಡ ಸುಮಾರು 10- 12 ಅಡಿವರೆಗೆ ಎತ್ತರ ಬೆಳೆಯುತ್ತದೆ. ಜೂನ್ನಲ್ಲಿ ಹೈಬ್ರಿಡ್ ಜೋಳ ಬಿತ್ತನೆಯ ಜೊತೆಗೆ ತೊಗರಿ ಅಕ್ಕಡಿಯಲ್ಲಿ ಅಲ್ಲಲ್ಲಿ ಒಂದೊಂದು ಕಾಳು ಕೂಡಿಸುತ್ತಾರೆ. ಇದು ಡಿಸೆಂಬರ್ ವರೆಗೆ ಕಾಳು ಕಟ್ಟುತ್ತದೆ. ಕಾಳು ಕಟ್ಟಿ ತೆನೆ ಒಣಗಿದ ನಂತರ ಕೊಯ್ಲು ಮಾಡಿ ಕಾಳು ಬೇರ್ಪಡಿಸುತ್ತಾರೆ.
ಮುಂಚೆ ರೈತರಿಗೆ ಪುಂಡಿ ಅವಶ್ಯಕ ಬೆಳೆಯಾಗಿತ್ತು. ಪ್ರತಿಯೊಬ್ಬರು ಅಗತ್ಯಕ್ಕೆ ತಕ್ಕಂತೆ ಬೆಳೆಯುತ್ತಿದ್ದರು. ಏಕೆಂದರೆ ಒಕ್ಕಲುತನಕ್ಕೆ ಬಳಸುವ ಹಗ್ಗ, ಒಲ್ಲೆ, ಚರಿಗಳನ್ನು ಪುಂಡಿ ನಾರಿನಿಂದಲೇ ತಯಾರಿಸಲಾಗುತ್ತಿತ್ತು.
ಎಲೆಯಿಂದ ಪಲ್ಯ
ಪುಂಡಿಯಿಂದ ಹಲವು ಉಪಯೋಗ. ಇದರ ಎಲೆಯಿಂದ ರುಚಿಯಾದ ಪಲ್ಯ ಮಾಡುತ್ತಾರೆ. ತೊಗಟೆಯಿಂದ ನಾರು ತಯಾರಾಗುತ್ತದೆ. ಕಾಳಿನಿಂದ ಅಡುಗೆ ಎಣ್ಣೆ ತಯಾರಾಗುತ್ತದೆ. ಇನ್ನು ಗಿಡ (ದಿಂಡು) ಗುಡಿಸಲು, ಚಪ್ಪರ ನಿರ್ಮಾಣಕ್ಕೆ ಬಳಕೆಯಾಗುತ್ತದೆ.
ನಾರು ತಯಾರಿಸುವ ವಿಧಾನ
ಪುಂಡಿ ಗಿಡ ಒಣಗಿದ ನಂತರ ತೆನೆ ಬೇರ್ಪಡಿಸಿ ಗಿಡಗಳನ್ನು ಹಳ್ಳಗಳಲ್ಲಿ ಒಡ್ಡು ನಿರ್ಮಿಸಿ 15 ದಿನಗಳವರೆಗೆ ನೆನೆಯಲು ಬಿಡಲಾಗುತ್ತದೆ. 15 ದಿನಕ್ಕೆ ಅದು ತೊಗಟೆ ಸಂಪೂರ್ಣ ಕಳಿಯುತ್ತದೆ. ಅದನ್ನು ಬಿಡಿಸಿ ಬಿಸಲಲ್ಲಿ ಒಣಗಿಸಿದರೆ ನಾರು ತಯಾರಾಗುತ್ತದೆ. ಈ ನಾರನ್ನು ಹುರಿ ಮಾಡಿ ಹಗ್ಗ ನಿರ್ಮಿಸಲಾಗುತ್ತದೆ.
ಆದರೆ, ಇತ್ತೀಚೆಗೆ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿರುವುದರಿಂದ ಹಳ್ಳಿಗಳಲ್ಲಿ ನಾರು ತಯಾರಿ ನಿಂತು ಹೋಗಿದೆ. ಹೀಗಾಗಿ ಪುಂಡಿ ಬೆಳೆಯೂ ಅತ್ಯಂತ ಕಡಿಮೆಯಾಗಿದೆ. ಎಲ್ಲಿಯಾದರೂ ಒಬ್ಬೊಬ್ಬರು ಮಾತ್ರ ಪುಂಡಿ ಬೆಳೆಯುತ್ತಾರೆ.
- ಸದಾನಂದ ಮಜತಿ