

ಒಂದೊಮ್ಮೆ ಫೇಮಸ್ಸಾಗಿದ್ದ ಅಗರ್ವುಡ್ ಮರ ಇನ್ನೇನು ನಾಪತ್ತೆಯಾಯಿತು ಎಂದುಕೊಂಡಿದ್ದೆವು. ಆದರೆ, ಪಶ್ಚಿಮಘಟ್ಟದ ಪ್ರದೇಶದ ಕೃಷಿಕರು ವಾಣಿಜ್ಯ ಬೆಳೆಯಾಗಿ ಅಗರ್ವುಡ್ ಪರಿಚಯಿಸುತ್ತಿರುವುದು ಸಂತಸದ ಸಂಗತಿ...
ಅಗರ್ ಎಂಬ ಹೆಸರಿನ ಮರದ ಒಂದು ಹನಿ ತೈಲ, ರಾಶಿ ರಾಶಿ ಊದುಕಡ್ಡಿಗಳಲ್ಲಿ ಬೆರೆತು ನಮ್ಮೆಲ್ಲರ ಮನೆ ತಲುಪುವ ವಿಷಯ ಅನೇಕರಿಗೆ ಇನ್ನೂ ಅಪರಿಚಿತವೆ.
ನಾಟಿಯಿಂದ ಕಟಾವಿನವರೆಗೆ ವಿಶೇಷ ಆರೈಕೆ ಕೇಳದ, ಬೆಳೆಗಾರರಿಗೆ ಹೊರೆಯಲ್ಲದ, ಕಾರ್ಮಿಕರ ಅವಲಂಬನೆ ಇಲ್ಲದ ಬೆಳೆ ಅಗರ್ವುಡ್. ಹಿಂದೆ ಭಾರತದಲ್ಲಿ ಹಲವು ಅಗರ್ವುಡ್ ಸಂಸ್ಕರಣ ಘಟಕಗಳಿದ್ದವು. ಸಾವಿರಾರು ಉದ್ಯೋಗಿಗಳಿಗೆ ಆಸರೆಯಾಗಿದ್ದ ಈ ಉದ್ಯಮ ಮರಗಳ ನಶಿಸುವಿಕೆಯಿಂದ ನೇಪಥ್ಯಕ್ಕೆ ಸರಿಯಿತು. ಇದರಿಂದ ನಾವಿಂದು ವ್ಯತಿರಿಕ್ತ ಸುಗಂಧದ ಅಗರ್ ಬತ್ತಿ ಕಾಣುತ್ತಿರುವುದು. ಶ್ರೀಗಂಧ ಧಾರ್ಮಿಕ ಚಟುವಟಿಕೆಗಳಲ್ಲಿ, ಸುಗಂಧ ದ್ರವ್ಯ, ಸಾಬೂನು, ತೈಲ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಆದರೆ, ಇದು ಸಿಂಥೆಟಿಕ್ ರೂಪದಲ್ಲೂ ಲಭ್ಯ. ಅಗರ್ವುಡ್ಗೆ ಈ ರೀತಿಯ ಕೃತಕ ಮೂಲವಿಲ್ಲ.
ಶ್ರೀಗಂಧಕ್ಕಿಂತ ದುಬಾರಿ
ಶ್ರೀಗಂಧವಾದರೂ ನಾಟಿ ಮಾಡಿದ ನಂತರ ಕೊರಡಾಗಿ ಪರಿಮಳ ಬೀರಲು ಕನಿಷ್ಠ 20 ವರ್ಷ ಬೇಕು. ಆದರೆ, ಅಗರ್ ಸಸ್ಯಗಳು 8- 15 ವರ್ಷದಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಇನ್ನು ಬೆಲೆಯ ವಿಚಾರದಲ್ಲಿ ಶ್ರೀಗಂಧಕ್ಕಿಂತ 8 ಪಟ್ಟು ಹೆಚ್ಚಿನ ಬೆಲೆಯುಳ್ಳದ್ದು. ಶ್ರೀಗಂಧದ ಕಾಂಡದೊಳಗೆ ಕೊರಡು ರಚನೆಯಾದ ಎಳೆ ಪ್ರಾಯದ ಮರಗಳು ಕಳ್ಳತನವಾಗುವುದು ಹೆಚ್ಚು.
ಕೃತಕ ಶಿಲೀಂಧ್ರ
ಅಕ್ವೆಲೇರಿಯ ಕ್ರಾಸಿಯಾನ ಕಾಸಿಯಾನ ಕುಟುಂಬಕ್ಕೆ ಸೇರಿರುವ ಈ ಮರಗಳೆಲ್ಲವೂ ಸ್ವಾಭಾವಿಕವಾಗಿ ಸುಗಂಧ ಬೀರಲ್ಲ. 8- 10ರ ಪ್ರಾಯದ 25-30 ಇಂಚು ಸುತ್ತಳತೆಯ ಮರಗಳನ್ನು ಆಯ್ಕೆಮಾಡಿ ಕಾಂಡಗಳಿಗೆ ರಂಧ್ರ ಕೊರೆದು ಅಥವಾ ಚುಚ್ಚುಮದ್ದಿನ ಮೂಲಕ ಕೃತಕ ಶಿಲೀಂಧ್ರವನ್ನು ಕಾಂಡದೊಳಗೆ ತೂರಿಸಿ ರೆಸಿನ್ ಎಂಬ ಭಾಗ ಬೆಳೆಯಲು ಅನುವು ಮಾಡಿಕೊಡಬೇಕು. ಈ ರೆಸಿನ್ ಅಭಿವೃದ್ಧಿಯಾಗಲು 12- 15 ತಿಂಗಳ ಕಾಲಾವಕಾಶ ಬೇಕು. ನಂತರ ಮರದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುವಂತೆ ಕಂಡಾಗ ಮರಗಳನ್ನು ಕಟಾವು ಮಾಡಿದಾಗ ಅದರಿಂದ ದೊರೆಯುವ ಕಪ್ಪು ಬಣ್ಣದ ಭಾಗವೇ ಅಗರ್. ಚಕ್ಕೆ ರೂಪದ ಅಗರ್ವುಡ್ ಪುಡಿ ಮಾಡಿ ನೀರಿನೊಂದಿಗೆ ಸಂಸ್ಕರಿಸಿ ಭಟ್ಟಿ ಇಳಿಸಿ ತೈಲ ತಯಾರಿಸಲಾಗುತ್ತದೆ. ಇದಕ್ಕೆ 'ಅತ್ತರ್' ಎಂಬ ಹೆಸರಿನಲ್ಲಿ ಅರಬ್ ದೇಶಗಳಲ್ಲಿ ಭಾರಿ ಬೇಡಿಕೆ.
4000ಕ್ಕೂ ಅಧಿಕ ಬೆಳೆಗಾರರು
ಅಗರ್ ಧೂಮವನ್ನು ಚಿಕಿತ್ಸೆಯಲ್ಲಿ ಬಳಸಲಾಗುತ್ತದೆಯಲ್ಲದೆ ವೈನ್, ಲೈಂಗಿಕ ಉದ್ದೀಪನ ಮದ್ದುಗಳಲ್ಲೂ ಬಳಸಲಾಗುತ್ತದೆ. ತೈಲ ಸಂಸ್ಕರಣೆ ನಂತರ ಉಳಿದ ತ್ಯಾಜ್ಯ ಮರವನ್ನು ಕಾಗದ ತಯಾರಿಕೆಗೆ ಬಳಸಬಹುದು. ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಅಡಕೆ, ಹಾಸನ, ಕೊಡಗಿನಲ್ಲಿ ಕಾಫಿ ಏಲಕ್ಕಿಯೊಂದಿಗೆ ಈಗಾಗಲೇ 4000ಕ್ಕೂ ಹೆಚ್ಚು ಬೆಳೆಗಾರರು ಅಗರ್ನೆಡೆ ಒಲವು ತೋರಿದ್ದಾರೆ.
ಬಹಳ ಡಿಮ್ಯಾಂಡಿದೆ...
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಅಗರ್ವುಡ್ಗೆ ದರ್ಜೆಗನುಗುಣವಾಗಿ 60,000- 10,00,000 ಅಮೆರಿಕನ್ ಡಾಲರ್ ಬೆಲೆಯಿದೆ. ಶೃಂಗೇರಿಯಲ್ಲಿರುವ ದಿ ವನದುರ್ಗ ಅಗರ್ವುಡ್ ಇಂಡಿಯಾ ಲಿಮಿಟೆಡ್ ಎಂಬ ನೋಂದಾಯಿತ ಸಂಸ್ಥೆಯು ಬೆಳೆಗಾರರನ್ನೇ ಷೇರುದಾರರನ್ನಾಗಿಸಿದೆ. ಅಳಿವಿನಂಚಿನಲ್ಲಿದ್ದ ಅಗರ್ ಅನ್ನು ಪುನರು ಜ್ಜೀವನಗೊಳಿಸಿದೆ. ಸಂಸ್ಥೆಯು ಸಸಿಗಳ ಪೂರೈಕೆಯಿಂದ ಹಿಡಿದು ಕಟಾವು ಮಾರುಕಟ್ಟೆ ವ್ಯವಸ್ಥೆವರೆಗೂ ಒಪ್ಪಂದ ಪತ್ರ ಮಾಡಿಕೊಂಡಿದೆ. ಈಗಾಗಲೇ ಸಂಸ್ಥೆಯು ಅಗರ್ ತೋಟವನ್ನೆ ಮಾಡಿದ್ದು, ಕಟಾವಿಗೆ ಸಿದ್ಧವಾಗಿದೆ. ಭಾರತದ ಈಶಾನ್ಯ ಭಾಗಗಳಲ್ಲಿ ಹೇರಳವಾಗಿ, ಸ್ವಾಭಾವಿಕವಾಗಿ ಬೆಳೆಯುತ್ತಿದ್ದ ಈ ಮರ ಕಳ್ಳರ ಕೊಡಲಿಗೆ ಸಿಕ್ಕಿ ಅಳಿವಿನಂಚಿನಲ್ಲಿದೆ. ಅಮೆರಿಕ, ಆಫ್ರಿಕ, ಥಾಯ್ಲೆಂಡ್, ಮಲೇಷ್ಯಾ, ಸಿಂಗಾಪುರ್ಗಳಲ್ಲಿ ಅಗರ್ ದೊಡ್ಡ ಉದ್ಯಮವಾಗಿದೆ. ಸಂಪರ್ಕಕ್ಕೆ- 080- 25592426.
- ಪೂರ್ಣಿಮಾ ಕಾನಹಳ್ಳಿ