

ಇದರ ಮೂಲ ಭಾರತ. ಔಷಧ ಗುಣ ಹೊಂದಿದೆ. ಇದನ್ನು ಒಂದೇ ಬೆಳೆಯಾಗಿ ಬೆಳೆಯದೆ ಇತರ ಬೀಜಗಳ ಜತೆ ಬಿತ್ತುತ್ತಾರೆ. ಇದರಿಂದ ಹಲವು ಲಾಭಗಳುಂಟು. ಅಲಸಂದೆಯು ವಾತಾವರಣದಲ್ಲಿನ ನೈಟ್ರೋಜನ್ ಅಂಶ ಹೀರಿಕೊಂಡು ಬೇರಿನಲ್ಲಿ ಸಂಗ್ರಹಿಸಿಕೊಳ್ಳುತ್ತದೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಹಾಗಾಗಿ ಕೆಲವು ರೈತರು ಅಲಸಂದೆಯನ್ನು ಕಟಾವು ಮಾಡಿದ ಬಳಿಕ ಬಳ್ಳಿಯನ್ನು ಹೊಲದಲ್ಲೇ ಹಾಗೆಯೇ ಬಿಡುತ್ತಾರೆ. ಇದು ಗೊಬ್ಬರವಾಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂಬುದು ರೈತರೇ ಕಂಡುಕೊಂಡ ವಿಧಾನ.
ಬೆಳೆಯುವ ವಿಧಾನ
ಅಲಸಂದೆಯನ್ನು ಬೆಳೆಯಲು ಮೇ- ಜುಲೈ ಮತ್ತು ಅಕ್ಟೋಬರ್- ನವೆಂಬರ್ ಸಕಾಲ. ಬೀಜ ಬಿತ್ತುವ ಪೂರ್ವದಲ್ಲಿ ಜಮೀನನ್ನು ಹದ ಮಾಡಿರಬೇಕು. ಬಳಿಕ ಎಕರೆಗೆ 10 ಟನ್‌ನಂತೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಒಂದೂವರೆ ಅಡಿ ಅಂತರದಲ್ಲಿ ಸಾಲು ಮಾಡಬೇಕು. 6 ಅಂಗುಲ ಅಂತರದಲ್ಲಿ ಬೀಜ ಬಿತ್ತನೆ ಮಾಡಬೇಕು. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅಲಸಂದೆಯನ್ನು ಹೆಚ್ಚಾಗಿ ಅಂತರ ಬೆಳೆಯಾಗಿ ಬೆಳೆಯುವುದೇ ಹೆಚ್ಚು. ನೀರಾವರಿಯಾದರೆ ಕಾಲಕಾಲಕ್ಕೆ ನೀರು ಹಾಯಿಸಬೇಕು. ಕಳೆ ಬಾರದಂತೆ ನಿಗಾ ವಹಿಸಬೇಕು. ಬಿತ್ತಿದ 2 ತಿಂಗಳಲ್ಲಿ ಫಸಲು ಕೈಗೆ ಬರುತ್ತದೆ.
ತಳಿಗಳು
ರಾಜ್ಯದಲ್ಲಿ ಹೆಚ್ಚಾಗಿ ಸ್ಥಳೀಯ ತಳಿಗಳೇ ಹೆಚ್ಚು ಚಾಲ್ತಿಯಲ್ಲಿವೆ. ಆದರೂ ಎಸ್- 288, ಪೂಸಾ ಬಾರ್ಸಾತಿ, ಪೂಸಾ ಫಲ್ಗುಣಿ ಸೇರಿದಂತೆ ಮೊದಲಾದ ಹೈಬ್ರಿಡ್ ತಳಿಗಳು ಬಳಕೆಯಲ್ಲಿವೆ.
ಮಣ್ಣು
ಕಪ್ಪು, ಕೆಂಪು ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ರೈತರು ಎಲ್ಲ ನಮೂನೆಯ ಮಣ್ಣಿನಲ್ಲಿ ಇದನ್ನು ಬೆಳೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ರೈತ ಅರವಿಂದ್ ಪಾಟೀಲ್ (ಮೊ. 9448236310) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ