

ಕೃಷಿಯಲ್ಲಿ ಖುಷಿ, ಜತೆಗೆ ನವೀನ ಪ್ರಯೋಗಗಳಿಗೆ ಕೈಹಾಕುವ ಸಾಹಸ, ತನ್ನೊಂದಿಗೆ ಇತರರನ್ನು ಪ್ರೇರೇಪಿಸುವ ವೈಶಾಲ್ಯ ಈ ಯುವಕನ ವಿಶೇಷತೆ.
ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಪಟ್ಟಣದ ಸಂಗೇನಹಳ್ಳಿ ಮಂಜುನಾಥನ ಯಶೋಗಾಥೆ. ಸಂಗೇನಹಳ್ಳಿ ಮಂಜುನಾಥ್ ಓದಿದ್ದು ಎಂಬಿಎ. ವಿದ್ಯೆಗೆ ತಕ್ಕಂತೆ ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗ. ಆದರೆ, ಅಂತಿಮವಾಗಿ ಮಂಜುನಾಥ್ ನೆಲೆ ಕಂಡುಕೊಂಡಿದ್ದು ಕೃಷಿ ಹಾಗೂ ಎಮು ಸಾಕಾಣಿಕೆಯಲ್ಲಿ.
ಶುರುವಾಗಿದ್ದು...
ಮಂಜುನಾಥ್ ಬಯಲುಸೀಮೆಯಾದ ಈ ಪ್ರದೇಶ ಎಮು ಸಾಕಾಣಿಕೆಗೆ ಉತ್ತಮ ಎಂಬುದನ್ನು ಅರಿತರು. ತಡ ಮಾಡಲಿಲ್ಲ. ಒಂದು ಕೈ ನೋಡಿಯೇ ಬಿಡೋಣ ಎಂದು ಎಮು ಸಾಕಾಣಿಕೆಗೆ ಇಳಿದು ಬಿಟ್ಟರು. ಮುಂದಿನದು ಯಶಸ್ಸಿನ ಪಯಣ.
ಆರಂಭದಲ್ಲಿ ಮಂಜುನಾಥ್ ಕೊಟ್ಟೂರಿನ ಸಮೀಪದ ಹುಣಸೆಕಟ್ಟೆ ಬಳಿಯ ಹೊಲದಲ್ಲಿ ಎಮು ಸಾಕಾಣಿಕೆ ಶುರು ಮಾಡಿದರು. ಹೊಲದ ಒಂದು ಬದುವಿನಲ್ಲಿ ಕಟ್ಟಡ ಕಟ್ಟಿಸಿದ. ಉಳಿದಂತೆ ಎಮುಗಳ ಸಂಖ್ಯೆಯ ಮೇಲೆ ಬಯಲು ಜಾಗ ಮೀಸಲಿಟ್ಟ. ಮಂಜುನಾಥ್ ಉದ್ಯಮ ಪ್ರಾರಂಭಿಸಿ ಒಂದು ವರ್ಷ ಕಳೆದಿಲ್ಲ, ಲಾಭದ ಹೊಳೆ ಶುರುವಾಗಿದೆ!
ದೇಖರೇಖಿ
ಕೃಷಿ ಕ್ಷೇತ್ರದಲ್ಲಿ ಕೂಲಿಗಾರರದ್ದೇ ಬಲು ದೊಡ್ಡ ಸಮಸ್ಯೆ. ಆದರೆ, ಇದನ್ನು ಮಂಜುನಾಥ್ ಮೆಟ್ಟಿ ನಿಂತಿದ್ದಾರೆ. ಕೇವಲ ಒಂದಿಬ್ಬರು ಸಂಬಂಧಿಕರ ಸಹಕಾರದಿಂದ ಮಂಜುನಾಥ್ ಎಮು ದೇಖರೇಖಿ ನೋಡಿಕೊಳ್ಳುತ್ತಾರೆ. ಇದಕ್ಕೆ ತಗಲುವ ವಿದ್ಯುತ್, ನೀರು, ಆಹಾರ ಅತ್ಯಂತ ಮಿತ. ಬೇಕಾಗುವ ಜಾಗವೂ ಕಮ್ಮಿ. ಜೊತೆಗೆ ಇವುಗಳಿಗೆ ಕಾಯಿಲೆ ಬಾಧಿಸುವುದು ತೀರಾ ವಿರಳ.
ಬಿರುಬಿಸಿಲಿಗೂ ಸೈ, ಅತಿ ತಂಪಿಗೂ ಜೈ ಎನ್ನುವಂತಹ ದೇಹ ರಚನೆ ಎಮುವಿನದ್ದು. ಇವುಗಳ ಮೊಟ್ಟೆಗಳಿಗೆ ಕೃತಕ ಶಾಖ ನೀಡಿ ಮರಿ ಮಾಡಿಸಲಾಗುತ್ತದೆ. ಅದಕ್ಕೆ ಸಾಕಾಣಿಕೆದಾರರಿಂದ ಒಂದು ಮರಿಗೆ ಇಂತಿಷ್ಟು ಅಂತಾ ಹಣ ನಿಗದಿಪಡಿಸಿ ಮರಿ ಮಾಡಿಸಿ ಕೊಡಲಾಗುತ್ತದೆ. ಇದು ಸಹ ಇತ್ತೀಚಿನ ದಿನಗಳಲ್ಲಿ ಲಾಭ ತಂದುಕೊಡುತ್ತಿದೆ.
ಮಾರುಕಟ್ಟೆ ಉಂಟು ಸ್ವಾಮಿ
ಅಂದ ಹಾಗೆ ಎಮು, ಅದರ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಇದೆ. ಪ್ರಮುಖವಾಗಿ ಎಮು ಮಾಂಸ ಹಾಗೂ ಅದರ ಬೈ ಪ್ರೊಡಕ್ಟ್ಗಳನ್ನು ತಯಾರಿಸುವ ಘಟಕ ಹೈದರಬಾದ್ನಲ್ಲಿ ತಲೆ ಎತ್ತಿದೆ. ಉಳಿದಂತೆ ಸಿಂಕದರಬಾದ್ ಪಟ್ಟಣದಲ್ಲೂ ಮಾರುಕಟ್ಟೆ ಇದೆ. ಅಲ್ಲಿ ಎಮು ಮಾಂಸ ಮತ್ತು ಮೊಟ್ಟೆಯ ಆಹಾರ ತಯಾರಿಸಿ ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿಯಾಗುತ್ತಿದೆ.
ಸಬ್ಸಿಡಿ ಐತೆ
ಎಮು ಉದ್ಯಮಕ್ಕೆ ಪ್ರಾರಂಭದಲ್ಲಿ ತೊಡಗಿಸುವ ಬಂಡವಾಳ ಅಧಿಕ. ಜೊತೆಗೆ ಸರ್ಕಾರ ಸೇರಿದಂತೆ ಸ್ಥಳಿಯ ಬ್ಯಾಂಕ್ಗಳ ಸಹಾಯವೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ, ಆ ಸ್ಥಿತಿ ಇಲ್ಲ. ಸಂಗೇನಹಳ್ಳಿ ಮಂಜುನಾಥ್ ಉದ್ಯಮಕ್ಕೆ ನಬಾರ್ಡ್ನಿಂದ ಶೇ. 25ರ ಸಬ್ಸಿಡಿಯಲ್ಲಿ 30 ಲಕ್ಷ ಸಾಲ ಪಡೆದಿದ್ದಾರೆ. ಜೊತೆಗೆ ಕೊಟ್ಟೂರಿನ ಗ್ರಾಮೀಣ ಬ್ಯಾಂಕ್ ಧನಸಹಾಯ ನೀಡಿದೆ. ಆ ಮೂಲಕ ಉಳ್ಳವರಿಗೆ ಮಾತ್ರ ಎಮು ಉದ್ಯಮ ಎಂಬ ತಪ್ಪು ಕಲ್ಪನೆಯನ್ನು ಬಡಿದೋಡಿಸಿದ್ದಾರೆ.
ಈಗಾಗಲೇ 750 ಮರಿಗಳನ್ನು ಮಂಜುನಾಥ್ ಮಾರಾಟ ಮಾಡಿದ್ದಾರೆ. ಅನೇಕರಿಗೆ ಎಮು ಮರಿ ನೀಡುವುದರ ಮೂಲಕ ಇತರರು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದಾರೆ. ಎಮು ಉದ್ಯಮ ಪ್ರಚುರಪಡಿಸಬೇಕೆಂಬುವುದು ಸಂಗೇನಹಳ್ಳಿ ಮಂಜುನಾಥ್ ಅವರ ಮನದಾಳದ ತುಡಿತ. ಅದಕ್ಕಾಗಿ ಆಸಕ್ತರಿಗೆ ತರಬೇತಿ ನೀಡಲು ಸದಾ ಸಿದ್ಧ. ಆಸಕ್ತರು ಮಂಜುನಾಥರ ಮೊ. 9343125105.
-ಮಳೆಯನ್ನೇ ನಂಬಿ ಕೆಟ್ಟ ರೈತರು ಎಮು ಸಾಕಾಣಿಕೆ ಅವಲಂಬಿಸಿದರೆ ಬೇಗನೆ ಲಕ್ಷ್ಮೀ ಪುತ್ರರಾಗುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ಇದರ ಸುಲಭ ನಿರ್ವಹಣೆ ಹಾಗೂ ಇದು ತಂದು ಕೊಡುವ ಆದಾಯ ದೃಷ್ಟಿಯಿಂದ ಎಮು ಸಾಕಾಣಿಕೆ ಬಲು ಸುಲಭ. ಇದನ್ನು ಕೃಷಿಗೆ ಪೂರಕವಾಗಿ ಕೈಗೊಂಡರೆ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಆದಾಯ ಗ್ಯಾರಂಟಿ.
= ಸಂಗೇನಹಳ್ಳಿ ಮಂಜುನಾಥ್
-ಆಶಾ ಸ್ವರೂಪ್ ಕೊಟ್ಟೂರು