ಹಸಿರು ಮಠ

ಈ ಮನೆಯಲ್ಲಿ ತೆಂಗಿನ ಚಿಪ್ಪುಗಳು ಗುಬ್ಬಚ್ಚಿಗೆ ಜೀವಜಲ ಒದಗಿಸುವ ಅಕ್ಷಯ ಪಾತ್ರೆ.
ಹಸಿರು ಮಠ
Updated on: 

ಈ ಮನೆಯಲ್ಲಿ ತೆಂಗಿನ ಚಿಪ್ಪುಗಳು ಗುಬ್ಬಚ್ಚಿಗೆ ಜೀವಜಲ ಒದಗಿಸುವ ಅಕ್ಷಯ ಪಾತ್ರೆ. ಖಾಲಿಯಾದ ಪೇಂಟ್ ಡಬ್ಬ, ಒಡೆದ ಕೊಡ, ತೂತು ಬಿದ್ದ ಬಕೆಟ್, ಸಿಮೆಂಟ್, ಬಿತ್ತನೆ ಬೀಜದ ಕಾಲಿ ಚೀಲ, ಕ್ಯಾರಿ ಬ್ಯಾಗ್... ಹೀಗೆ ಕಸದ ತೊಟ್ಟಿಗೆ ಲಾಯಕ್ಕು ಎನ್ನುವ ವಸ್ತುಗಳಲ್ಲಿ ಹಸಿರು ಸೆಲೆ ಚಿಮ್ಮುತ್ತಿದೆ...

ಈ ಮನೆಯಲ್ಲಿ ಮನುಷ್ಯರಷ್ಟೇ ವಾಸ ಮಾಡುತ್ತಿಲ್ಲ. ಅಪರೂಪದ ಗಿಡಗಳು, ಬಳ್ಳಿಗಳು, ಹಲವು ಪಕ್ಷಿಗಳು ಈ ಪುಟ್ಟ ಸೂರಲ್ಲಿ ಸ್ಥಾನ ಪಡೆದಿವೆ. ಮನೆಗೆ ಎಂಟ್ರಿ ಕೊಟ್ಟರೆ ಸಾಕು, ಗಿಡಗಳ ಸ್ಪರ್ಶ, ಹೂವಿನ ಅಂದ, ಸುವಾಸನೆ, ಪಕ್ಷಿಗಳ ಕಲರವ, ಪಾತರಗಿತ್ತಿಗಳ ಬಿನ್ನಾಣ ಕಣ್ದುಂಬುತ್ತದೆ.
ಇಂಥ ಅದ್ಭುತ ದೃಶ್ಯ ಕಾಣಸಿಗುವುದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಸಿದ್ದರಾಮ ಹಿರೇಮಠ ಅವರ ಮನೆಯಲ್ಲಿ. ಹಿರೇಮಠ, ಮನೆ ಒಡತಿ ವಿದ್ಯಾ ಹಿರೇಮಠ, ಮಕ್ಕಳಾದ ಅಪೂರ್ವ, ಆಕಾಶ ಅವರ ಕಾಳಜಿ, ಅಕ್ಕರೆ, ಆರೈಕೆ ಮಾಡಿದ ಫಲವಿದು.

ಹಸಿರ ಪರಿಚಾರಕ
ಸಿದ್ದರಾಮ ಹಿರೇಮಠ ವೃತ್ತಿಯಲ್ಲಿ ಪಟ್ಟಣದ ಹಿರೇಮಠ ಕಾಲೇಜೊಂದರ ಪ್ರಾಚಾರ್ಯರು. ಪ್ರವೃತ್ತಿಯಲ್ಲಿ ಸಾಹಿತಿ. ಆದರೆ, ಅವರು ಅಸಲಿ ಹಸಿರ ಪರಿಚಾರಕರು. ಪಟ್ಟಣದ ಬಾಪೂಜಿ ನಗರದಲ್ಲಿ 2004ರಲ್ಲಿ 30್ಢ40 ಅಳತೆಯಲ್ಲಿ ಮನೆ ಕಟ್ಟಿದ್ದಾರೆ. ಚಿಕ್ಕ ಜಾಗದಲ್ಲೇ ಚೊಕ್ಕ ಕೈತೋಟ ಮಾಡಿದ್ದಾರೆ. ಇಲ್ಲಿ ಅಪರೂಪದ ಸಸಿಗಳನ್ನು ತಂದು ಅಂಗಳದಲ್ಲಿ ನೆಡಲಾಗಿದೆ.

ಅಪರೂಪದ ಸಸ್ಯಗಳು
ಬಯಲುಸೀಮೆ ಸೇರಿದಂತೆ ಧರ್ಮಸ್ಥಳ, ಉಜಿರೆ, ಊಟಿ ಸೇರಿದಂತೆ ಮಲೆನಾಡಿನ ಗಿಡಗಳಿವೆ. ನೆಲ್ಲಿ, ದಾಳಿಂಬೆ, ಮಾವು, ದಾಸವಾಳ, ಕಣಗಲ, ಮೇ ಫ್ಲವರ್, ರೋಜ, ಶೋ ಗಿಡಗಳು, ಮನೆ ಪ್ಲಾಂಟ್, ತುಪ್ಪರಿಕಾಯಿ, ಔಷಧಿ ಸಸ್ಯಗಳಾದ ದೊಡ್ಡ ಪತ್ರೆ, ಆಡು ಮುಟ್ಟದ ಬಳ್ಳಿ, ಅಮೃತ ಬಳ್ಳಿ, ಬಸಳೆ ಹೀಗೆ ಸುಮಾರು 30ಕ್ಕಿಂತ ಹೆಚ್ಚು ಗಿಡ ಹಾಗೂ ಬಳ್ಳಿಗಳು ಮಿತ ಜಾಗದಲ್ಲಿ ಭರ್ಜರಿಯಾಗಿ ಬೆಳೆದು ನಿಂತಿವೆ.

ಸಸ್ಯಕಾಶಿ
ಈ ಮನೆ ಈಗ ಅಕ್ಷರಶಃ ಸಸ್ಯಕಾಶಿ. ಅಂದಹಾಗೆ ಇವರ ಕೈತೋಟ ಪರಿಸರಸ್ನೇಹಿ. ನಿರುಪಯುಕ್ತ ವಸ್ತುಗಳಲ್ಲಿ ಸಸಿಗಳನ್ನು ನೆಟ್ಟು ಮರುಬಳಕೆ ಮಾಡುತ್ತಾರೆ. ಅಡುಗೆ ತ್ಯಾಜ್ಯದಿಂದ ನೀರು ಮತ್ತು ಗೊಬ್ಬರ ಬಳಸಿ ಕೈತೋಟ ಬೆಳೆಸುತ್ತಾರೆ. ಹಿರೇಮಠರ ಕೈತೋಟ ಪರಿಸರಪ್ರಿಯರಿಗೆ ಮುದ ನೀಡುವುದಲ್ಲದೆ ಅನೇಕ ಪಕ್ಷಿಗಳಿಗೆ ಆವಾಸ ಸ್ಥಾನವೂ ಆಗಿದೆ. ಪಕ್ಷಿ ಸಂಕುಲಗಳ ವಾಸಕ್ಕೆಂದೇ ಪೂರಕ ಪರಿಸರ ಸೃಷ್ಟಿ ಮಾಡಿದ್ದಾರೆ. ಗಾಳಿ, ಮಳೆಗೆ ಬಿದ್ದ ಹಕ್ಕಿ ಗೂಡುಗಳನ್ನು ತಂದು ನೇತು ಹಾಕಿ ಪಕ್ಷಿಗಳಿಗೆ ಆಸರೆ ಕಲ್ಪಿಸಿದ್ದಾರೆ. ಜೊತೆಗೆ ನಿಯಮಿತವಾಗಿ ನೀರು, ಆಹಾರ ನೀಡುತ್ತಾರೆ. ಹೀಗಾಗಿ ಗುಬ್ಬಿ, ಜೇನು, ರತ್ನಪಕ್ಷಿ, ಚಿಟುಗುಬ್ಬಿ... ಶಾಶ್ವತವಾಗಿ ಆಶ್ರಯ ಪಡೆದಿದ್ದರೆ, ಮತ್ತೆ ಕೆಲವು ಅತಿಥಿಗಳಂತೆ ಬಂದು ಹೋಗುತ್ತವೆ. ಗುಬ್ಬಚ್ಚಿಗಳಂತೂ ಮನೆಯ ಒಳಗಡೆಯೇ ಗೂಡು ಕಟ್ಟಿ ಸಂಸಾರ ಹೂಡಿವೆ. ಇವರ ಮನೆ, ಮನೆ ಅಂಗಳ ಹಲವು ಸಸ್ಯ, ಪಕ್ಷಿಗಳ ಸಂಗಮ ತಾಣ. ಇಂಥ ವೈಶಿಷ್ಟ್ಯ, ಪರಿಸರಸ್ನೇಹಿ ಮನೆ ಕಾಂಕ್ರಿಟ್ ಕಾಡುಗಳಲ್ಲಿ ಕಳೆದು ಹೋಗುತ್ತಿರುವ ಈ ಪೀಳಿಗೆಗೆ ವಿಶಿಷ್ಟ ಅನುಭವ ನೀಡುತ್ತದೆ. ಜೊತೆಗೆ ಕೈತೋಟ ಬೆಳೆಸುವ ಕನಸನ್ನು ನೋಡುಗರಲ್ಲಿ ಪ್ರೇರೇಪಿಸುತ್ತದೆ. ಸಿದ್ದರಾಮ ಹಿರೇಮಠರ ಮೊ. 9448632451

ಮಹಡಿ ತೋಟಕ್ಕೆ ಸಿದ್ಧತೆ

ಮುಂದಿನ ದಿನಗಳಲ್ಲಿ ಮನೆಯ ಮಹಡಿ ಮೇಲೆ ಕುಂಡ ಬಳಸಿ ವಿವಿಧ ತಾಜಾ ಸೊಪ್ಪು- ತರಕಾರಿ ಬೆಳೆಸಲು ಸಿದ್ಧತೆ ನಡೆಸಿದ್ದೇವೆ. ಮನೆಗೆ ಪರಿಚಯಸ್ಥರು, ನೆಂಟರು ಬಂದರೆ ಕೈತೋಟದಲ್ಲಿ ಬೆಳೆದ ಫಲ, ಹೂವು ನೀಡಿ ಸತ್ಕರಿಸುತ್ತೇವೆ. ನೆರೆಹೊರೆಯವರಿಗೆ ಔಷಧಿ ಸಸ್ಯ ಬೇಕೆಂದಾಗ ನಮ್ಮ ಕೈತೋಟಕ್ಕೆ ಧಾವಿಸುತ್ತಾರೆ.
- ವಿದ್ಯಾ ಹಿರೇಮಠ

- ಸ್ವರೂಪಾನಂದ ಎಂ. ಕೊಟ್ಟೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com