

ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಶಿಕ್ಷಕ ಸಹೋದರರು ತಮ್ಮ ಜಮೀನಿನಲ್ಲಿ ಜಿನುಗು ಹೊಂಡ ನಿರ್ಮಿಸಿ, ಅಂತರ್ಜಲ ಮಟ್ಟ ಹೆಚ್ಚಿಸುವ ಮೂಲಕ ಬರದಿಂದ ತತ್ತರಿಸಿದ್ದ ಅಕ್ಕಪಕ್ಕದ ರೈತರ ಹೊಲ, ಗದ್ದೆಗಳಿಗೂ ಜಲಧಾರೆ ಉಕ್ಕಿಸಿ ಅಲ್ಲಿನ ಜನತೆಗೆ ಭಗೀರಥರೆನಿಸಿಕೊಂಡಿದ್ದಾರೆ.
ಜಿಗಜಿಣಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಕಾಶಿನಾಥ ಹನಮಂತ ಲೋಣಿ ಹಾಗೂ ಮಲ್ಲಿಕಾರ್ಜುನ ಲೋಣಿ ಅವರೇ ಭಗೀರಥ ಪ್ರಯತ್ನದಿಂದ ನೀರು ಜಿನಗುವಂತೆ ಮಾಡಿದವರು.
ಹನಿ ನೀರಿಗೂ ತತ್ವಾರ
ಮಹಾರಾಷ್ಟ್ರದ ಗಡಿಭಾಗದ ಕಾತ್ರಾಳ ಗ್ರಾಮ ಅತಿ ಹಿಂದುಳಿದ ಪ್ರದೇಶ. ಆದರೆ, ಬಂಗಾರದಂಥ ನೆಲ ನೀರಿಲ್ಲದೆ ಭಣಗುಡುತ್ತಿತ್ತು. 1,000 ಅಡಿ ಆಳದಲ್ಲಿ ಬೋರ್ವೆಲ್ ಕೊರೆದರೂ ನೀರು ಸಿಗದೇ ರೈತರು ಕಷ್ಟಪಡುತ್ತಿದ್ದರು. ಈ ಪ್ರದೇಶದಲ್ಲಿ ಬರದ ರುದ್ರನರ್ತನ ಸದಾ ಕಾಡುತ್ತಿತ್ತು. ಇದರಿಂದ ಹೊಲ, ಮನೆ ತೊರೆದು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಗುಳೆ ಹೋಗಿದ್ದರು.
ಶಿಕ್ಷಕ ಕಾಶಿನಾಥ ಹಾಗೂ ಮಲ್ಲಿಕಾರ್ಜುನ ಅವರು ತಮ್ಮ 5 ಎಕರೆ ಹೊಲದಲ್ಲಿ ಸಾಕಷ್ಟು ಬಾರಿ ಬಾವಿ, ಕೊಳವೆ ಬಾವಿ ಕೊರೆಯಿಸಿ ನೀರು ಸಿಗದೆ ಹಾನಿ ಅನುಭವಿಸಿದ್ದರು.
ನೀರಿನಂತೆ ಹಣ ಹರಿಸಿದ್ದರೂ ಹನಿ ನೀರು ಸಿಗಲೂ ಇಲ್ಲ. ಇವೆಲ್ಲವುಗಳಿಂದ ಬೇಸತ್ತು ಈ ಸಹೋದರರು ಜಲ ಸಂಗ್ರಹಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕೈ ಹಾಕಿದರು.
ಹಳ್ಳದ ನೀರು ಹೊಂಡಕ್ಕೆ
ಲೋಣಿ ಅವರ ಹೊಲದ ಸಮೀಪ ಒಂದು ಚಿಕ್ಕ ಹಳ್ಳವಿತ್ತು. ಮಳೆಗಾಲದಲ್ಲಿ ಈ ಹಳ್ಳದಿಂದ ನಿರುಪಯುಕ್ತವಾಗಿ ನೀರು ಹರಿದು ಹೋಗುತ್ತಿತ್ತು. ಈ ನೀರನ್ನು ತಡೆದು ಸಂಗ್ರಹಿಸಿದರೆ ಅಂತರ್ಜಲ ಮಟ್ಟ ಹೆಚ್ಚಬಹುದೆಂದು ತೀರ್ಮಾನಿಸಿದರು. ತಮ್ಮ ಹೊಲದ ಬಳಿ ಚಿಕ್ಕ ಹಳ್ಳಕ್ಕೆ 40 ಅಡಿ ಉದ್ದದ ತಡೆಗೋಡೆ ನಿರ್ಮಿಸಿ, 40 ಲಕ್ಷ ಲೀಟರ್ ಸಾಮರ್ಥ್ಯದ ಹೊಂಡ ನಿರ್ಮಿಸಿದರು. ಹಳ್ಳದ ನೀರು ಹೊಂಡಕ್ಕೆ ತರಲು 5 ಅಡಿ ಆಳ ಹಾಗೂ 100 ಅಡಿ ಉದ್ದದ ಕಾಲುವೆ ನಿರ್ಮಿಸಿದರು. ಹೆಚ್ಚುವರಿ ನೀರು ಹರಿದು ಹೋಗಲು ಈ ಹೊಂಡದ ಒಂದು ಬದಿಗೆ ಇಟ್ಟಂಗಿ ಪಿಚ್ಚಿಂಗ್ ನಿರ್ಮಿಸಲಾಗಿದೆ.
ಹೊಂಡ ಭರ್ತಿ
ಕಳೆದ ಆಗಸ್ಟ್ನಲ್ಲಿ ಸುರಿದ ಮಳೆಯಿಂದ ಜಿನುಗು ಹೊಂಡ ಭರ್ತಿಯಾಗಿದೆ. ಇನ್ನೂ ಮೂರ್ನಾಲ್ಕು ತಿಂಗಳವರೆಗೆ ನೀರು ಈ ಹೊಂಡದಲ್ಲಿ ಲಭ್ಯವಾಗುತ್ತದೆ. ಇದರಲ್ಲಿ ರೈತರು ಒಂದು ಪೈರು ಬೆಳೆಯಬಹುದು. ಸುಮಾರು ಅರ್ಧ ಕಿಮೀವರೆಗೆ ಈ ಜಿನುಗು ಹೊಂಡದಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಿದೆ. ಅರ್ಧ ಕಿಮೀ ವ್ಯಾಪ್ತಿಯ ಸುಮಾರು 200 ಎಕರೆ ಜಮೀನಿಗೆ ನೀರಿನ ಸೌಲಭ್ಯ ದೊರೆತಿದೆ.
ಜಿನುಗು ಹೊಂಡದಿಂದ 400 ದಾಳಿಂಬೆ ಹಾಗೂ 100 ಲಿಂಬೆ ಗಿಡಗಳು ಬೆಳೆ ಕಂಡಿವೆ. <
ಅಣ್ಣಾ ಹಜಾರೆ ಸ್ಫೂರ್ತಿ
ಮಹಾರಾಷ್ಟ್ರದ ನಗರ ಜಿಲ್ಲೆಯ ರಾಳೆಗಣಸಿದ್ಧಿ ಯಲ್ಲಿ ಅಣ್ಣಾ ಹಜಾರೆ ಅವರು ಮಾಡಿರುವ ಕಾರ್ಯದಿಂದ ಸ್ಫೂರ್ತಿ ಪಡೆದು ಈ ಕಾರ್ಯಕ್ಕೆ ಕೈ ಹಾಕಿ ಸಫಲರಾಗಿದ್ದೇವೆ. ಮೊದಲು ಎಲ್ಲರೂ ಇದು ವ್ಯರ್ಥ ಕಸರತ್ತು ಎಂದು ಮೂಗು ಮುರಿದಿದ್ದರು. ಆದರೆ, ಈಗ ಅದೇ ಜನರು ನಮ್ಮ ಕಾರ್ಯವನ್ನು ಮೆಚ್ಚಿಕೊಳ್ಳುತ್ತಿದ್ದಾರೆ.
-ಮಲ್ಲಿಕಾರ್ಜುನ ಲೋಣಿ
-ರುದ್ರಪ್ಪ ಆಸಂಗಿ