

ಮಾಲೂರು ತಾಲೂಕಿನ ಕಾಟೇರಿ ಗ್ರಾಮದ ಮರಿಶಾಮಪ್ಪ ಎಂಬ ಕೃಷಿಕ ರೇಡಿಯೋದಲ್ಲಿ ಬರುವ ಕೃಷಿ ವಾರ್ತೆ, ದಿನಪತ್ರಿಕೆಯಲ್ಲಿನ ಕೃಷಿ ಮಾಹಿತಿ ಆಧರಿಸಿ ಜೇನು ಸಂಗ್ರಹ ಪದ್ಧತಿ ಕರಗತ ಮಾಡಿಕೊಂಡರು. ಆ ಮೂಲಕ ವಾರ್ಷಿಕ ಸಾವಿರಾರು ರು. ಗಳಿಸುತ್ತಿದ್ದಾರೆ...
ಇವರು ವ್ಯವಸಾಯ, ಹೈನುಗಾರಿಕೆ ಜೊತೆ ಜೇನು ಉತ್ಪಾದನೆಯಲ್ಲಿ ಯಶಸ್ವಿಯಾಗಿದ್ದಾರೆ. ಅದೂ ಏಕಲವ್ಯನ ರೀತಿಯಲ್ಲಿ!
ಮಾಲೂರು ತಾಲೂಕಿನ ಕಾಟೇರಿ ಗ್ರಾಮದ ಮರಿಶಾಮಪ್ಪ ಎಂಬ ಕೃಷಿಕ ರೇಡಿಯೋದಲ್ಲಿ ಬರುವ ಕೃಷಿ ವಾರ್ತೆ, ದಿನಪತ್ರಿಕೆಯಲ್ಲಿನ ಕೃಷಿ ಮಾಹಿತಿ ಆಧರಿಸಿ ಜೇನು ಸಂಗ್ರಹ ಪದ್ಧತಿ ಕರಗತ ಮಾಡಿಕೊಂಡರು. ಆ ಮೂಲಕ ವಾರ್ಷಿಕ ಸಾವಿರಾರು ರು. ಗಳಿಸುತ್ತಿದ್ದಾರೆ.
ಚಿಕ್ಕ ಮನೆಯ ಪರಿಸರದಲ್ಲೇ ಹತ್ತು ಜೇನು ಸಾಕಣೆ ಪೆಟ್ಟಿಗೆ ನಿರ್ಮಿಸಿದ್ದಾರೆ. ಜತೆಗೆ ತುಡವೆ ಜೇನು ಬೆಳೆಯುತ್ತಿದ್ದಾರೆ. ಜೇನು ಸಾಕಣೆಯಲ್ಲದೆ ಅದರ ಕುಟುಂಬ ಮಾರಿ ಸಹ ಸಾವಿರಾರು ರು. ಹಣ ಗಳಿಸುತ್ತಿದ್ದಾರೆ. 3 ಎಕರೆ ಜಮೀನಿನಲ್ಲಿ ತೆಂಗು, ರಾಗಿ ಬೆಳೆ ಬೆಳೆಯುತ್ತಾರೆ. ಅಲ್ಲದೆ, ಹೈನುಗಾರಿಕೆ ನಡೆಸುತ್ತಾರೆ. ಜೇನು ಕೃಷಿಗೆ ಪೈಪೋಟಿ ಇಲ್ಲ ಎನ್ನುವ ಮರಿಶಾಮಪ್ಪ ಅವರು ಎಷ್ಟೇ ಜೇನು ತುಪ್ಪ ಸಂಗ್ರಹಿಸಿದರೂ ಬೇಡಿಕೆ ಉಂಟು ಅಂತಾರೆ.
ಹೀಗಿದೆ ಖರ್ಚು
ಜೇನು ಸಂಗ್ರಹಿಸಲು ಪ್ರತಿ ಪೆಟ್ಟಿಗೆಗೆ 1200 ಖರ್ಚು ತಗುಲುವುದು. ಪ್ರತಿ ಪೆಟ್ಟಿಗೆಯಿಂದ ಶೂನ್ಯ ನಿರ್ವಹಣೆಯಲ್ಲಿ ರು. 1200 ವಾರ್ಷಿಕವಾಗಿ ದುಡಿಯಬಹುದು. ಸಕ್ಕರೆ ನೀರು ಮಾತ್ರ ವ್ಯಯಿಸಬೇಕಾದ ಪೆಟ್ಟಿಗೆ ಜೇನು ಸಂಗ್ರಹಕ್ಕಾಗಿ ಮನೆ ಸುತ್ತ 10ರಿಂದ 15 ಪೆಟ್ಟಿಗೆ ಇಟ್ಟರೆ ಶೇ.25ರಷ್ಟು ಹೆಚ್ಚಿನ ಲಾಭ ಗ್ಯಾರಂಟಿ. ವಾರ್ಷಿಕವಾಗಿ ರು. 20 ಸಾವಿರ ದುಡಿಯಬಹುದು. ಒಂದು ಪೆಟ್ಟಿಗೆಯಲ್ಲಿ ಎಂಟು ವಿಭಾಗಗಳಿದ್ದು, ಸರಾಸರಿ ಒಂದು ಕೆ.ಜಿ. ತುಪ್ಪ ಪಡೆಯಬಹುದು. ಕಡ್ಡಿ ಹಾಗೂ ತುಡವೆ ಜೇನು ಹೆಚ್ಚಿನ ತುಪ್ಪ ನೀಡುತ್ತದೆ. ಅಲ್ಲದೆ, ರಾಣಿ ಜೇನು ಕಣಗಳು, ಕಾರ್ಮಿಕ ಕಣಗಳು ಹೆಚ್ಚಾದಾಗ ಜೇನು ಕುಟುಂಬಗಳ ಪಾಲಾಗುತ್ತವೆ. ಪ್ರತಿ ಕುಟುಂಬವನ್ನು ಸಾವಿರ ರು.ಗಳಂತೆ ಮಾರಬಹುದು.
ಜೇನು ಸಂಗ್ರಹದಲ್ಲಿ ಹೊಸ ಆವಿಷ್ಕಾರ ಮಾಡುತ್ತಿರುವ ಮರಿಶಾಮಪ್ಪ, ರಾಗಿ ಬೆಳೆಯಲ್ಲೂ ಸಾವಯವ ಕೃಷಿ, ಗುಂಡಿ ಪದ್ಧತಿ ಆಳವಡಿಸಿಕೊಂಡು ಹೆಚ್ಚಿನ ಫಸಲು ಪಡೆಯುತ್ತಿದ್ದಾರೆ. ಸುತ್ತಮುತ್ತಲ ಗ್ರಾಮಸ್ಥರಿಗೆ ಕೃಷಿ ಸಲಹೆ ನೀಡುತ್ತಾರೆ. ಮಾಹಿತಿಗಾಗಿ ಮರಿಶಾಮಪ್ಪ (ಮೊ. 8951361264) ಸಂಪರ್ಕಿಸಬಹುದು. <
-ರಾಜೇಂದ್ರ ವೈದ್ಯ