ಜೇನು ಜೋಡಿ

ಜೇನು ಜೋಡಿ
Updated on: 

ನಲ್ವತ್ತು ವರ್ಷಗಳಿಂದ ಜೇನು ದುಂಬಿಗಳನ್ನೇ ನಂಬಿ ಬದುಕುತ್ತಿದ್ದಾರೆ 46 ವರ್ಷದ ರಾಮಾ ಹೊನ್ನಪ್ಪ ಮರಾಠಿ. ಇವರಿಗೆ ಜೇನುಗೂಡುಗಳ ನಿವಾಸ ಪತ್ತೆಹಚ್ಚಿ, ಕೊಯ್ಯುವಿಕೆಗೆ ಸಹಕರಿಸುತ್ತಿದ್ದಾರೆ ಆರ್.ಜಿ. ಭಟ್ಟ ಬೆಳಸೂರು.
ಯಲ್ಲಾಪುರ ನಿವಾಸಿಗಳಾದ ಇವರು ಕಾಡಿನಲ್ಲಿ ಅಲೆದಾಡಿ, ಮೊಬೈಲ್ ಟವರ್, ಸೇತುವೆ, ಕಟ್ಟಡ, ಮರಗಳ ಮೇಲೆ ಜೋತಾಡಿ ಜೇನುಗೂಡಿನಿಂದ ಮಕರಂದ ಬಿಡಿಸುತ್ತಾರೆ. ಸಾಂಪ್ರದಾಯಿಕ ವಿಧಾನದಿಂದಲೇ ಅಹಿಂಸಾ ಮಾರ್ಗದ ಮೂಲಕ ಇವರು ಜೇನು ತೆಗೆಯುತ್ತಾರೆ. ಜೇನು ದುಂಬಿಗಳಿಗೆ ತೊಂದರೆಯಾಗದಂತೆ ಸೂಕ್ಷ್ಮವಾಗಿ ಮಕರಂದ ಹೀರುತ್ತಾರೆ. ಮಕರಂದ ಹಿರಿದ ನಂತರವೂ ಜೇನು ದುಂಬಿಗಳು ಅಲ್ಲಿಯೇ ಮರಳುವಂತೆ ಎಚ್ಚರ ವಹಿಸುತ್ತಾರೆ. ಕರ್ನಾಟಕ ಮಾತ್ರವಲ್ಲದೆ ಸುತ್ತಲಿನ ರಾಜ್ಯಗಳಿಂದಲೂ ಜೇನು ಕೊಯ್ಯುವಂತೆ ಇವರಿಗೆ ಕರೆಯೋಲೆ ಬರುತ್ತದೆ.

ಅತಿಯಾಸೆ ಒಳಿತಲ್ಲ
ತುಡವಿ ಜೇನು ಮಧ್ಯಾಹ್ನ ಹಾಗೂ ಹೆಜ್ಜೇನು ಸಂಜೆ ತಮ್ಮ ಮರಿಗಳಿಗೆ ಹಾರಾಡಲು ತರಬೇತಿ ನೀಡುತ್ತವೆ. ಇದನ್ನು 'ಜಾಗೆ ಏಳುವುದು' ಎನ್ನುವರು. ಜಾಗೆ ಎದ್ದಾಗ ಸುತ್ತಲೂ ಸೂಕ್ಷ್ಮವಾಗಿ ಗಮನಿಸಿದರೆ ಜೇನುಗೂಡಿನ ನಿವಾಸ ಪತ್ತೆ ಹಚ್ಚಬಹುದು ಎಂಬ ಮಾಹಿತಿ ತೆರೆದಿಟ್ಟರು ಆರ್.ಜಿ. ಭಟ್ಟ. ಹೆಜ್ಜೇನು ಕುಟುಂಬದಿಂದ ವರ್ಷಕ್ಕೆ 4 ಬಾರಿ ಮಕರಂದ ಪಡೆಯಬಹುದು. ಮಾವಿನಕಾಯಿ ಬೇಕಾದರೆ ಮರದ ಬುಡವನ್ನೇ ಕತ್ತರಿಸಬಾರದು. ಕ್ರಮಬದ್ಧವಾಗಿ ಫಲ ಕಿತ್ತು ಮುಂದಿನ ಬಾರಿ ಮತ್ತೆ ಫಸಲು ಬರುವಂತೆ ನೋಡಿಕೊಳ್ಳಬೇಕು. ಜೇನು ಕೃಷಿ ಕೂಡ ಹಾಗೆ. ಅತಿಯಾಸೆಗೆ ಬಲಿಯಾಗಿ ಸಂಪೂರ್ಣ ಜೇನುತುಪ್ಪ ತೆಗೆಯಬಾರದು. ಅಲ್ಲಿನ ದುಂಬಿಗಳಿಗೂ ಮಕರಂದ ಉಳಿಸಿದರೆ ಮುಂದಿನ ಬಾರಿ ಮತ್ತಷ್ಟು ಫಲ ಲಭಿಸುತ್ತದೆ ಎಂಬ ಅನುಭವ ಹಂಚಿಕೊಂಡರು ರಾಮಾ ಮರಾಠೆ.

ವಿಭಿನ್ನ ಪದ್ಥತಿ
ಇವರ ಹೆಜ್ಜೇನು ಬೇಟೆ ಗಣಪತಿಯ ಸ್ಮರಣೆಯಿಂದ ಆರಂಭವಾಗಿ ಮಕರಂದ ಲಭಿಸಿದ ನಂತರ ಮರಿದುಂಬಿಗಳಿಗೆ ತುಪ್ಪ ಉಣಿಸುವ ಮೂಲಕ ಅಂತ್ಯವಾಗುತ್ತದೆ. ತುಡವಿ, ಕೋಲುಜೇನುಗಳ ಬೇಟೆಗೂ ಕೆಲವು ವಿಭಿನ್ನ ಸಂಪ್ರದಾಯಗಳಿವೆ. ಮಿಸ್ರಿ ಜೇನು ನಾಗರಪಂಚಮಿಯ ಸಮಯದಲ್ಲಿ ಮಾತ್ರ ತುಪ್ಪ ನೀಡುವುದರಿಂದ ಅದಕ್ಕೆ ಅಷ್ಟೇನೂ ಶಾಸ್ತ್ರ ಸಂಪ್ರದಾಯಗಳಿಲ್ಲ. ಏಳು ವರ್ಷಕ್ಕೊಮ್ಮೆ ಹೂ ಬಿಡುವ ಗೂಗರ್ ಸಸ್ಯ ಪುಷ್ಪಕ್ಕೆ ಜನ್ಮ ಕೊಟ್ಟಾಗ ಜೇನುಗಳಿಗೆ ಜಾತ್ರೆಯ ಸಂಭ್ರಮ. ಇದಲ್ಲದೆ ಮತ್ತಿ, ನಂದಿ, ಕಣಗಲ, ನೇರಳೆ ಹೂಗಳಿಂದಲೂ ದುಂಬಿಗಳು ಮಕರಂದ ತಯಾರಿಸುತ್ತವೆ. ವಿಸ್ಮಯವೆಂದರೆ ಅಮಲು ತರಿಸುವ ತಾರಿ ಹೂ ಹಾಗೂ ವಿಷಕಾರಿ ಕಾಸರಕ ಹೂಗಳಿಂದ ತಯಾರಾಗುವ ಮಕರಂದ ವಿಷಕಾರಿಯಾಗಿರುವುದಿಲ್ಲ. ಜೇನುಗೂಡು ನಿರ್ಮಿಸಿ 15 ದಿನಗಳ ಒಳಗೆ ತುಪ್ಪ ತೆಗೆದರೆ ಆ ಕುಟುಂಬದ ಸಂತತಿಯೇ ನಾಶವಾಗುತ್ತೆ. ಕನಿಷ್ಠ ಒಂದು ತಿಂಗಳ ನಂತರ ತುಪ್ಪ ತೆಗೆಯುವುದು ಉತ್ತಮ ಎನ್ನುತ್ತಾರೆ ಇವರು.

40 ಕೆಜಿ ತುಪ್ಪ
ಹೆಜ್ಜೇನಿನ ಆಯುಸ್ಸು ಒಂದು ವರ್ಷ. ಬೆಡಸಲೆ ಹೂಗಳಿಂದ ತಯಾರಾದ ತುಪ್ಪ ಸದಾ ತಂಪಾಗಿರುತ್ತದೆ. ಮೊದಲೆಲ್ಲ ಒಂದು ಹೆಜ್ಜೇನು ಕುಟುಂಬದಿಂದ 70 ಕೆಜಿವರೆಗೆ ತುಪ್ಪ ಲಭಿಸುತ್ತಿತ್ತು. ಈಗ ಸುಮಾರು 40 ಕೆಜಿವರೆಗೆ ಮಾತ್ರ ಲಭಿಸುತ್ತದೆ ಎಂದರು. ಶುದ್ಧ ಜೇನು ತುಪ್ಪ ತಿನ್ನುವಾಗ ನಗಬಾರದು, ಮಾತು ಮಿತಿಯಲ್ಲಿರಬೇಕು ಎಂಬ ವೈಜ್ಞಾನಿಕ ವಿಷಯ ಪ್ರಸ್ತಾಪಿಸುತ್ತಾರೆ. ಮನಸ್ಸಿಗೆ ಬೇಜಾರಾದಾಗ ಮನೆಯಂಗಳದಲ್ಲಿರುವ ತುಡವಿ ಗೂಡಿನ ಮುಂದೆ ವಿಹರಿಸಿದರೆ ಮನಸ್ಸಿಗೆ ಆಹ್ಲಾದವಾಗುತ್ತದೆ ಎನ್ನುತ್ತಾರೆ. ಇವಿಷ್ಟೇ ಅಲ್ಲದೆ ಲಭಿಸಿದ ಮಕರಂದದ ಕಾಲು ಭಾಗವನ್ನು ಅನಾರೋಗ್ಯಪೀಡಿತರಿಗೆ ದಾನ ನೀಡುತ್ತಾರೆ. <

- ಅಚ್ಯುತಕುಮಾರ ಯಲ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com