

ಉತ್ತರ ಭಾರತೀಯರ ಪ್ರಮುಖ ಆಹಾರವಾದ ಗೋದಿಯನ್ನು ರಾಜ್ಯದ ಹಲವೆಡೆ ಬೆಳೆಯಲಾಗುತ್ತದೆ. ಉತ್ತರ ಕರ್ನಾಟಕ, ಹೈ.ಕ. ಭಾಗದಲ್ಲಿ ಹೆಚ್ಚಾಗಿ ಇದನ್ನು ಹಿಂಗಾರು ಹಂಗಾಮಲ್ಲಿ, ಕೆಲವೆಡೆ ನೀರಾವರಿಯಾಶ್ರಿತವಾಗಿ ಬೆಳೆಯುತ್ತಾರೆ.
ಬೆಳೆಯುವ ವಿಧಾನ
ಜಮೀನನ್ನು ಚೆನ್ನಾಗಿ ಹದಗೊಳಿಸಿ ಕೂರಿಗೆ (ಬೀಜ ಬಿತ್ತುವ ಸಾಧನ)ಯಿಂದ ಬೀಜ ಬಿತ್ತುತ್ತಾರೆ. ಒಣ ಬೇಸಾಯಕ್ಕೆ ಎಕರೆಗೆ ಏನಿಲ್ಲವೆಂದರೂ 12ರಿಂದ 14 ಕೆ.ಜಿ. ಬೀಜ, ನೀರಾವರಿಯಾಶ್ರಿತವಾಗಿ ಬೆಳೆಯುವುದಾದರೆ 24ರಿಂದ 28 ಕೆ.ಜಿ. ಬೀಜ ಬೇಕಾಗುತ್ತದೆ. ಗೋದಿಯ ಜತೆ ಹವೀಜ, ಸಾಸಿವೆ, ಜೋಳವನ್ನು ಅಲ್ಪ ಪ್ರಮಾಣದಲ್ಲಿ ಬೆರೆಸಿ ಬಿತ್ತುತ್ತಾರೆ. ಇದರಿಂದಲೂ ಸಾಕಷ್ಟು ಪ್ರಯೋಜನಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಜೋಳ ಬಿತ್ತುವುದರಿಂದ ದನ- ಕರುಗಳಿಗೆ ಮೇವು ಲಭಿಸುತ್ತದೆ. ಸಾಸಿವೆಯಿಂದ ಗೋದಿಯ ಬೇರು ಕೊಳೆ ರೋಗ ನಿಯಂತ್ರಿಸುತ್ತದೆ. ಹವೀಜದಿಂದ ಪರಾಗಸ್ಪರ್ಶ ಕ್ರಿಯೆ ಹೆಚ್ಚಿ ಇಳುವರಿ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ. ಇನ್ನು ಜಮೀನಿನ ಗಡಿ ಭಾಗದಲ್ಲಿ ಅಗಸೆ ಬಿತ್ತುತ್ತಾರೆ. ಇದು ಗೋದಿಗೆ ಕೀಟ ಬಾಧೆ ಬಾರದಂತೆ ಸೈನಿಕನಂತೆ ಕೆಲಸ ಮಾಡುತ್ತದೆ. ಬೀಜ ಬಿತ್ತಿದ 100ರಿಂದ 110 ದಿನದೊಳಗೆ ಫಸಲು ಕೈಗೆ ಬರುತ್ತದೆ. ಹೆಚ್ಚು ನಿರ್ವಹಣೆ ಬಯಸುವುದಿಲ್ಲ. ಚೆನ್ನಾಗಿ ನಿರ್ವಹಣೆ ಮಾಡಿದರೆ ಒಣಬೇಸಾಯದಲ್ಲಿ ಎಕರೆಗೆ 5 ಕ್ವಿಂಟಲ್, ನೀರಾವರಿಯಾಶ್ರಿತವಾಗಿ 15 ಕ್ವಿಂಟಲ್ವರೆಗೆ ಇಳುವರಿ ಪಡೆಯಬಹುದು.
ಮಣ್ಣು
ಕಪ್ಪು, ಮರಳು ಮಿಶ್ರಿತ ಕಪ್ಪು ಮಣ್ಣು, ಕೆಂಪು ಮಣ್ಣಲ್ಲಿ ಚೆನ್ನಾಗಿ ಬೆಳೆಯುತ್ತದೆ. ಚಳಿಗಾಲ ಗೋದಿ ಬೆಳೆಗೆ ಪೂರಕ. ಹೀಗಾಗಿಯೇ ಹಿಂಗಾರು ಹಂಗಾಮಿನಲ್ಲೇ ಜಾಸ್ತಿ ಬೆಳೆಯುತ್ತಾರೆ. ಅಂದರೆ ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ನಲ್ಲಿ ಬಿತ್ತನೆ ಮಾಡಬಹುದು.
ತಳಿಗಳು
ಕಿರಣ, ಧಾರವಾಡ- 2006, 31, ಬಿಜಗಾ ಹಳದಿ, ಡಿಡಬ್ಲ್ಯೂಆರ್- 185, 195, 39, ಎಚ್ಪಿ- 2189, ಬಿಳಿ, ಕೆಂಪು ಗೋದಿ, ಅಮೃತ, ಡಿಜೆ- 326 ಪ್ರಮುಖವಾಗಿವೆ.
ರೋಗಗಳು
ಬುಡಕೊಳೆ ರೋಗ, ಎಲೆಚುಕ್ಕೆ ರೋಗ, ಭಂಡಾರ ರೋಗ ಅಲ್ಲದೆ, ಕಾಂಡ ಕೊರೆಯುವ ಹುಳು ಬಾಧೆ ಕಾಡಬಹುದು.
ಹೆಚ್ಚಿನ ಮಾಹಿತಿಗೆ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದ ಸುರೇಶಗೌಡ (ಮೊ. 9480127759) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ