

ಬಾಳೆ ಹಣ್ಣು ಎಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರಲ್ಲ? ಮನೆಯಲ್ಲಿ ಹಬ್ಬ, ಹರಿದಿನ, ಭೂರಿ ಭೋಜನಕ್ಕೆಲ್ಲ ಪ್ರಧಾನ ಫಲ. ಹೀಗಾಗಿ ಬಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಇದಕ್ಕೆ ಡಿಮ್ಯಾಂಡ್ ಹೆಚ್ಚುತ್ತಿದ್ದರೂ ಬಾಳೆ ಬೆಳೆಯುವ ಕೃಷಿಕ ಮಾತ್ರ ಬೇಡಿಕೆ ಈಡೇರಿಸಲು ಹೆಣಗಾಡುತ್ತಿರುವುದು ಶೋಚನೀಯ.
ಬಾಳೆ ಕೃಷಿಕರು ಬೆಳೆ ಬೆಳೆದು ಕೈಸುಟ್ಟುಕೊಳ್ಳದಿರಲು ಸಹಾಯ ಮಾಡುವ ಸಂಸ್ಥೆಯೊಂದು ಬೆಳೆಗೆ ಬೇಕಾದ ಅಗತ್ಯ ಪೋಷಕಾಂಶ ಉತ್ಪಾದಿಸಿಕೊಡಲು ಎರಡು ವರ್ಷಗಳಿಂದ ದುಡಿಯುತ್ತಿರುವುದು ರೈತರ ಪಾಲಿಗೆ ಆಶಾಕಿರಣವಾಗಿದೆ.
ಅಧಿಕ ಇಳುವರಿ ಪಡೆಯುವಲ್ಲಿ ಮುಖ್ಯ ಪೋಷಕಾಂಶಗಳ ಪಾತ್ರ ಮಹತ್ವದ್ದು. ಇದು ಎಲ್ಲಾ ತೋಟಗಾರಿಕೆ ಬೆಳೆಗಳಿಗೂ ಅನ್ವಯ. ಮಣ್ಣಿನ ಮೂಲಕ ಪೋಷಕಾಂಶಗಳನ್ನು ಬೆಳೆಗಳಿಗೆ ದೊರಕಿಸಿಕೊಡುವುದು ಈವರೆಗೂ ಕೃಷಿ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿ. ಆದರೆ, ಸುತ್ತೂರು ಕ್ಷೇತ್ರದ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು 'ಬಾಳೆ ಸ್ಪೆಷಲ್' ಎಂಬ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇದರಲ್ಲಿ ಪೋಷಕಾಂಶಗಳ್ನು ಬಾಳೆ ಗಿಡದ ಎಲೆಗಳ ಮೂಲಕ ನೀಡಲಾಗುತ್ತದೆ.
ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು 15 ವರ್ಷಗಳ ಸತತ ಸಂಶೋಧನೆಯಿಂದ ಕಂಡುಹಿಡಿದ ಈ ತಂತ್ರಜ್ಞಾನವನ್ನು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು 2 ಎರಡು ವರ್ಷ ಹಿಂದೆ ಖರೀದಿಸಿತು. ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಇಲ್ಲಿಯವರೆಗೆ ಸುಮಾರು 3.7 ಟನ್ನಷ್ಟು ಪೋಷಕಾಂಶ ಉತ್ಪಾದಿಸಿದ್ದು, 480ಕ್ಕೂ ಅಧಿಕ ರೈತರು 3000 ಕೆಜಿಯಷ್ಟು ಪೋಷಕಾಂಶ ಕೊಂಡಿದ್ದಾರೆ. ಅವರೆಲ್ಲರೂ ಬಾಳೆ ಬೆಳೆಯಲ್ಲಿ ಅಧಿಕ ಇಳುವರಿ ಪಡೆದಿದ್ದಾರೆ.
ಪೋಷಕಾಂಶ ಪೂರೈಕೆ ಹೇಗೆ?
ಒಂದು ಎಕರೆ ಬಾಳೆಗೆ ಬೇಕಾಗುವ ಒಟ್ಟು 'ಬಾಳೆ ಸ್ಪೆಷಲ್' ಸುಮಾರು 10 ಕೆಜಿ. ಅಂದರೆ ಪ್ರತಿ ಸಿಂಪರಣೆಗೆ ಪ್ರತಿ ಎಕರೆಗೆ 2 ಕೆಜಿ ಬೇಕು. ಐದು ಬಾರಿ ವಿವಿಧ ಹಂತಗಳಲ್ಲಿ ಸಿಂಪರಣೆ ಮಾಡಬೇಕು. 75 ಗ್ರಾಂ ಬಾಳೆ ಸ್ಪೆಷಲ್ ಪೋಷಕಾಂಶದ ಮಿಶ್ರಣವನ್ನು 15 ಲೀ. ನೀರಿನಲ್ಲಿ ಕರಗಿಸಿ ಅದಕ್ಕೆ 1 ನಿಂಬೆ ಹಣ್ಣಿನ ರಸ ಹಾಗೂ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುವ 1 ಮೌಲ್ಯದ 1 ಶಾಂಪೂ ಸ್ಯಾಚೆಯ ಸಾಬೂನನ್ನು ನೀರಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡುವುದು.
ಈ ರೀತಿ ತಯಾರಿಸಿದ ದ್ರಾವಣವನ್ನು ಬಾಳೆ ಸಸ್ಯದ ಎಲೆಗಳ ಮೇಲೆ 5 ಹಂತಗಳಲ್ಲಿ ಸಿಂಪರಣೆ ಮಾಡುವುದು. ಮೊದಲ ಸಿಂಪರಣೆ ನಾಟಿ ಮಾಡಿ 5 ತಿಂಗಳ ನಂತರ, ಉಳಿದ ಸಿಂಪರಣೆ ನಾಟಿ ಮಾಡಿದ 6- 7 ಹಾಗೂ 8 ತಿಂಗಳ ನಂತರ ಕೊಡುವುದು. ನಂತರ ಸಿಂಪರಣೆಯನ್ನು ಹೂವು ಹಾಗೂ ಗೊನೆಯ ಮೇಲೆ ಮತ್ತೊಮ್ಮೆ ಕೊಡುವುದು. ಈ ಪೋಷಕಾಂಶ ಮಿಶ್ರಣದ ದ್ರಾವಣವನ್ನು ಯಾವುದೇ ಕೀಟನಾಶಕ ಮತ್ತು ಶೀಲಿಂಧ್ರನಾಶಕಗಳೊಡನೆ ಬೆರೆಸಬಹುದು. ಸಿಂಪರಣೆಯನ್ನು ಬೆಳಗ್ಗೆ 6 ರಿಂದ 11 ಗಂಟೆಯೊಳಗೆ ಅಥವಾ ಸಾಯಂಕಾಲ 4 ರಿಂದ ಸಂಜೆ 6 ರೊಳಗೆ ಕೊಟ್ಟರೆ ಹೆಚ್ಚು ಪರಿಣಾಮಕಾರಿ.
ನಿಮಗೂ ಬಾಳೆ ಸ್ಪೆಷಲ್ ಪೋಷಕಾಂಶ ಬೇಕೆ? ಹಾಗಿದ್ದರೆ ಸಂಪರ್ಕಿಸಿ: ಡಾ. ಅರುಣ್ ಬಳಮಟ್ಟಿ, ಕಾರ್ಯಕ್ರಮ ಸಂಯೋಜಕ- ಮೊ. 9686666240, ಜೆ.ಜಿ. ರಾಜಣ್ಣ, ಕಾರ್ಯಕ್ರಮ ಸಹಾಯಕ- ಮೊ. 9448978836.
ಬಾಳೆ ಸ್ಪೆಷಲ್ ಉಪಯೋಗದಿಂದ ಶೇ. 30 ರಷ್ಟು ಹೆಚ್ಚಿನ ಇಳುವರಿಯನ್ನು ರೊಬಸ್ಟ (ಪ್ರತಿ ಗೊನೆಗೆ 30- 40 ಕಿ.ಗ್ರಾಂ) ಹಾಗೂ ಏಲಕ್ಕಿ (ಪ್ರತಿ ಗೊನೆಗೆ 15-20 ಕಿ.ಗ್ರಾಂ) ತಳಿಗಳಲ್ಲಿ ಪಡೆಯಬಹುದು. ಇದನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯೇ ದೃಢಪಡಿಸಿದೆ.
- ಜೆ.ಜಿ. ರಾಜಣ್ಣ, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ
-ಜೆ. ಮಹದೇವ
ಚಿತ್ರ: ತುಮ್ಮನೇರಳೆ ಆರಾಧ್ಯ