ಔಷಧೀಯ ಗುಣವುಳ್ಳ ಗೇಲ್ ಬೆಳೆ ಬೆಳೆಯುವ ಮೂಲಕ ಇಲ್ಲಿನ ರೈತರೊಬ್ಬರು ಸುತ್ತಮುತ್ತಲಿನ ಕೃಷಿಕರ ಗಮನ ಸೆಳೆದಿದ್ದಾರೆ. ಖರ್ಚು ಕಡಿಮೆ ಲಾಭ ಜಾಸ್ತಿಯ ಬೆಳೆ ಇದು. ದೇವದುರ್ಗ ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ಕಾಲುವೆಯಡಿ ನೀರಾವರಿ ಸೌಲಭ್ಯವಿದೆ. ನೀರಾವರಿ ಯೋಜನೆಯಡಿ ದೊರೆಯುವ ನೀರನ್ನು ಸಮರ್ಪಕ ಬಳಸಿಕೊಳ್ಳಲು ಈಗಲೂ ರೈತರಿಗೆ ಸಾಧ್ಯವಾಗಿಲ್ಲ.
ಇಲ್ಲಿ ಗೇಲ್ನಂಥ ಬೆಳೆಯು ಒಣ ಬೇಸಾಯ, ನೀರಾವರಿ ಭೂಮಿಗಳಲ್ಲೂ ಬೆಳೆಯುತ್ತದೆ. ಗೇಲ್ ತೋಟಗಾರಿಕೆ ಬೆಳೆ. ಸದ್ಯ ಪ್ರತಿ ಕ್ವಿಂಟಲ್ಗೆ ರು. 10 ಸಾವಿರ ಕನಿಷ್ಠ ಧಾರಣೆ ಇದೆ. ಗೇಲ್ ಬಿತ್ತನೆ ವೇಳೆ ಪ್ರತಿ ಎಕರೆಗೆ 50 ಕೆಜಿ ಕಾಂಪೋಸ್ಟ್ ಗೊಬ್ಬರ ನೀಡಿದರೆ, ಒಂದು ತಿಂಗಳ ನಂತರ 20 ಕೆಜಿ ಯೂರಿಯಾ, 20 ಕೆಜಿ ಪೊಟ್ಯಾಷ್ ನೀಡಬೇಕು.
ಕನಿಷ್ಠ 3- 6 ಅಡಿ ಎತ್ತರ ಬೆಳೆಯುವ ಒಂದು ಗಿಡಕ್ಕೆ 100- 120 ತೆನೆ ಬಿಡುತ್ತದೆ. ಬಿತ್ತನೆ ನಂತರ ಕಳೆ ಮತ್ತು ಕಟಾವಿನ ಕೆಲಸ ಮಾತ್ರ ರೈತರದ್ದು. ಕೃಷಿಕರ ಕೆಲಸ ಮತ್ತು ಖರ್ಚು ಕಡಿಮೆ. ಜತೆಗೆ ಲಾಭವೂ ಇದೆ ಎನ್ನುತಾರೆ ರೈತ ಎಚ್. ರಘುರಾಮ್.
ಗೇಲ್ ಬೆಳೆಯ ಬೀಜಗಳನ್ನು ಆಂಧ್ರ ಮೂಲದ ವಿತರಕರು ಒದಗಿಸಿದ್ದಾರೆ. ಬೆಳೆ ಬಂದ ನಂತರ ವಿತರಕರೆ ಖುದ್ದಾಗಿ ರೈತರ ಹೊಲಕ್ಕೆ ಬಂದು ಪ್ರತಿ ಕ್ವಿಂಟಲ್ಗೆ ಕನಿಷ್ಠ 10 ಸಾವಿರದಂತೆ ಖರೀದಿಸುತ್ತಾರೆ. ಗೇಲ್ ಬೆಳೆಗಾರರು ಮಾರುಕಟ್ಟೆಗೆ ಅಲೆಯುವ ಅಗತ್ಯವೂ ಇರದು. ಗೇಲ್ ಬೆಳೆಯಲ್ಲಿ ಉಮೇಜಾ- 3 ಅನ್ನುವ ಪೌಷ್ಟಿಕಾಂಶ ಗುಣ ಶೇ.63ರಷ್ಟು ಇರುತ್ತದಂತೆ. ಆದ್ದರಿಂದಲೇ ಯುರೋಪ್ ರಾಷ್ಟ್ರಗಳಲ್ಲಿ ಇದಕ್ಕೆ ಬೇಡಿಕೆ ಹೆಚ್ಚು.
ವಿವಿಧ ನೀರಾವರಿ ಯೋಜನೆಗಳಡಿ ನಿರಂತರ ಬತ್ತ ಬೆಳೆದು ಲಕ್ಷಾಂತರ ರು. ವೆಚ್ಚ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ರೈತರಿಗೆ, ಗೇಲ್ ಬೆಳೆ ಪರ್ಯಾಯವಾಗಿದೆ. ಚಿನ್ನದ ಬೆಲೆಯ ಗೇಲ್ ಬೆಳೆಯತ್ತ ತಾಲೂಕಿನ ರೈತರು ನಿಧಾನ ಆಕರ್ಷಿತರಾಗುತ್ತಿದ್ದಾರೆ. ಸಂಪರ್ಕ: ಎಚ್. ರಘುರಾಮ್ (9900129440).
- ಮೊಯಿನುದ್ದೀನ್ ಕಾಟಮಳ್ಳಿ