ಪುಷ್ಪವತಿ

ಪುಷ್ಪವತಿ
Updated on: 

ಕೆ.ಆರ್. ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ರೈತ ಮಹಿಳೆ ವಿಶಾಲಾಕ್ಷಮ್ಮ ಪುಷ್ಪೋದ್ಯಮದಲ್ಲಿ ಸದ್ದಿಲ್ಲದೆ ಸಾಧನೆ ಮಾಡಿದ್ದಾರೆ. ದುಡಿಮೆಗೆ ತಕ್ಕ ಫಲ ಪಡೆಯುವ ಹಂಬಲದೊಂದಿಗೆ ತಮ್ಮ ಎರಡು ಎಕರೆ ಭೂಮಿಯಲ್ಲಿ ಹನಿ ನೀರಾವರಿ ಮೂಲಕ ಗುಲಾಬಿ, ಚೆಂಡು ಹೂವಿನ ಬೇಸಾಯ ಮಾಡಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಪತಿ ದಿ. ಶ್ರೀಕಂಠೇಗೌಡರೂ ಪ್ರಗತಿಪರ ರೈತರೇ ಆಗಿದ್ದರು. ಅದೇ ದಾರಿಯಲ್ಲಿ ಮುನ್ನಡೆದಿರುವ ವಿಶಾಲಾಕ್ಷಮ್ಮ ಅವರಿಗೆ ಸಾಥ್ ನೀಡಿದವರು ಮಗ ಬಸವರಾಜು. ವೃತ್ತಿಯಲ್ಲಿ ಶಿಕ್ಷಕರಾಗಿರುವ ಬಸವರಾಜು ಅವರಿಗೆ ಪ್ರವೃತ್ತಿ ಎಂದರೆ ಬೇಸಾಯ. ಇರುವಷ್ಟು ಭೂಮಿ, ಸಿಗುವಷ್ಟು ನೀರಿನಲ್ಲಿ ಏನಾದರೂ ಸಾಧಿಸಿ, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎನ್ನುವ ತಾಯಿಯ ತವಕಕ್ಕೆ ನೀರೆರೆದು ಪೋಷಿಸಿದರು.

ಭದ್ರ ಅಡಿಪಾಯ
ಬೇಸಾಯ ಪದ್ಧತಿಯಲ್ಲಿ ವಿಭಿನ್ನತೆ ಮತ್ತು ವೈವಿಧ್ಯ ಬೆಳೆಗಳಿಂದ ಹೊಸ ಆವಿಷ್ಕಾರ ಮಾಡಲು ಹೊರಟಿರುವ ವಿಶಾಲಕ್ಷಮ್ಮ ಇಳಿ ವಯಸ್ಸಿನಲ್ಲಿ ಸುಮ್ಮನೆ ಕಾಲ ನೂಕುವ ಬದಲು ಪುಷ್ಪೋದ್ಯಮದ ಬೇಸಾಯಕ್ಕೆ ಭದ್ರ ಅಡಿಪಾಯ ಹಾಕಿದ್ದಾರೆ. ಚೆಂಡು ಹೂವಿನ ಜೊತೆ 5 ಸಾವಿರಕ್ಕೂ ಹೆಚ್ಚು ಹಳದಿ ಮತ್ತು ಕೆಂಪು ಗುಲಾಬಿ ಗಿಡಗಳೂ ತೋಟದಲ್ಲಿ ಕಣ್ಮನ ಸೆಳೆಯುತ್ತವೆ.

5 ಸಾವಿರ ಗುಲಾಬಿ ಗಿಡ
ಕೋಲಾರ ಜಿಲ್ಲೆಯ ಹೊಸಕೋಟೆಯ ನರ್ಸರಿಯಿಂದ ಹಳದಿ ಮತ್ತು ಕೆಂಪು ಬಣ್ಣದ 5 ಸಾವಿರ ಗುಲಾಬಿ ಗಿಡ ತರಿಸಿದ್ದಾರೆ. ಚೆಂಡು ಹೂವಿನ ಆರು ಅಡಿ ಅಂತರದ ಸಾಲುಗಳ ಮಧ್ಯದಲ್ಲಿ ಗುಲಾಬಿ ಸಸಿ ನೆಟ್ಟು ಹೂವಿನ ಬೇಸಾಯದಲ್ಲೂ ಯಶಸ್ವಿಯಾಗಬುಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

ಪ್ರತಿದಿನ 10 ಕೆಜಿ ಹೂವು
ಗುಲಾಬಿ ಹೂವಿನ ಗಿಡಗಳಿಗೆ ಎರಡೂವರೆ ತಿಂಗಳಾಗಿದೆ. ದಿನವೊಂದಕ್ಕೆ ಸರಾಸರಿ 10 ಕೆಜಿಗೂ ಹೆಚ್ಚು ಗುಲಾಬಿ ಹೂವು ಸಿಗುತ್ತೆ. ಈ ಹೂವನ್ನು ಮೈಸೂರಿನ ಮಾರುಕಟ್ಟೆಗೆ ಸರಬರಾಜು ಮಾಡಿ ತಿಂಗಳಿಗೆ ಸರಾಸರಿ 25  ಸಾವಿರಕ್ಕೂ ಹೆಚ್ಚು ಲಾಭ ಗಳಿಸುತ್ತಿದ್ದಾರೆ.

ಹನಿ ನೀರಾವರಿ ಪದ್ಧತಿ
ನೀರನ್ನು ಹಿತ- ಮಿತವಾಗಿ ಬಳಸಿ ಹನಿ ನೀರಾವರಿ ಪದ್ಧತಿ ಅಳವಡಿಸಿ ಬೇಸಾಯ ಆರಂಭಿಸಿದ ವಿಶಾಲಾಕ್ಷಮ್ಮ, ಸಾಮಾಜಿಕ ಕಳಕಳಿ ಉಳ್ಳವರೂ ಆಗಿದ್ದಾರೆ. ಕೃಷಿ ಈ ದೇಶದ ಬೆನ್ನೆಲುಬು. ಕಡಿಮೆ ಅವಧಿಯಲ್ಲಿ ಹೆಚ್ಚು ಶ್ರಮವಿಲ್ಲದೆ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮಹಿಳೆಯರಿಗಂತೂ ಅತ್ಯಂತ ಪರಿಣಾಮಕಾರಿ ಪುಷ್ಪೋದ್ಯಮಕ್ಕೆ ಸರ್ಕಾರದ ಪ್ರೋತ್ಸಾಹ ಕಡಿಮೆ ಅಂತಾರೆ ವಿಶಾಲಕ್ಷಮ್ಮ. (ಮೊ. 9743800600)

ಮಾರುಕಟ್ಟೆಗೆ ಸೌಲಭ್ಯಗಳಿಲ್ಲ!
ಕೆ.ಆರ್. ಪೇಟೆ ತಾಲೂಕಿನ ಬಹುಭಾಗ ಮಳೆಯಾಶ್ರಿತ ಪ್ರದೇಶ. ಇಲ್ಲಿನ ರೈತರು ಹನಿ ನೀರಾವರಿ ಮೂಲಕವೇ ಪುಷ್ಪೋದ್ಯಮ, ತರಕಾರಿ, ತೆಂಗು, ಅಡಕೆ ಬೆಳೆಯುವುದರ ಮೂಲಕ ಸ್ವಾವಲಂಬಿ ಬದುಕು ಸಾಗಿಸಿದ್ದಾರೆ. ಈ ಭಾಗದಲ್ಲಿ ಪುಷ್ಪೋದ್ಯಮ ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಎಪಿಎಂಸಿ ಮೂಲಕ 25 ಲಕ್ಷ ವೆಚ್ಚ ಮಾಡಿ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಸೇವಂತಿ ಹಾಗೂ ಇತರೆ ಹೂವು ಮಾರಾಟ ಮಾಡಲು ಹೂವಿನ ಮಾರುಕಟ್ಟೆ ಆರಂಭಿಸಿತು. ಪ್ರಾರಂಭದಲ್ಲಿ ಸರಿಯಾದ ಪ್ರೋತ್ಸಾಹ ಇಲ್ಲದ ಕಾರಣ ಹೂವಿನ ಮಾರಾಟ ಅಷ್ಟಾಗಿ ನಡೆಯಲಿಲ್ಲ. ಮಾರುಕಟ್ಟೆ ಅಭಿವೃದ್ಧಿಪಡಿಸುವ ಗೋಜಿಗೂ ಸರ್ಕಾರ ಹೋಗಲಿಲ್ಲ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಕನಿಷ್ಠ ಮೂಲ ಸೌಲಭ್ಯ ಇಲ್ಲದೆ ಇರುವುದರಿಂದ ಹೂವಿನ ಮಾರುಕಟ್ಟೆಯು ಅತಂತ್ರ ಸ್ಥಿತಿಯಲ್ಲಿದೆ. ತಾಲೂಕಿನಾದ್ಯಂತ ದಿನನಿತ್ಯ ಲಕ್ಷಾಂತರ ರು. ಮೌಲ್ಯದ ವಿವಿಧ ಬಗೆಯ ಹೂವುಗಳು ನೆರೆಯ ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರ ಪ್ರದೇಶದ ಮಾರುಕಟ್ಟೆಗೆ ನೇರವಾಗಿ ದಳ್ಳಾಳಿಗಳ ಮೂಲಕ ಹೋಗುತ್ತಿದೆ. ಮಂಗಳೂರು, ಗುರುವಾಯೂರು, ತಿರುಪತಿ, ಬೆಂಗಳೂರು, ಹೈದರಾಬಾದ್ ಸೇರಿದಂತೆ ವಿವಿಧ ಪಟ್ಟಣಗಳಿಗೆ ವ್ಯಾಪಾರಿಗಳು ಇಲ್ಲಿನ ಹೂವಿನ ಗುಣಮಟ್ಟಕ್ಕೆ ಮಾರುಹೋಗಿ ಖರೀದಿ ಮಾಡಲು ಮುಗಿಬೀಳುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಮಾರುಕಟ್ಟೆಗೆ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಲಿ ಎಂಬುದು ಹೂವು ಬೆಳೆಗಾರರ ಒಕ್ಕೊರಲ ಮನವಿ.

- ಕೆ. ಎನ್. ರವಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com