

ರೈತರಿಗೆ ಹೊಲದ ಹಿಡಿ ಮಣ್ಣು ಹೊನ್ನು ಇದ್ದಂತೆ. ಅದಕ್ಕಾಗಿ ಅನ್ನದಾತರು ಬೆಳೆಗಳನ್ನು ಬೆಳೆಯಲು ಎಷ್ಟು ಆಸ್ಥೆ ವಹಿಸುತ್ತಾರೋ, ಅಷ್ಟೆ ಜತನದಿಂದ ಮಣ್ಣನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಾರೆ.
ರೈತರು ಮಳೆಗಾಲದಲ್ಲಿ ಮಣ್ಣನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಇದ್ದಲ್ಲಿಯೇ ಅದನ್ನು ರಕ್ಷಿಸಲು ಬಹಳ ಕಾಳಜಿ ವಹಿಸುತ್ತಾರೆ. ಸಾಮಾನ್ಯವಾಗಿ ಹೊಲದ ಕ್ಷೇತ್ರಕ್ಕೆ ಅನುಗುಣವಾಗಿ ಹಲವೆಡೆ ಮಣ್ಣು ರಕ್ಷಣೆಗೆಂದು ಒಳಗಟ್ಟಿ ಇರುತ್ತವೆ.
ನಾಲ್ಕು ಎಕರೆ ಜಮೀನಿಗೆ ನೀರು ಹರಿಯುವ ಇಳಿಜಾರಿನ ಜಾಗದ ಬದುವಿನಲ್ಲಿ 4 ಅಡಿ ಉದ್ದ 3 ಅಡಿ ಅಗಲದ ಒಳಗಟ್ಟಿ ನಿರ್ಮಿಸಬೇಕೆಂಬ ನಿಯಮವಿದ್ದರೂ ರೈತರು ತಮ್ಮ ಅನುಕೂಲಕ್ಕೆ ತಕ್ಕಂತೆ ಅಜಮಾಸು ಅಳತೆಯಿಂದ ನಿರ್ಮಿಸುತ್ತಾರೆ.
ರಚನಾ ವಿಧಾನ
ಒಳಗಟ್ಟಿ ನಿರ್ಮಾಣಕ್ಕೆ ಚಪ್ಪಟೆ ಕಲ್ಲುಗಳನ್ನು ಬಳಸುವುದುಂಟು. ಈ ಕಲ್ಲುಗಳನ್ನು ಬಳಸುವುದರಿಂದ ಒಳಗಟ್ಟಿ ಹೆಚ್ಚು ತಾಳಿಕೆ ಬರುತ್ತದೆ ಮತ್ತು ಹೊಲದಲ್ಲಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಹೋಗಿ ಮಣ್ಣು ಹಾಗೆಯೇ ಉಳಿಯುತ್ತದೆ. ಗುಂಡುಕಲ್ಲುಗಳಾದರೆ ಉರುಳಿ ಹೋಗುವ ಸಾಧ್ಯತೆ ಅಧಿಕ. ಚಪ್ಪಟೆ ಕಲ್ಲುಗಳನ್ನು ಸಮಾನಾಂತರವಾಗಿ ಜೋಡಿಸಿ ಎರಡೂ ದಂಡೆಗುಂಟ ಸ್ವಲ್ಪ ಎತ್ತರದಲ್ಲಿ ಒಡ್ಡು ಹಾಕುತ್ತಾರೆ.
ಗುಂಡುವರತಿ
ಹೆಚ್ಚು ಜಮೀನು ಹೊಂದಿದ ರೈತರು ಗುಂಡು ಒಳಗಟ್ಟಿ ಕಟ್ಟಿಸುತ್ತಾರೆ. ಇದಕ್ಕೆ ಗುಂಡುವರತಿ ಎಂದೂ ಕರೆಯುತ್ತಾರೆ. ಹೊಲದ ಬದುವಿನ ಮೂಲೆಯಿಂದ ಸ್ವಲ್ಪ ದೂರದ ಇಳಿಜಾರಿನ ಜಾಗದಲ್ಲಿ ಮೂರ್ನಾಲ್ಕು ಅಡಿ ಆಳದ ಗುಂಡಿ ತೋಡಿಸುತ್ತಾರೆ. ಸುತ್ತಲೂ ಸಿಮೆಂಟ್‌ನಿಂದ ತಳದಲ್ಲಿ ಕೊಳವೆಯಾಕಾರದ ದಾರಿ ಮಾಡಿ ಬದುವಿನ ದಂಡಿಗೆ ಕಮಾನಿನಾಕಾರದ ಬಾಗಿಲು ಮಾಡುತ್ತಾರೆ. ಇದು ಸರಾಗವಾಗಿ ನೀರು ಹರಿದು ಹೋಗಲು ದಾರಿ. ಮಳೆಯ ರಭಸದ ನೀರು ಈ ಚಿಕ್ಕ ಬಾಗಿಲುಗಳ ಮೂಲಕ ಗುಂಡಿಯಲ್ಲಿ ಬಿದ್ದು ಹರಿದು ಹೊರಗೆ ಹೋಗುತ್ತದೆ. ಇದು ಒಂಥರಾ ಫಿಲ್ಟರ್ ಮಾಡಿದಂತೆ. ಜರಡಿಯಲ್ಲಿ ಚಹಾ ಮಾತ್ರ ಉಳಿದು ಪುಡಿ ಮೇಲಿರುವಂತೆ ನೀರಷ್ಟೇ ಹರಿದು ಹೋಗಿ ಮಣ್ಣು ಗುಂಡಿಯ ದಂಡಿಗೆ ಸಂಗ್ರಹವಾಗುತ್ತದೆ.
ಕೆಲವು ರೈತರು ಹೊಲದ ಬದುವಿಗುಂಟ ದೊಡ್ಡ ಒಡ್ಡು ಹಾಕಿಸಿ ಕಲ್ಲುಗಳನ್ನೂ ಜೋಡಿಸಿರುತ್ತಾರೆ. ಇದರಿಂದ ಮಳೆಗಾಲದಲ್ಲಿ ನೀರು ನಿಂತು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಹಸಿಯಾಗುತ್ತದೆ. ಅಲ್ಲದೆ, ನೀರನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲ.
ಒಡ್ಡು ಒಳಗಟ್ಟಿ ಲಾಭ
ಅನುಭವಿ ರೈತರು ಹೇಳುವಂತೆ ಒಡ್ಡು ಒಳಗಟ್ಟಿ ಇದ್ದ ಹೊಲಕ್ಕೆ ಜಡ್ಡೇ ಇಲ್ಲ. ನೀರುಂಡ ರಾಗಿಗೆ (ಫಲವತ್ತಾದ ಕಪ್ಪನೆಯ ಮೆತ್ತನೆಯ ಮಣ್ಣು) ಗೊಬ್ಬರ ಚೆಲ್ಲಬೇಕಿಲ್ಲ. ಒಡ್ಡು ಒಳಗಟ್ಟಿ ಯಾಕೆ ಬೇಕು ಎಂದು ಅಲಕ್ಷಿಸಿದರೆ ಹೊಲದಲ್ಲಿ ಮಣ್ಣು ನಿಲ್ಲುವುದೇ ಕಷ್ಟ. ಬೇಕಾಬಿಟ್ಟಿಯಾಗಿ ಹರಿದು ಪಕ್ಕದ ರೈತರ ಹೊಲದಲ್ಲಿ ಹರಿದು ಹೋಗುತ್ತದೆ. ಹಾಗೆ ಹೋದ ಮಣ್ಣನ್ನು ಕಳಕೊಂಡವರು ಎಂದೂ ಯಾವ ಕಾರಣಕ್ಕೂ ಮರಳಿ ತೆಗೆದುಕೊಂಡು ಹೋಗುವಂತಿಲ್ಲ. ಇದು ರೈತರ ನಿಯಮ. ಒಬ್ಬರದು ಬಯಸದೇ ಬಂದ ಭಾಗ್ಯ. ಮತ್ತೊಬ್ಬರದು ಇದ್ದದ್ದನ್ನು ಕಳಕೊಂಡು ಗೋಳಾಡುವ ದೌರ್ಭಾಗ್ಯ. ಎಷ್ಟೇ ಗೊಬ್ಬರ ಸುರುವಿದರೂ ವ್ಯರ್ಥ. ಬೆಳೆ ಬರುವ ನಿರೀಕ್ಷೆಯೂ ಏರುಪೇರು. ಫಲವತ್ತಾದ ಕಪ್ಪು ಮಣ್ಣಿಗೆ ಹೆಸರಾದ ಬಾಗಲಕೋಟೆ ಜಿಲ್ಲೆಯ ಹೊಲಗಳ ಕಡೆ ಹೆಜ್ಜೆ ಹಾಕಿದರೆ ಬಂದೋಬಸ್ತ್ ಒಡ್ಡು ಒಳಗಟ್ಟಿಗಳು ಕಾಣಸಿಗುತ್ತವೆ. ರೈತರೆ ಕಂಡುಕೊಂಡ ಈ ವಿಧಾನ ಎಷ್ಟೊಂದು ಪ್ರಯೋಜನಕಾರಿಯಲ್ಲವೇ?
-ಎ. ಎಸ್. ಹೂಲಗೇರಿ, ಹುನಗುಂದ