

ಗಾರ್ಬೇಜ್‌ನಿಂದಲೇ ಸಾವಯವ ಗೊಬ್ಬರ ತಯಾರಿಸಿ, ರೈತರಿಗೆ ಕಡಿಮೆ ದರದಲ್ಲಿ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.
ಹೊರವಲಯದಲ್ಲಿ ಘಟಕ
ಪುರಸಭೆಯವರಿಗೆ ದಿನವೂ ಶೇಖರಣೆಯಾಗುವ ಕಸ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಂಗ್ರಹಿಸಿದ ಕಸದ ರಾಶಿಯನ್ನು ಏನು ಮಾಡಬೇಕು ಎನ್ನುವ ಪ್ರಶ್ನೆ ಎದುರಾದಾಗ, ಇವರಿಗೆ ಹೊಳೆದದ್ದೇ ಈ ಪರಿಹಾರ. ಊರ ಹೊರಗೆ ಕುಷ್ಟಗಿ ರಸ್ತೆಯಲ್ಲಿರೋ ಪುರಸಭೆಯ ಜಮೀನಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿದರು. ಇದರಿಂದ ಬರಗಾಲದಿಂದ ತತ್ತರಿಸಿರುವ ಗದಗ ಜಿಲ್ಲೆಯ ರೈತರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ದೊರೆತಂತಾಗಿದೆ.
ಮಾಡುವ ವಿಧಾನ
ಇಲ್ಲಿ ಸಂಗ್ರಹವಾಗುವ ಕಸವನ್ನು ವಿವಿಧ ಬಗೆಯಲ್ಲಿ ವಿಂಗಡಿಸಲಾಗುತ್ತದೆ. ನಂತರ ಪುರಸಭೆಯ ಪರಿಸರ ಅಭಿಯಂತರರ ಮಾರ್ಗದರ್ಶನದಲ್ಲಿ ತಯಾರಿಸಲಾಗಿರುವ ಒಂದು ರೀತಿಯ ಕೆಮಿಕಲ್ ಅನ್ನು ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಗಾರ್ಬೇಜ್ ಕೊಳೆಯಲು ಪ್ರಾರಂಭವಾಗುತ್ತದೆ. ನಂತರ ಗೊಬ್ಬರ ಲಭ್ಯವಾಗುತ್ತದೆ. ಗೊಬ್ಬರ ತಯಾರಿಕೆಗೆ ಹಲವು ಯಂತ್ರಗಳ ಸಹಾಯವೂ ಬೇಕು. ಡಂಪಿಂಗ್ ಯಾರ್ಡಿಗೆ ಬಂದು ಬೀಳೋ ಕಸವನ್ನು ಮೊದಲು ವಿಂಗಡಿಸಲಾಗುತ್ತದೆ. ನಂತರ ಅದನ್ನು ದೊಡ್ಡದಾದ ಜಾಲರಿಯಲ್ಲಿ ಸೋಸಿ ಕೇವಲ ಮಣ್ಣಿನಂಥ ಪದಾರ್ಥ ಉಳಿಸಿಕೊಂಡು, ಪ್ಲಾಸ್ಟಿಕ್ ಸೇರಿದಂತೆ ಇನ್ನುಳಿದ ವಸ್ತುಗಳನ್ನು ಬೇರ್ಪಡಿಸಿ ಅದನ್ನು ಜಾಲರಿಯುಳ್ಳ ಯಂತ್ರಕ್ಕೆ ಹಾಕಲಾಗುತ್ತದೆ.
ಸಂಘಟನೆಗಳ ಸಹಕಾರ
ಈ ಕಸದ ಸಂಗ್ರಹಣೆಗೆ ಕೇವಲ ಪುರಸಭೆಯ ನೌಕರರಷ್ಟೇ ಕಾರಣರಲ್ಲ. ಇವರಿಗೆ ಬೆಂಬಲವಾಗಿ ವಿವಿಧ ಮಹಿಳಾ ಸಂಘಟನೆಗಳು ಸಹಕರಿಸುತ್ತಿವೆ. ಕಸ ಸಂಗ್ರಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಇದೆಲ್ಲಾ ಸಾಧ್ಯವಾದದ್ದು ಸ್ವರ್ಣಜಯಂತಿ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 2 ಗುಂಪುಗಳು ಈ ಯೋಜನೆಯ ಯಶಸ್ಸಿಗೆ ಬೆಂಗಾವಲಾಗಿ ನಿಂತಿವೆ.
- ಕೆ.ಓ. ಮುಲ್ಲಾ, ರೋಜ್‌ಗಾರ್ ಯೋಜನಾಧಿಕಾರಿ.
ರೈತರಿಗೆ ವರ
ಇಂಥ ಸಾರ್ಥಕ ಕೆಲಸ ಫಲಕಾರಿಯಾಗಬೇಕಾದರೆ ಅದರಲ್ಲೂ ವಿವಿಧ ಪಕ್ಷಗಳ ಆಡಳಿತವಿರುವ ಪುರಸಭೆಯಂಥ ಸ್ಥಳೀಯ ಸಂಸ್ಥೆಗಳಲ್ಲಿ ಯೋಜನೆಗಳ ಯಶಸ್ವಿ ಅನುಷ್ಠಾನವಾಗೋದು ಎಲ್ಲ ಸದಸ್ಯರ ಸಹಕಾರವಿದ್ದರೆ ಮಾತ್ರ. ಅದು ಇಲ್ಲಿ ಸಾಧ್ಯವಾಗಿದೆ. ಇಲ್ಲಿನ ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಸಹಕರಿಸಿದ್ದರಿಂದಲೇ ಈ ಯೋಜನೆಯು ಯಶಸ್ವಿಯಾಗಿ ರೈತರಿಗೆ ವರದಾನವಾಗಿದೆ.
-ಮಾಹಾಂತೇಶ, ಪುರಸಭೆಯ ಮುಖ್ಯಾಧಿಕಾರಿ
ಡಬಲ್ ಧಮಾಕಾ
ಪುರಸಭೆಯವರು ಕಸದಿಂದ ತಯಾರಿಸುವ ಈ ಗೊಬ್ಬರಕ್ಕೆ ಗಜೇಂದ್ರ ಗೋಲ್ಡ್ ಸಾವಯವ ಗೊಬ್ಬರ ಎನ್ನುವ ಹೆಸರಿಡಲಾಗಿದೆ. ಒಂದು ಕ್ವಿಂಟಲ್ ಗೊಬ್ಬರ ತಯಾರಿಕೆಗೆ ಪುರಸಭೆಗೆ ತಗಲುತ್ತಿರುವ ವೆಚ್ಚ 1 ಸಾವಿರ. ಆದರೆ, ಗೊಬ್ಬರ ಮಾರಾಟದಿಂದ ಬರೋ ಆದಾಯ ಪ್ರತಿ ಕ್ವಿಂಟಲ್‌ಗೆ ರು. 2 ಸಾವಿರ. ರೈತರಿಗೆ ಉತ್ತಮ ಸಾವಯವ ಗೊಬ್ಬರದ ಜತೆಗೆ ಪುರಸಭೆಗೆ ಆದಾಯವೂ ದೊರೆತಂತಾಗಿದೆ.
-ಶಿವಕುಮಾರ ಕುಷ್ಟಗಿ