

ಪುಷ್ಪ ಕೃಷಿಯಲ್ಲಿ ಮುಂಚೂಣಿಯ ಹೆಸರು ಅಂಥೋರಿಯಂ. ಬಹುಪಯೋಗಿಯಾಗಿರುವ ಈ ಹೂವಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ರೈತರು ಬೆಳೆಯಲು ಮನಸ್ಸು ಮಾಡುತ್ತಿದ್ದಾರೆ.
ಕತ್ತರಿಸಿದ ಹೂವು ಮತ್ತು ಆಕರ್ಷಕ ಅಗಲವಾದ ಎಲೆಗಳಿಗಾಗಿ ನೆರಳುಮನೆ ಹಾಗೂ ಹಸಿರು ಮನೆಗಳಲ್ಲಿ ಪಾತಿ ಅಥವಾ ಕುಂಡಗಳಲ್ಲಿ ಇದನ್ನು ಬೆಳೆಯುತ್ತಾರೆ. ಹೂದಾನಿಗಳಲ್ಲಿಡಲು ಹಾಗೂ ಪುಷ್ಪ ಗುಚ್ಛ ತಯಾರಿಕೆಯಲ್ಲಿ, ಹೂವು ಜೋಡಣೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಹಾಗಾಗಿ ಅದನ್ನು ಬೆಳೆಯುವವರಿಗೊಂದಿಷ್ಟು ಮಾಹಿತಿ.
ಮಣ್ಣು
ಚೆನ್ನಾಗಿ ನೀರು ಬಸಿದುಹೋಗುವ, ಗಾಳಿಯಾಡುವ, ತೇವಾಂಶ ಹಿಡಿದಿಟ್ಟುಕೊಳ್ಳುವ ವಸ್ತುಗಳಾದ ತೆಂಗಿನ ನಾರು, ತೆಂಗಿನ ಸಿಪ್ಪೆ, ಎಲೆಗೊಬ್ಬರ, ಇದ್ದಿಲು, ಇಟ್ಟಿಗೆ ಚೂರು ಹಾಗೂ ಇತರೆ ಸಾವಯವ ಪದಾರ್ಥ ಬಳಸುವುದು ಸೂಕ್ತ. 5ರಿಂದ 6.5ರ ರಸಸಾರ ಹೊಂದಿರುವ ಜಾಗದಲ್ಲಿ ಆಂಥೋರಿಯಂ ಅನ್ನು ಯಶಸ್ವಿಯಾಗಿ ಬೆಳೆಯಬಹುದು.
ಕಾಲ
ಇದನ್ನು ವರ್ಷವಿಡೀ ಬೆಳೆಯಬಹುದು. ಆದರೆ, ತಂಪಾದ ಹವಾಮಾನ, ಶೇ.75-80ರಷ್ಟು ನೆರಳಿರುವ 18- 28 ಡಿಗ್ರಿ ಸೆ. ಉಷ್ಣಾಂಶ, ಶೇ.70ರಿಂದ 75ರಷ್ಟು ಆರ್ದ್ರತೆ ಇರುವ ಪ್ರದೇಶ ಸೂಕ್ತ. ಜೂನ್ನಿಂದ ಅಕ್ಟೋಬರ್ವರೆಗೆ ಬೆಳೆದರೂ ಒಳಿತು.
ತಳಿಗಳು
ಆಂಥೋರಿಯಂನಲ್ಲಿ ಮುಖ್ಯವಾಗಿ 2 ತಳಿಗಳು. ಅವುಗಳಲ್ಲಿ ಆಂಥೋರಿಯಂ ಆಂಡ್ರಿಯಾನಂ ಮತ್ತು ಆಂಥೋರಿಯಂ ಸೆರ್ಜರಿಯಾನಂ. ಆಂಥೋರಿಯಂ ಆಂಡ್ರಿಯಾನಂ ಅನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಉಳಿದ ಪ್ರಬೇಧಗಳನ್ನು ಆಕರ್ಷಕ ಎಲೆಗಳಿಗಾಗಿ ಬೆಳೆಯುತ್ತಾರೆ. ವಾಣಿಜ್ಯಕ್ಕಾಗಿ ಬೆಳೆಯುವ ತಳಿಗಳಲ್ಲಿ ಬಿಳಿ, ಗುಲಾಬಿ, ಕಿತ್ತಳೆ, ಲೇಡಿ ಜೇನ್, ಜಾನ್ಸನ್ ಪಿಂಕ್, ಹನಿಮೂನ್ ರೆಡ್, ಅಗ್ನಿಹೋತ್ರಿ, ಮಿಡೋರಿ, ಚಿಲ್ಲಿರೆಡ್ ಬಣ್ಣದ ತಳಿಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಎರಡು ಮೂರು ಬಣ್ಣ ಹೊಂದಿರುವ ಒಬಾಕಿ ಮತ್ತು ಸಣ್ಣ ಗಾತ್ರದ ಮಿನಿಯೇಚರ್ ಹಾಗೂ ಟ್ವಿನ್ಸ್ (ಹೆಡೆಯಂತೆ ತೋರುವ) ತಳಿಗಳ ಇತ್ತೀಚೆಗೆ ಜನಪ್ರಿಯವಾಗುತ್ತಿವೆ.
ಬೇಸಾಯದ ಕ್ರಮ
ಈ ಗಿಡವನ್ನು ಕುಂಡ/ಮಡಿಯಲ್ಲಿ ಬೆಳೆಯಬಹುದು. ಕುಂಡದಲ್ಲಿ ಉಪಯೋಗಿಸುವವರು ಸಾವಯವ ಪದಾರ್ಥಗಳ ಮಿಶ್ರಣ ಮಾಡಿ ಹೊದಿಸಬೇಕು. ಕುಂಡದಲ್ಲಿ ಬೆಳೆಯುವ ಸಸಿಗಳಿಗೆ ಸುಮಾರು 9- 12 ಅಂಗುಲ ವ್ಯತ್ಯಾಸ ಇರಬೇಕು.
ಮಡಿಯಲ್ಲಿ ಬೆಳೆಯುವವರು 1 ಮೀ. ಅಗಲ ಮತ್ತು 30 ಸೆಂ.ಮೀ. ಆಳ ಕಾಲುವೆ ತೆಗೆಯಬೇಕು. ಗಿಡದಿಂದ ಗಿಡಕ್ಕೆ 35ರಿಂದ 40 ಸೆಂ.ಮೀ. ಹಾಗೂ ಸಾಲಿನಿಂದ ಸಾಲಿಗೆ 45 ಸೆಂ.ಮೀ. ಅಂತರ ಇರಬೇಕು.
ನೀರಾವರಿ
ಕಳೆ ತೆಗೆದು ಸ್ವಚ್ಛವಾಗಿಡಬೇಕು. ಹವಾಮಾನಕ್ಕನುಗುಣವಾಗಿ ನೀರು ಒದಗಿಸಬೇಕು. ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮಾಡಬಹುದು.
ಕೊಯ್ಲು, ಇಳುವರಿ
ನಾಟಿ ಮಾಡಿದ ಒಂದೂವರೆಯಿಂದ ಎರಡು ವರ್ಷದಲ್ಲಿ ಹೂವು ಬರಲಾರಂಭಿಸುತ್ತದೆ. ಪೂರ್ತಿ ಅರಳಿದ ಹೂಗಳನ್ನು ಕೊಯ್ಲು ಮಾಡುವುದು ಸೂಕ್ತ. ಒಂದು ಆಂಥೋರಿಯಂ ಗಿಡದಿಂದ ವರ್ಷಕ್ಕೆ 5-8 ಹೂವು ಪಡೆಯಬಹುದು. ಪ್ರತಿ ಹೆಕ್ಟೇರ್ನಿಂದ 2 ಲಕ್ಷ ಹೂಗಳು ಸಿಗುತ್ತವೆ.
ರೋಗ ಹತೋಟಿ
* ಸಸ್ಯಹೇನುಗಳು ಕಾಡಿದರೆ, 2 ಮಿಲೀ ಮೆಲಾಥಿಯಾನ್ ಅಥವಾ ಎಕಲ್ಯಾಕ್ಸ್ ಅನ್ನು 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
* ನುಸಿಯ ಬಾಧೆಗೆ 2.5 ಮಿಲೀ ಡೈಕೋಪಾಲನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
* ಎಲೆಚುಕ್ಕೆ, ಅಂಗಮಾರಿ ರೋಗ ಬಂದರೆ ಒಂದು ಲೀ. ನೀರಿಗೆ ಕಾರ್ಬಂಡೇಜಿಂ ಸಿಂಪಡಿಸಬೇಕು.
* ಬೇರುಕೊಳೆ ರೋಗಕ್ಕೆ ಲೀಟರ್ಗೆ 2 ಗ್ರಾಂನಷ್ಟು ಕ್ಯಾಪ್ಟಾನ್ ಮಿಶ್ರಣ ಮಾಡಿ ಗಿಡದ ಸುತ್ತ ಸುರಿಯುವುದು. ನಂಜಾಣುಪೀಡಿತ ಗಿಡ ಕಿತ್ತು ನಾಶ ಮಾಡಬೇಕು.
- ಶಾಂತ ತಮ್ಮಯ್ಯ