

ಕರ್ನಾಟಕಕ್ಕೆ ಮೊದಲ ಬಾರಿ ಕಿನೋ ಕಿತ್ತಳೆ ಪರಿಚಯಿಸಿದವರು ರಾಮಣ್ಣ ವಿರೂಪಾಕ್ಷ ಪಟ್ಟಣದ. ದಾಳಿಂಬೆ ನಷ್ಟದಿಂದ ಕಂಗಾಲಾಗಿದ್ದ ಅವರ ಕೈ ಹಿಡಿದು ಮೇಲೆತ್ತಿದ್ದು ಇದೇ ಹಣ್ಣು.
'ಹದಿನೈದು ವರ್ಷಗಳಿಂದ ಹೊಲವನ್ನು ಪ್ರೀತಿಸಿದೆ. ಭೂಮಿ ತಾಯಿ ಅದಕ್ಕೆ ಮೋಸ ಮಾಡಿಲ್ಲ. ಕೈ ತುಂಬಾ ರೊಕ್ಕ ಕೊಟ್ಟು ಹರಸಿದ್ದಾಳೆ' ಎಂದರು ಗದಗ ತಾಲೂಕಿನ ಕೋಟುಮಚಗಿಯ ರಾಮಣ್ಣ ವಿರೂಪಾಕ್ಷ ಪಟ್ಟಣದ. ಅವರು ಹಾಗೆ ಹೇಳಲು ಕಾರಣವಿತ್ತು. ತಮ್ಮ ಹನ್ನೆರಡು ಎಕರೆ ತೋಟದಲ್ಲಿ ಕಿನೋ ಕಿತ್ತಳೆ ಬೆಳೆದು ಮೊದಲ ಬೆಳೆಯಲ್ಲಿಯೇ ಎಂಬತ್ತು ಟನ್ಗಳಷ್ಟು ಸಮೃದ್ಧ ಇಳುವರಿ ಮತ್ತು ಅತ್ಯುತ್ತಮ ಬೆಲೆ ಪಡೆದಿದ್ದರು.
ರಾಮಣ್ಣ ಕಿನೋ ಬೆಳೆಸಿದ್ದು ರಾಜ್ಯದಾದ್ಯಂತ ಸುದ್ದಿಯಾಯಿತು. ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಯಾವ ಕೃಷಿಕನೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳೆದು ಯಶಸ್ವಿಯಾದ ಬೇರೆ ಉದಾಹರಣೆಗಳಿಲ್ಲ.ಅವರು ಅಲ್ಲಿ 1,630 ಕಿನೋ ಗಿಡಗಳನ್ನು ಬೆಳೆಸಿ ಕೇವಲ ನಾಲ್ಕು ವರ್ಷಗಳಲ್ಲಿ ಅತ್ಯಧ್ಭುತ ಫಸಲು ಪಡೆದಿದ್ದರು.
ರಾಮಣ್ಣ ಬಿ.ಎ, ಬಿ.ಇಡಿ ಓದಿದವರು. ಹಿರಿಯರಿಂದ ಬಂದ ಹೊಲದಲ್ಲಿ ವಿಪರೀತ ನೀರಿನ ಅಭಾವ. ಉದ್ಯೋಗಕ್ಕೆ ತೆರಳಲು ಮನಸ್ಸು ಬರಲಿಲ್ಲ. ಪ್ರತ್ಯೇಕ 17 ಎಕರೆ ಜಮೀನು ಖರೀದಿಸಿ ಕೃಷಿ ಮಾಡಿದರು. ಭೂಮಿಯಲ್ಲಿ ಧಾರಾಳ ನೀರು ಸಿಕ್ಕಿತು. 2002ರಲ್ಲಿ ದಾಳಿಂಬೆ ಬೆಳೆದು ಯಶಸ್ವಿಯಾದರು. 2004 ರಿಂದ 2006 ರವರೆಗೆ ದಾಳಿಂಬೆ ಅತ್ಯುತ್ತಮ ಇಳುವರಿ ನೀಡಿತು. ಇಂಗ್ಲೆಂಡ್, ಜರ್ಮನಿಗಳಿಗೆ ದಾಳಿಂಬೆ ಒಯ್ಯಲು ಕಂಟೇನರ್ಗಳು ನೇರ ಇವರ ಹೊಲಕ್ಕೆ ಬಂದವು. ದೊರೆತ 110 ಟನ್ ಫಸಲಿನಲ್ಲಿ ಶೇಕಡಾ 40ರಷ್ಟು ವಿದೇಶಗಳಿಗೆ ನಿರ್ಯಾತವಾಯಿತು. ಆದರೆ ಅನಂತರ ಅದೃಷ್ಟ ಕೈಕೊಟ್ಟಿತು. ವಿಪರೀತ ರೋಗ ಬಾಧೆ. ದಾಳಿಂಬೆ ಗಿಡಗಳು ನಾಶವಾದವು. ರಾಮಣ್ಣ ಸೋಲೊಪ್ಪಲಿಲ್ಲ. ಕಿನೋ ಕಿತ್ತಳೆ ಬೆಳೆಯುವ ಕೃಷಿಕರನ್ನು ಕಾಣಲು ನೇರ ಗುಜರಾತಿನ ಗಂಗಾನಗರಕ್ಕೆ ತೆರಳಿದರು. ಅಲ್ಲಿನ ತೋಟಗಳನ್ನು ಸಂದರ್ಶಿಸಿದ ಅವರು ಕರ್ನಾಟಕದಲ್ಲಿ ಯಾರೂ ಬೆಳೆಸದೆ ಇದ್ದ ಈ ಹಣ್ಣನ್ನು ಕೋಟುಮಚಗಿಯ ತಮ್ಮ ಹೊಲದಲ್ಲಿ ಬೆಳೆಸುವ ಸಂಕಲ್ಪ ತೊಟ್ಟರು.
ನಂತರದ್ದು ಸುಂದರ ಯಶೋಗಾಥೆ. ಹನ್ನೆರಡು ಎಕರೆಯಲ್ಲಿ ನೆಡಲು 1650 ಕಿನೋ ಗಿಡಗಳು ಗಂಗಾನಗರದಿಂದ ಬಂದಿಳಿದವು. ಎಕರೆಗೆ 136 ಗಿಡಗಳಂತೆ ನೆಟ್ಟು ಗಿಡಗಳ ನಡುವೆ 18 ಅಡಿ ಅಂತರ ಕಾಪಾಡಲಾಯಿತು. ಹನಿ ನೀರಾವರಿ, ಗೊಬ್ಬರಗಳನ್ನು ಕಾಲಕಾಲಕ್ಕೆ ನೀಡುತ್ತಾ ಮೂರು ವರ್ಷ ಜೋಪಾನ ಮಾಡಲಾಯಿತು. ಅಷ್ಟು ಕಷ್ಟಪಟ್ಟಿದ್ದಕ್ಕೆ ಕಿನೋ ಅವರಿಗೆ ಒಲಿಯಿತು. 20 ಟನ್ ಇಳುವರಿ ನಿರೀಕ್ಷಿಸಿದ್ದ ಅವರಿಗೆ ದೊರೆತದ್ದು ಬರೋಬ್ಬರಿ 80 ಟನ್! ಗಿಡವೊಂದರಲ್ಲಿ 600 ರಿಂದ 1000 ಹಣ್ಣುಗಳು ತುಂಬಿ ತೂಗಿದವು. ಹಣ್ಣುಗಳನ್ನು ಬಾಕ್ಸ್ಗಳಲ್ಲಿ ತುಂಬಿ ಚೆನ್ನೈಗೆ ಕಳುಹಿಸಿ ಮಾರಾಟ ಮಾಡತೊಡಗಿದರು. ಆಗಸ್ಟ್ ತಿಂಗಳು ಭಾರತದ ಉಳಿದ ಕಡೆಗಳಿಂದ ಕಿನೋ ಬರುವ ಸಮಯ ಅಲ್ಲವಾದುದರಿಂದ ಉತ್ತಮ ಬೆಲೆಯೂ ಲಭ್ಯವಾಯಿತು.
ಇದೀಗ ಮುಂದಿನ ಬೆಳೆಯ ಬೆಳೆಗಾಗಿ ಕಿನೋ ಗಿಡಗಳಿಗೆ ನೀರು ನಿಲ್ಲಿಸುವ ಸಿದ್ಧ್ದತೆಯಲ್ಲಿ ಇದ್ದಾರೆ.
ಏನಿದು ಕಿನೋ ಕಿತ್ತಳೆ ?
ಕಿತ್ತಳೆ ಮೂಲತಃ ಸಿಟ್ರಸ್ ಕುಟುಂಬಕ್ಕೆ ಸೇರಿದೆ. ಕ್ರಿ.ಪೂ 2500ರಲ್ಲಿಯೇ ಕಂಡುಬಂದ ಗಿಡ. 1915 ರಲ್ಲಿ ಕ್ಯಾಲಿಫೋರ್ನಿಯಾ ರಿವರ್ಸೈಡ್ ವಿಶ್ವ ವಿದ್ಯಾನಿಲಯದಲ್ಲಿ ಎಚ್.ಬಿ. ಫ್ರಾಸ್ಟ್ ಎಂಬ ವಿಜ್ಞಾನಿ 'ಕಿಂಗ್' ಹಾಗೂ 'ವಿಲ್ಲೊ' ಎಂಬ ಎರಡು ಸಿಟ್ರಸ್ ತಳಿಗಳನ್ನು ಕಸಿ ಮಾಡಿ 'ಕಿನೋ' ಎಂಬ ಹೊಸದೊಂದು ಪ್ರಭೇದವನ್ನು ಹಣ್ಣಿನ ಲೋಕಕ್ಕೆ ನೀಡಿದರು.
ನೋಡಲು ಅತ್ಯಂತ ಆಕರ್ಷಕ. ಬಹಳ ರುಚಿ. ಸುಲಿಯಲು ಸುಲಭ. ಅತ್ಯಧಿಕ ಇಳುವರಿ. ಕಿನೋ ಕಿತ್ತಳೆ ಜನಪ್ರಿಯವಾಗಲು ಬೇರೇನೂ ಬೇಕಾಗಿರಲಿಲ್ಲ. ಬಹಳ ಬೇಗನೆ ಕಿನೋ ಕಿತ್ತಳೆ ಸಂಶೋಧನಾ ರಂಗದಿಂದ ಕೃಷಿಕರ ಹೊಲಕ್ಕೆ ಬಂದಿತು. 1949ರಲ್ಲಿಯೇ ಭಾರತಕ್ಕೂ ಬಂತು. ಹಣ್ಣು ಬೆಳೆಗಾರರು ಇದನ್ನು ಪ್ರಮುಖ ಬೆಳೆಯಾಗಿ ಸ್ವೀಕರಿಸಿದರು. ಇಂದು ಭಾರತದಲ್ಲಿ ಪಂಜಾಬ್, ಗುಜರಾತ್, ಉತ್ತರ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಕಿನೋ ಕಿತ್ತಳೆ ಬೆಳೆಯಲಾಗುತ್ತಿದೆ. ಪಂಜಾಬಿನ ಅಬೋಹರ್ ಕಿನೋ ಕಿತ್ತಳೆ ಬೆಳೆಯುವಲ್ಲಿ ಮಾಡಿರುವ ಸಾಧನೆಯಿಂದ ಭಾರತದ ಕ್ಯಾಲಿಫೋರ್ನಿಯ ಎಂದೇ ಹೆಸರುವಾಸಿ. ಇಂದು ಪಂಜಾಬಿನ ಹಣ್ಣು ಬೆಳೆಯುವ 70,000 ಹೆಕ್ಟೇರ್ ಪೈಕಿ 41,000 ಹೆಕ್ಟೇರ್ನಲ್ಲಿ ಕಿನೋ ಕಿತ್ತಳೆ ಬೆಳೆಸಲಾಗುತ್ತಿದೆ.
1 ಕರ್ನಾಟಕದಲ್ಲಿ ಕಿನೋ ಬೆಳೆದ ಮೊದಲಿಗ ರಾಮಣ್ಣ
80 ಟನ್ ಚೊಚ್ಚಲ ಫಸಲು ನೀಡಿದ ಇಳುವರಿ
136 ಪ್ರತಿ ಎಕರೆಗೆ ನೆಟ್ಟ ಗಿಡಗಳು
1000 ಹಣ್ಣುಗಳು ಸರಾಸರಿ ಒಂದು ಗಿಡದಲ್ಲಿ ತೂಗಿದವು
ಮೊದಲ ಕಿನೋ ಕಿತ್ತಳೆ ಬೆಳೆಯಲ್ಲಿಯೇ ಬಂದ ಬಂಪರ್ ಇಳುವರಿ ಸೋಲು ಒಪ್ಪದೇ ಕೃಷಿಯಲ್ಲಿ ಮುಂದುವರಿದುದರ ಫಲ. ಭೂಮಿ ತಾಯಿ ಮನದುಂಬಿ ಹರಸಿದ್ದಾಳೆ.
- ರಾಮಣ್ಣ ವಿರೂಪಾಕ್ಷ ಪಟ್ಟಣದ.
-ರಮೇಶ್ ಕೈಂತಜೆ