ಬೇಸಿಗೆ ಬೆಳೆಗಳಲ್ಲಿ ಖರಬೂಜವೂ ಒಂದು. ಇದರ ಮೂಲ ಇರಾನ್. ಇದನ್ನು ಹೆಚ್ಚಾಗಿ ನೀರಾವರಿಯಾಶ್ರಿತವಾಗಿ ಬೆಳೆಯಲಾಗುತ್ತಿದೆ. ಇದು ಉಷ್ಣವಲಯದ ಬೆಳೆ. ಉತ್ತರ ಕರ್ನಾಟಕ ಭಾಗದಲ್ಲಿ ಬೇಸಿಗೆ ಸಂದರ್ಭದಲ್ಲಿ ಕೆರೆ, ಹಳ್ಳದ ನೀರನ್ನು ಬಳಸಿ ಖರಬೂಜ ಬೇಸಾಯ ಮಾಡುವ ವಾಡಿಕೆ ಇದೆ.
ಬೆಳೆಯುವ ವಿಧಾನ
ಇದು 110 ದಿನಗಳ ಬೆಳೆ. ಬೀಜ ಬಿತ್ತುವುದಕ್ಕಿಂತ ಪೂರ್ವದಲ್ಲಿ ಜಮೀನನ್ನು ಚೆನ್ನಾಗಿ ಹರಗಿ ಸಮತಟ್ಟು ಮಾಡಿರಬೇಕು. ಕೃಷಿ ತಜ್ಞರ ಸಲಹೆ ಪ್ರಕಾರ ಗೊಬ್ಬರ ಹಾಕಬೇಕು. ಬಳಿಕ ಒಂದು ಮುಕ್ಕಾಲು ಅಡಿ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ಅಗಲ 1 ಅಡಿ ಅಂತರವಿದ್ದರೆ ಸಾಕು. ಕೆಲವೆಡೆ ಬೀಜ ನಾಟಿ ಮಾಡುವ ಪದ್ಧತಿ ಉಂಟು. ನಂತರ ಅಗತ್ಯಕ್ಕನುಸಾರವಾಗಿ ನೀರು, ಗೊಬ್ಬರ ಹಾಕಬೇಕು. ರೋಗಗಳು ಬಂದ ತಗುಲಿದ ಕೂಡಲೇ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕು.
ಮಣ್ಣು
ಇದನ್ನು ಹಲವು ವಿಧದ ಮಣ್ಣಲ್ಲಿ ಬೆಳೆಯಲಾಗುತ್ತದೆ. ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯಬಲ್ಲದು. 6.0ರಿಂದ 6.7 ರಸಸಾರವಿದ್ದರೆ ಉತ್ತಮ. ಇದಕ್ಕೆ ಹೆಚ್ಚು ಉಷ್ಣವನ್ನು ತಾಳಿಕೊಳ್ಳುವ ಶಕ್ತಿ ಉಂಟು.
ತಳಿಗಳು
ಮುಸ್ಕಾನ್, ಕೊಯಿನೂರ್, ಆರ್ಕಾ ಜೆಸ್ಟ್, ದುರ್ಗಾಪುರ ಮಧು, ಅರ್ಕಾ ರಾಜಹಂಸ, ಪಂಜಾಬ ಸನ್ಹರಿ ಪ್ರಮುಖವಾಗಿ ಬಳಕೆಯಲ್ಲಿರುವ ತಳಿಗಳು.
ಮಾಹಿತಿಗಾಗಿ ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ನಾಗರಾಜು(9916703171) ಅವರನ್ನು ಸಂಪರ್ಕಿಸಬಹುದು. <
-ಮಹೇಶ್ ಅರಳಿ