

ತರಕಾರಿ ಬೆಳೆಗಳಿಗೆ ಇತ್ತೀಚೆಗೆ ಉತ್ತಮ ಮಾರುಕಟ್ಟೆ ಲಭಿಸುತ್ತಿದೆ. ಹಾಗಾಗಿ ಬಹಳಷ್ಟು ರೈತರು ತರಕಾರಿ ಕೃಷಿಯತ್ತ ವಾಲುತ್ತಿರುವುದು ಖುಷಿಯ ಸಂಗತಿ. ಅದೇ ರೀತಿ ರಾಜ್ಯದ ರೈತರು ಬೆಳೆಯುವ ಪ್ರಮುಖ ತರಕಾರಿ ಬೆಳೆಗಳಲ್ಲಿ ಹೂಕೋಸು ಒಂದು. ಹಲವು ಔಷಧಿ ಗುಣಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಹೂಕೋಸಿಗೆ ಬೇಡಿಕೆ ಹೆಚ್ಚುತ್ತಿದೆ.
ಬೆಳೆಯುವ ವಿಧಾನ
ಮೊದಲು ಮಡಿಯಲ್ಲಿ ಬೀಜ ಬಿತ್ತಿ ಸಸ್ಯಾಭಿವೃದ್ಧಿ ಮಾಡಬೇಕು. ಬಿತ್ತಿದ 3- 4 ವಾರಗಳಲ್ಲಿ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ನಂತರ ಜಮೀನನ್ನು ಹೆಂಟೆಗಳಿಲ್ಲದಂತೆ ಚೆನ್ನಾಗಿ ಹದ ಮಾಡಿ ಸಮತಟ್ಟಾಗಿಸಬೇಕು. ಎಕರೆಗೆ 10 ಟನ್ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬೇರೆಬೇರೆ ತಳಿಗಳನ್ನು ನಿರ್ದಿಷ್ಟ ಅಂತರದಲ್ಲಿ ಸಸಿ ನಾಟಿ ಮಾಡಬೇಕು. ಹಾಗಾಗಿ ಸಸಿ ನಾಟಿ ಮಾಡುವುದಕ್ಕಿಂತ ಪೂರ್ವದಲ್ಲಿ ತಜ್ಞರ ಸಲಹೆ ಪಡೆಯುವುದು ಒಳಿತು. ನಾಟಿ ಮಾಡಿದ ಕೂಡಲೇ ತೆಳ್ಳಗೆ ನೀರು ಹಾಯಿಸಬೇಕು. ಮಣ್ಣು, ಹವಾಮಾನಕ್ಕನುಗುಣವಾಗಿ ನೀರು ಹಾಯಿಸಬೇಕು. ಕಳೆ ಬಾರದಂತೆ ನಿಗಾ ವಹಿಸಬೇಕು.
ಮಣ್ಣು
ನೀರು ಬಸಿದು ಹೋಗುವಂಥ ಸಾವಯವ ಅಂಶವಿರುವ ಮಣ್ಣು ಇದ್ದರೆ ಉತ್ತಮ. ಮರಳು ಮಿಶ್ರಿತ ಗೋಡು, ಜೇಡಿ ಮಣ್ಣಿನಲ್ಲಿ ಬೆಳೆಯಬಲ್ಲದು. 6.0ರಿಂದ 7.0 ರಸಸಾರವಿರಬೇಕು.
ತಳಿಗಳು
ಇದರಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಎಂಬ ಮೂರು ವಿಧಗಳಿವೆ. ಆ ಪೈಕಿ ಮಹಿಕೋ ರಾಣಿ, ಅರ್ಲಿ ಸ್ನೋಬಾಲ್, ಮಹಾರಜ್, ಸ್ನೋಬಾಲ್, ಲೇಟ್ ಸ್ನೋಬಾಲ್ ಪ್ರಮುಖವಾಗಿವೆ.
ನ್ಯೂನತೆಗಳು
ಹೂಕೋಸು ನಿಯಂತ್ರಣದಲ್ಲಿ ಏರುಪೇರಾದರೆ ಹಲವು ರೋಗಗಳು ಕಾಡುವ ಸಾಧ್ಯತೆ ಅಧಿಕ. ಗಿಡ ಬಲಿಯುವುದಕ್ಕಿಂತ ಪೂರ್ವದಲ್ಲಿ ಹೂವು ಬಿಡುವುದು, ಗಡ್ಡೆಗಳ ಮೇಲೆ ಕಂದು ಬಣ್ಣದ ಕಲೆ ಕಾಣುವುದು ಮತ್ತು ಸಕಾಲದಲ್ಲಿ ನಾಟಿ ಮಾಡದಿದ್ದರೆ ಹಲವು ನ್ಯೂನತೆಗಳು ಕಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆಯವರನ್ನು ಸಂಪರ್ಕಿಸಬಹುದು.