

ಇದೊಂದು ಪರಿಸರ ಸ್ನೇಹಿ ಗಿಡ. ಉಪಯೋಗವೂ ಹಲವಾರು. ನಾನಾ ಹೆಸರಿರುವ ಇದನ್ನು ಕತ್ತಾಳೆ, ದೇಬಾಳಿ, ದೇವಬಾಳೆ ಎಂದು ಕರೆಯಲಾಗತ್ತದೆ.
ಈ ಕತ್ತಾಳೆ ಉತ್ತರ ಕರ್ನಾಟಕದ ರೈತರಿಗೆ ಅಚ್ಚುಮೆಚ್ಚು. ಇದನ್ನು 'ಹಸಿರು ಬೇಲಿ'ಯನ್ನಾಗಿ ಉಪಯೋಗಿಸುತ್ತಾರೆ. ಹೌದು. ಮುಳ್ಳು ತಂತಿ ಬೇಲಿ, ವಿದ್ಯುತ್ ಬೇಲಿ (ಐಬೆಕ್ಸ್) ಮುಂತಾದವುಗಳನ್ನು ಬಳಸಿದರೆ ಖರ್ಚೂ ಹೆಚ್ಚು, ಪರಿಸರಕ್ಕೂ ಅಷ್ಟೇನು ಪ್ರಯೋಜನವಿಲ್ಲ. ಆದರೆ ಕತ್ತಾಳೆ ಕಥೆಯೇ ಬೇರೆ. ಈ ಗಿಡವನ್ನು ತಮ್ಮ ಗಡಿಭಾಗದಲ್ಲಿ ಹಾಕಿ ಬೆಳೆಸುತ್ತಾರೆ (ಕೆಲವು ಕಡೆ ಅದೇ ಹುಟ್ಟಿಕೊಂಡಿರುತ್ತದೆ). ಇದರಿಂದಾಗಿ ಜಾನುವಾರುಗಳ ಕಾಟ ಕಡಿಮೆ. ಎಲೆಗಳು ಮುಳ್ಳುಗಳಿಂದ ಕೂಡಿರುವುದರಿಂದ ಮೈಗೆ ಕೊರೆದು ಗಾಯಗಳಾಗುತ್ತವೆ. ಹೀಗಾಗಿ ಇವುಗಳ ಹತ್ತಿರಕ್ಕೂ ಜಾನುವಾರುಗಳು ಸುಳಿಯವು.
ಉಪಯೋಗವೇನು?
ಹೊಲದ ಮಣ್ಣಿನ ರಕ್ಷಣೆಗೆ, ಬೆಳೆ ರಕ್ಷಣೆಗೆ ರೈತರು ತಮ್ಮ ಹೊಲಗಳ ಬದುಗಳಲ್ಲಿ (ದಂಡೆವರೆಗೆ) ಬೆಳೆಸುತ್ತಾರೆ. ಬದು ಬಿಟ್ಟು ಬೇರೆ ಯಾವ ಜಾಗದಲ್ಲೂ ಇದನ್ನು ಬೆಳೆಸುವುದಿಲ್ಲ. ಮಳೆಗಾಲದಲ್ಲಿ ಇವು ಹೊಲದ ಬದುವಿನ ಮಣ್ಣು ಸಡಿಲಗೊಳ್ಳದಂತೆ ಹಾಗೂ ಕೊಚ್ಚಿ ಹೋಗದಂತೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ.
ಇದೆಲ್ಲಕ್ಕಿಂತ ಹೆಚ್ಚಾಗಿ ಈ ಗಿಡದ ಉಪಯೋಗ ಇರುವುದು ನಾರಿಗಾಗಿ. ಎಲೆಗಳನ್ನು ಕೊಯ್ದು ಹಳ್ಳದ ಉಸುಕಿನಲ್ಲಿ ಮುಚ್ಚಿ ಮಾಗಿಸಿದ ನಂತರ ನೀರಿನಲ್ಲಿ ತೊಳೆದು ಆ ನಾರಿನಿಂದ ಹಗ್ಗಗಳನ್ನು ಹೊಸೆಯುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಉದ್ಯೋಗ ಮಾಡುವ ಭೂ ರಹಿತ ಕೃಷಿಕರು ಹೊಲದ ಮಾಲೀಕರಿಂದ ಕತ್ತಾಳೆಯ ಗುತ್ತಿಗೆ ಹಿಡಿಯುತ್ತಾರೆ.
ಇದರ ಒಣಗಿದ ಎಲೆಗಳನ್ನು ಉರುವಲಿಗೂ ಉಪಯೋಗಿಸಬಹುದು. ಈ ಎಲೆಗಳಲ್ಲಿ ಔಷಧೀಯ ಗುಣಗಳೂ ಇವೆ. ಎಲೆಯ ಹೊರಗಿನ ಪದರನ್ನು ಕೆರೆದಾಗ 'ಹೆಕೊಜೆನಿನ್' ಎಂಬ ದ್ರವರೂಪದ ಅಂಟು ದೊರಕುತ್ತದೆ.
ಹೇಗಿರುತ್ತೆ?
ಸುಮಾರು 3ರಿಂದ 4 ಅಡಿ ಎತ್ತರದ ವರೆಗೆ ಬೆಳೆದಿರುವ ಇದರ ಎಲೆ ಮುಳ್ಳಿನಿಂದ ಕೂಡಿರುತ್ತದೆ. ಹೀಗಾಗಿ ಇದನ್ನು ಕೈಯಿಂದ ಹಿಡಿಯುವಾಗ ಅಥವಾ ಮುಟ್ಟುವಾಗ ಸ್ವಲ್ಪ ಎಚ್ಚರವಹಿಸಬೇಕು. ಎಲೆಯನ್ನು ತುಂಡರಿಸಿದರೆ ಒಳಗಡೆ ಲೋಳೆ ಆಕಾರದ ದ್ರವ ಇರುತ್ತದೆ. ಇದು ಕೊನೆ ಬಿಟ್ಟಾಗ ತುದಿಗೆ ಇಳಿಬಿದ್ದ ಮೃದವಾದ ಹೂವನ್ನು ನೋಡಲು ಸುಂದರವಾಗಿರುತ್ತದೆ.
- ಎ.ಎಸ್. ಹೂಲಗೇರಿ, ಹುನಗುಂದ