

ಬರೀ ಕರೆಂಟನ್ನು ನೆಚ್ಚಿಕೊಂಡು ನೀರಾವರಿ ಆಧಾರಿತ ಕೃಷಿ ಮಾಡುವಂತಿಲ್ಲ. ಏಕೆಂದರೆ ಕರೆಂಟಿನ ಕಣ್ಣಾಮುಚ್ಚಾಲೆ. ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ರೈತರು ಕಂಗಾಲಾಗಿದ್ದಾರೆ. ಒಂದಷ್ಟು ರೈತರಂತೂ ಸಾಕಪ್ಪಾ ಸಾಕು ಕೃಷಿ ಸಹವಾಸ ಎಂದು ಬೇಸತ್ತಿದ್ದಾರೆ. ಅಷ್ಟರ ಮಟ್ಟಿಗೆ ವಿದ್ಯುತ್ ಸಮಸ್ಯೆ ರಾಜ್ಯದ ರೈತರನ್ನು ಕಾಡುತ್ತಿದೆ.
ಇಂಥದ್ದೇ ಸಮಸ್ಯೆ ಪಂಜಾಬ್ನ ರೈತರನ್ನು ಕಾಡುತ್ತಿತ್ತು. ಆದರೆ, ಅಲ್ಲಿನ ಸರ್ಕಾರ ಅದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಂಡಿದೆ. ಅದುವೇ ಸೌರಶಕ್ತಿ ಆಧಾರಿತ ಹನಿ ನೀರಾವರಿ ವ್ಯವಸ್ಥೆ. ಇದರಿಂದ ರೈತರ ಬಾಳು ಹಸನಾಗುವುದರ ಜತೆಗೆ ಕರೆಂಟ್ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಂಡುಕೊಂಡ ಸಂತೃಪ್ತಭಾವ ಅಲ್ಲಿನ ಸರ್ಕಾರದ್ದಾಗಿದೆ.
ಇಂಥದ್ದೊಂದು ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದು ಅಲ್ಲಿನ ಪಂಜಾಬ್ ಅಗ್ರಿಕಲ್ಚರ್ ಯುನಿವರ್ಸಿಟಿ(ಪಿಎಯು). ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದು ಪಂಜಾಬ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿ(ಪೇಡಾ). ಈಗಾಗಲೇ ಸಬ್ಸಿಡಿ ಮೂಲಕ ಏಪ್ರಿಲ್ನಲ್ಲಿ 100 ಸೌರಶಕ್ತಿ ಆಧಾರಿತ ಪಂಪ್ಸೆಟ್ಗಳನ್ನು ರೈತರಿಗೆ ವಿತರಿಸಲಾಗಿದೆ. ಮತ್ತೆ 500 ಪಂಪ್ಸೆಟ್ಗಳನ್ನು ಶೀಘ್ರದಲ್ಲಿಯೇ ನೀಡಲಾಗುತ್ತಿದೆ.
ಆರಂಭಿಕ ನಡೆ
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅಲ್ಲಿನ ಸರ್ಕಾರ 2010ರಲ್ಲೇ ಕೈಗೆತ್ತಿಕೊಂಡಿತ್ತು. ಅದೇಕೋ ಯಶ ಕಾಣಲಿಲ್ಲ. ಅದಕ್ಕೆ ಕಾರಣ ಸಾಕಷ್ಟು ಪ್ರಮಾಣದಲ್ಲಿ ಪೂರ್ವ ತಯಾರಿ ಇಲ್ಲದ್ದು. ಯೋಜನೆ ವಿಫಲವಾಯಿತೆಂದು ತಲೆಕೆಡಿಸಿಕೊಳ್ಳಲಿಲ್ಲ. ಆದದ್ದಾಯಿತು, ಇನ್ನೊಂದು ಕೈ ನೋಡಿಯೇ ಬಿಡೋಣ ಎಂದು ನಿರಂತರ ಪ್ರಯತ್ನ ಮುಂದುವರಿಸಿದರು. ಕೊನೆಗೊಂದು ದಿನ ಅದರಲ್ಲಿ ಯಶಸ್ಸು ಸಾಧಿಸಿದರು.
ಐದು ಹೆಕ್ಟೇರ್ ಬಳಕೆ
2 ಎಚ್ಪಿ ಸೌರಶಕ್ತಿ ಆಧಾರಿತ ಪಂಪ್ಸೆಟ್ ಅಳವಡಿಸಿಕೊಂಡರೆ 5 ಹೆಕ್ಟೇರ್ ಜಮೀನಿಗೆ ಸರಾಗವಾಗಿ ನೀರುಣಿಸಬಹುದು. ಅಷ್ಟೇ ಅಲ್ಲ, ಯಾವುದೇ ನಮೂನೆಯ ತರಕಾರಿ, ಹೂವು ಸೇರಿದಂತೆ ಆಹಾರ ಧಾನ್ಯಗಳನ್ನು ಬೆಳೆಯಬಹುದು.
ರೈತಸ್ನೇಹಿ
ಡೀಸೆಲ್ ಪಂಪ್ಸೆಟ್ಗಳಿಗೆ ಕಡಿಮೆ ಬಂಡವಾಳ, ಹೆಚ್ಚು ನಿರ್ವಹಣಾ ವೆಚ್ಚ ತಗುಲುತ್ತದೆ. ಆದರೆ, ಸೌರಶಕ್ತಿಯಾಧಾರಿತ ಪಂಪ್ಸೆಟ್ಗಳಿಗೆ ಹೆಚ್ಚು ಬಂಡವಾಳ ಕಡಿಮೆ ನಿರ್ವಹಣಾ ವೆಚ್ಚ ಬಯಸುತ್ತದೆ. ಹಾಗಾಗಿ ಇದನ್ನು ರೈತಸ್ನೇಹಿ ಎನ್ನಬಹುದು. ಸೋಲಾರ್ ಪಂಪ್ಸೆಟ್ ವ್ಯವಸ್ಥೆಯನ್ನು ಒಮ್ಮೆ ಅಳವಡಿಸಿದರೆ ಕನಿಷ್ಠ 25ರಿಂದ 30 ವರ್ಷ ಬಾಳಿಕೆ ಬರುತ್ತದೆ.
ರಾಜ್ಯದಲ್ಲೂ ವಿದ್ಯುತ್ ಸಮಸ್ಯೆ ಮಿತಿಮೀರಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಂಜಾಬ್ನಲ್ಲಿ ಅಳವಡಿಸಿರುವ ಸೌರಶಕ್ತಿ ಆಧಾರಿತ ನೀರಾವರಿ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಂಡರೆ ರೈತರಿಗೆ ಸಾಕಷ್ಟು ಪ್ರಯೋಜನಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಡಿ ಇಡುವುದೇ?
ವರಿ ತಪ್ಪಿಸಿದ ಸೋಲಾರ್ ಪಂಪ್ಸೆಟ್ ಸಬ್ಸಿಡಿ ಸಿಗುತ್ತೆ ಸ್ವಾಮಿ!
2 ಎಚ್ಪಿ ಸೌರಶಕ್ತಿ ಆಧಾರಿತ ಪಂಪ್ಸೆಟ್ ಅಳವಡಿಸಲು ರು. 2.50 ಲಕ್ಷ ಖರ್ಚಾಗುತ್ತೆ. ಆದರೆ, ಇದಕ್ಕೆ ಸರ್ಕಾರ ಶೇ.70 ಸಬ್ಸಿಡಿ ನೀಡುತ್ತದೆ. ಅಂದರೆ ಪಂಪ್ಸೆಟ್ನ ಒಟ್ಟು ಮೊತ್ತದಲ್ಲಿ ರು. 1.75 ಲಕ್ಷವನ್ನು ಸರ್ಕಾರವೇ ಪಾವತಿಸುತ್ತದೆ. ಉಳಿದ ರು. 75 ಸಾವಿರವನ್ನು ರೈತರು ಕೊಡಬೇಕು. ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ಶೇ. 30ರಷ್ಟು ಭರಿಸಿದರೆ ರಾಜ್ಯ ಸರ್ಕಾರ ಶೇ.40ರಷ್ಟನ್ನು ನೀಡುತ್ತದೆ.
ಏನೇನ್ ಉಪಯೋಗ ಗೊತ್ತಾ?
- ಸೌರಶಕ್ತಿಯಾಧಾರಿತ ಪಂಪ್ಸೆಟ್ ಅಳವಡಿಸುವುದರಿಂದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ.
- ಹನಿ ನೀರಾವರಿ ಪದ್ಧತಿಯಿಂದ ಶೇ.60ರಷ್ಟು ನೀರಿನ ಉಳಿತಾಯ.
- ಮಣ್ಣಿನ ಸವಕಳಿ ತಡೆಗಟ್ಟುವುದು.
- ಹೆಚ್ಚಿನ ಕೂಲಿ ಕಾರ್ಮಿಕರ ಅಗತ್ಯವಿಲ್ಲ.
- ಮಹೇಶ್ ಅರಳಿ