

ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ. ಇದರಿಂದ ಬಡ, ಮಧ್ಯಮ ವರ್ಗದ ಪಾಡು ಅಷ್ಟಿಷ್ಟಲ್ಲ. ಆದರೆ, ದಾವಣಗೆರೆ ಜಿಲ್ಲೆಯ ತೋಳಹುಣಸೆಯ ರೇವಣ್ಣ ನಾಯಕ ಎಂಬ ರೈತ ತನ್ನ ಮನೆಯ ಹಿಂಭಾಗದ ಖಾಲಿ ಜಾಗದಲ್ಲಿ ತರಕಾರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.
20/60 ಅಡಿ ಜಾಗದಲ್ಲಿ ಟೊಮೇಟೊ, ಮೆಣಸಿನಕಾಯಿ, ಸೌತೆಕಾಯಿ, ಚೌಳಿಕಾಯಿ ಮತ್ತು ಚೆಂಡು ಹೂವು ಬೆಳೆಯುತ್ತಿದ್ದಾರೆ. ಯಾವುದೇ ಗೊಬ್ಬರ ಹಾಕದೆ ಸೊಂಪಾಗಿ ಟೊಮೇಟೊ ಬೆಳೆದಿದೆ. ಇದು ಸಹಜವಾಗಿ ಗ್ರಾಮಸ್ಥರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಒಂದೊಂದು ಗಿಡದಲ್ಲಿ ಸುಮಾರು 3ರಿಂದ 4 ಕೆ.ಜಿ. ಹಣ್ಣುಗಳು ಬಿಡುತ್ತವೆ. ರಸಗೊಬ್ಬರ ಹಾಕಿದರೂ ಬಾರದ ಬೆಳೆ, ರೈತ ರೇವಣ್ಣ ನಾಯಕ ಪಾಳು ಬಿದ್ದ ಜಾಗದಲ್ಲಿ ಕೇವಲ ಮಳೆ ನೀರಿನಿಂದ ಬೆಳೆದಿದ್ದಾನೆ. ಇದರೊಂದಿಗೆ ಸೌದೆ ಅಂಗಡಿ ಇದೆ. 2 ಎಕರೆ ಹೊಲದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಇತ್ತೀಚಿನ ದಿನದಲ್ಲಿ ಕೃಷಿಯಲ್ಲಿ ನೆಮ್ಮದಿ ಕಾಣುವ ರೈತರು ಕಡಿಮೆ. ಆದರೆ, ಇವರು ಭೂಮಿ ತಾಯಿನೇ ದೇವರು ಎಂದು ನಂಬಿದವರು. ಅವರ ಪ್ರಕಾರ ಕೃಷಿ ಮಾಡಲು ಎಲ್ಲರಿಗೂ ಬರಲ್ಲ. ಅದಕ್ಕೆ ಅನುಭವ ಬೇಕು ಎನ್ನುತ್ತಾರೆ. ಯಾವುದೇ ಗೊಬ್ಬರ ಹಾಕದೆ ಟೊಮೇಟೊ ಇಷ್ಟು ಚೆನ್ನಾಗಿ ಬೆಳೆದ ಇವರು ಶಾಲೆಯ ಮುಖ ನೋಡದವರು. ಆದರೂ ಕೃಷಿಯಲ್ಲೇ ನೆಮ್ಮದಿ ಕಂಡುಕೊಂಡವರು. ಸುಮಾರು 2 ಟನ್ನಷ್ಟು ಟೊಮೇಟೊ ಬಂದಿದೆ.
ನಾನು ಇದಕ್ಕೆ ಯಾವ ಗೊಬ್ಬರನೂ ಹಾಕಿಲ್ಲರೀ. ಮನೆ ಹಿಂದೆ ಪಾಳು ಬಿದ್ದ ಜಾಗದಲ್ಲಿ ಟ್ರ್ಯಾಕ್ಟರ್ನಿಂದ ಹದಗೊಳಿಸಿ ಚರಂಡಿಯಲ್ಲಿ ಬೆಳೆದ ಸಸಿ ಹಚ್ಚಿದ್ದೆ. ಅಷ್ಟೇ ನೋಡ್ರಿ, ಈ ರೀತಿ ಹಣ್ಣು ಬಿಟ್ಟೈತಿ.
- ರೇವಣ್ಣ ನಾಯಕ
- ಶಿವಕುಮಾರ ಕೆ. ಗಂಗಾವತಿ