

ಇದು ವಾಣಿಜ್ಯ ಹೂವಿನ ಬೆಳೆ. ವಿದೇಶಿ ಹೂವಾದರೂ ದೇಶದಲ್ಲಿ ನಿಧಾನವಾಗಿ ಜನಪ್ರಿಯತೆ ಹೊಂದುತ್ತಿದೆ. ಇದನ್ನು ಬೆಳೆಯಲು ಖರ್ಚು ಜಾಸ್ತಿ. ಹಾಗಾಗಿ ಹೆಚ್ಚು ಬಂಡವಾಳ ತೊಡಗಿಸಲು ಆಸಕ್ತಿಯಿದ್ದವರು ಜರ್ಬೆರಾ ಬೆಳೆಯಲು ಕೈ ಹಾಕಬಹುದು.
ಬೆಳೆಯುವ ವಿಧಾನ
ಜರ್ಬೆರಾ ಬೆಳೆಯಲು ಪಾಲಿ ಹೌಸ್ ಬೇಕು. ಇದಕ್ಕೆ ಹನಿ ನೀರಾವರಿ ಬೇಕು. ಇನ್ನು ಸಸಿ ನಾಟಿ ಮಾಡುವುದಕ್ಕಿಂತ ಪೂರ್ವದಲ್ಲಿ ಜಮೀನನ್ನು ಬಿತ್ತನೆಗೆ ಯೋಗ್ಯವಾಗುವಂತೆ ಹದ ಮಾಡಿರಬೇಕು. 70 ಸೆಂ. ಮೀ. ಅಗಲ, ಅಗತ್ಯಕ್ಕೆ ತಕ್ಕಷ್ಟು ಉದ್ದ ಮತ್ತು ಒಂದೂವರೆ ಅಡಿ ಎತ್ತರದಲ್ಲಿ ಮಡಿ ಮಾಡಬೇಕು. ಅಗತ್ಯಕ್ಕೆ ತಕ್ಕಷ್ಟು ಗೊಬ್ಬರ, ನೀರು ಹಾಕಬೇಕು. ಸಾಲಿನಿಂದ ಸಾಲಿಗೆ 30 ಅಡಿ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ಬಳಿಕ 2- 3 ದಿನಕ್ಕೊಮ್ಮೆ ನೀರು ಹಾಯಿಸಬೇಕು. ಆಗಾಗ ಅಗತ್ಯಕ್ಕನುಗುಣವಾಗಿ ಗೊಬ್ಬರ ಹಾಕಬೇಕು. ಕಳೆ ಬಾರದಂತೆ ನಿಗಾ ವಹಿಸಬೇಕು. 2 ತಿಂಗಳವರೆಗೆ ಮೊಗ್ಗುಗಳನ್ನು ಚಿವುಟಬೇಕು. ನಾಲ್ಕು ತಿಂಗಳ ನಂತರ ಭರ್ಜರಿಯಾಗಿ ಹೂವು ಬಿಡಲು ಶುರು ಮಾಡುತ್ತದೆ. 10 ಗುಂಟೆ ಜಾಗದಲ್ಲಿ ಏನಿಲ್ಲವೆಂದರೂ ದಿನಕ್ಕೆ ಕನಿಷ್ಠ 600 ಹೂವುಗಳನ್ನು ಪಡೆಯಬಹುದು. ವರ್ಷದ ಎಲ್ಲ ತಿಂಗಳು ಹೂವು ಬಿಡುತ್ತದೆ. ಚೆನ್ನಾಗಿ ನಿರ್ವಹಣೆ ಮಾಡಿದರೆ 3 ವರ್ಷಗಳ ಕಾಲ ಇಳುವರಿ ಪಡೆಯಬಹುದು. ಮದುವೆ ಮೊದಲಾದ ಸೀಜನ್ನಲ್ಲಿ ಹೂವು ಕೈಗೆ ಬರುವಂತೆ ಸಸಿ ನಾಟಿ ಮಾಡಿದರೆ ಅಧಿಕ ಲಾಭ ಗಳಿಸಬಹುದು.
ಮಣ್ಣು
ಮರಳು ಮಿಶ್ರಿತ ಕೆಂಪು ಮಣ್ಣು ಜರ್ಬೆರಾ ಬೆಳೆಗೆ ಸೂಕ್ತ. ನೀರು ಹರಿದು ಹೋಗುವಂಥ ಜಾಗವಿರಬೇಕು. 5 ರಿಂದ 7.5 ರಸಸಾರವಿರಬೇಕು.
ರೋಗಗಳು
ಇದಕ್ಕೆ ರೋಗದ ಕಾಟ ತುಸು ಜಾಸ್ತಿ. ಬೂದಿ ರೋಗ, ಬೇರುಕೊಳೆ, ಎಲೆಚುಕ್ಕೆ ರೋಗ ಕಾಡಬಹುದು. ಸುಳಿ ನೊಣ, ಬಿಳಿ ನೊಣ ಕೀಟ ಬಾಧೆ ಬರಬಹುದು. ಕೂಡಲೇ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕು.
ತಳಿಗಳು
ಸಾಂಗ್ರಿಯಾ, ಗೋಲಿಯತ್, ಸ್ಕೋಪ್, ಸಿಮ್ಮುರ್, ಸನ್ಸೆಟ್, ನೆವಡಾ, ವಿನೋ, ವೆಂಚೂರಿ ದೇಶದಲ್ಲಿ ಬಳಕೆಯಲ್ಲಿರುವ ಪ್ರಮುಖ ತಳಿಗಳು.
ಮಾರುಕಟ್ಟೆ
ಜರ್ಬೆರಾವನ್ನು ಮದುವೆ, ಸಮಾರಂಭ, ಹೋಟೆಲ್ ಮತ್ತು ಪುಷ್ಪಗುಚ್ಛ ತಯಾರಿಕೆಯಲ್ಲಿ ಯಥೇಚ್ಛವಾಗಿ ಬಳಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದೇ ಇರುತ್ತದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಗಿರೀಶ್ ಹಲಸಗೇರಿ ಮತ್ತು ರಾಜು ರಾಜಣ್ಣವರ್ ಸೇರಿ ಜರ್ಬೆರಾ ಬೆಳೆದಿದ್ದಾರೆ. ಅದಕ್ಕಾಗಿ ಸರ್ಕಾರದಿಂದ 4.60 ಲಕ್ಷ ಸಬ್ಸಿಡಿ ಪಡೆದಿದ್ದಾರೆ. ಅವರ ಅನುಭವ ಕೇಳಲು ಮೊ. 9886821702 (ಗಿರೀಶ್) ಅವರನ್ನು ಸಂಪರ್ಕಿಸಬಹುದು.
-ಮಹೇಶ್ ಅರಳಿ