

ರೈತರು ಬೆಳೆದ ಬೆಳೆಗೆ ಒಂದೆಡೆ ಬೆಂಬಲ ಬೆಲೆ ಸಿಗುತ್ತಿಲ್ಲ. ಮತ್ತೊಂದೆಡೆ ಕೀಟಗಳ ಬಾಧೆ. ಈ ಕೀಟಗಳ ಕಾಟ ದೊಡ್ಡ ತಲೆನೋವು. ಕೀಟನಾಶಕ್ಕೆ ರಾಸಾಯನಿಕ ವಿಧಾನವೂ ಪ್ರಯೋಜನವಾಗುತ್ತಿಲ್ಲ. ರಾಸಾಯನಿಕ ಬಳಕೆಯಿಂದ ಕೀಟಗಳು ನಾಶವಾಗುವ ಬದಲು ಅವುಗಳಿಗೆ ನಿರೋಧಕ ಶಕ್ತಿ ಹೆಚ್ಚುತ್ತದೆ.
ಕೆಲವೊಮ್ಮೆ ಕೀಟಗಳ ಜೊತೆಗೆ ಅವುಗಳ ನೈಸರ್ಗಿಕ ಶತ್ರುಗಳೂ ನಾಶವಾಗುತ್ತವೆ. ಅಂದರೆ ರೈತಸ್ನೇಹಿ ಕೀಟಗಳು ನಾಶವಾಗುತ್ತಿವೆ. ಇದನ್ನು ತಡೆಯಲು ಸುತ್ತೂರು ಕೃಷಿ ವಿಜ್ಞಾನ ಸಂಸ್ಥೆ ಟ್ರೈಕೋಗ್ರಾಮ ಎಂಬ ಜಾತಿಯ ಹೊಸ ಕೀಟ ಪರಿಚಯಿಸುತ್ತಿದೆ.
ಏನಿದು ಟ್ರೈಕೋಗ್ರಾಮ?
ಹಾನಿಕಾರಕ ಕೀಟಗಳ ಸ್ವಾಭಾವಿಕ ಶತ್ರು ಬಳಸಿ ಕೀಟ ನಿಯಂತ್ರಿಸುವ ವಿಧಾನವೇ ಜೈವಿಕ ಕೀಟ ಹತೋಟಿ. ಬೆಳೆಗಳ ಸುಳಿ, ಕಾಯಿ ಕೊರೆಯುವ ಹುಳುಗಳು ಬೆಳೆಯನ್ನು ಶೇ.90ರಷ್ಟು ಹಾನಿಗೊಳಿಸುತ್ತವೆ. ಈ ಹುಳುಗಳ ಹತೋಟಿಗೆ ಜೈವಿಕ ಕೀಟ ಹೆಚ್ಚು ಪ್ರಭಾವಿಯಾಗಿದ್ದು, ಇಂಥ ಕೀಟ ನಿಯಂತ್ರಣವೇ ಜೀವಿ ಟ್ರೈಕೋಗ್ರಾಮ.
ಸೂಕ್ಷ್ಮಕೀಟ
ಟ್ರೈಕೋಗ್ರಾಮ ಕಣಜ ಜಾತಿಗೆ ಸೇರಿದ ಸೂಕ್ಷ್ಮಕೀಟ. 0.4-0.7 ಮಿ.ಮೀ. ಉದ್ದ. 0.15-0.25 ಮಿ.ಮೀ ಅಗಲವಿದೆ. ಟ್ರೈಕೋಗ್ರಾಮದಲ್ಲಿ ಟ್ರೈಕೋಗ್ರಾಮ ಕಿಲೋನಿಸ್, ಟ್ರೈಕೋಗ್ರಾಮ ಅಕ್ಕಿಯೇ, ಟ್ರೈಕೋಗ್ರಾಮ ಜಪಾನಿಕಂ ಎಂಬ ಪ್ರಭೇದಗಳಿವೆ. ಇದು 20- 40 ಮೊಟ್ಟೆ ಇಡುತ್ತದೆ. 16-24 ಗಂಟೆಗಳಲ್ಲಿ ಮರಿ ಹೊರಬರುತ್ತವೆ. 2 ದಿನದಲ್ಲಿ ಮರಿಗಳು ಕೋಶಾವಸ್ಥೆ ತಲುಪಿ ಪ್ರೌಢ ಕಣಜಗಳಾಗುತ್ತವೆ. ಈ ಕೀಟಗಳು ಬೆಳೆ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
ಉತ್ಪಾದನೆ
ಈ ಕಣಜವನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ತಯಾರಿಸಲು ಕಾರ್ಸಿರಾ (ಅಕ್ಕಿ ಪತಂಗ) ಮೊಟ್ಟೆಯನ್ನು ಬಳಸಲಾಗುತ್ತದೆ. ಮೊಟ್ಟೆಗಳ ಕಾರ್ಡುಗಳ ರೀತಿಯಲ್ಲಿ ರೈತರಿಗೆ ವಿತರಿಸಲಾಗುತ್ತದೆ. ಆ ಕೀಟಗಳು ಮೊಟ್ಟೆ ಇಡಲು ಪರಾವಲಂಬಿ ಕೀಟ 'ಅಕ್ಕಿಚಿಟ್ಟೆ'ಯನ್ನು ಬಳಸುತ್ತವೆ.
ಮೊಟ್ಟೆಯನ್ನು ಅಂಟುದ್ರವ ಲೇಪಿತ ಕಾರ್ಡ್ ಮೇಲೆ ಲೇಪಿಸಿ 7 ದಿನ ಬಿಡಲಾಗುತ್ತದೆ. ಇದರಿಂದ ಹೊರಬಂದ ಟ್ರೈಕೋಗ್ರಾಮ (ಕೀಟ)ವೇ ಪರತಂತ್ರ ಜೀವಿ. ಇದು 'ಉಪಕಾರಿ ಮಿತ್ರ' ಕೀಟವಾಗಿದೆ.
ಉಪಯೋಗವೇನು?
- ಹಾನಿಕಾರಕ ಕೀಟಗಳ ಹತೋಟಿ ಶೇ.99ರಷ್ಟು.
- ಶೇ.50 ಖರ್ಚು ಕಡಿಮೆ.
- ಅಳವಡಿಕೆ ವಿಧಾನ ಸುಲಭ.
- ಪರಿಸರ ಮಾಲಿನ್ಯ ನಿಯಂತ್ರಣ.
ಹೆಚ್ಚಿನ ಮಾಹಿತಿಗೆ ಮೊ. 9886493153 ಸಂಪರ್ಕಿಸಿ.
- ಶಾಂತ ತಮ್ಮಯ್ಯ