

ಮಲ್ಲಿಗೆ ಬೆಳೆದು ಅದರಿಂದ ಆದಾಯ ಗಳಿಸಿ ಜೀವನ ನಡೆಸುವ ಕುಟುಂಬಗಳು ನಮ್ಮಲ್ಲಿ ಸಾಕಷ್ಟಿವೆ. ಆದರೆ, ಕೇವಲ ಮಲ್ಲಿಗೆಯನ್ನೇ ನಂಬಿ ಅದರಿಂದಲೇ ಪ್ರತಿವರ್ಷ ಸಾವಿರಾರು ರುಪಾಯಿ ಸಂಪಾದಿಸುವ ಕುಟುಂಬಗಳಿರುವುದು ವಿರಳ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ವೆಲೇರಿಯನ್ ಅವರಿಗೆ ಮಲ್ಲಿಗೆ ಕೃಷಿಯಲ್ಲಿ ಬರೋಬ್ಬರಿ 14 ವರ್ಷಗಳ ಅನುಭವವಿದೆ.
ಭಾರಿ ಲಾಭ
ಅವರ ಬಳಿ 100 ಮಲ್ಲಿಗೆ ಗಿಡಗಳಿವೆ. ಬೇಸಿಗೆಯಲ್ಲಿ ದಿನಕ್ಕೊಮ್ಮೆ ನೀರುಣಿಸುತ್ತಾರೆ. 1 ಮಲ್ಲಿಗೆ ಗಿಡ 15-20 ವರ್ಷ ಬದುಕಬಲ್ಲದು. ಗಿಡ ನೆಟ್ಟ 6 ತಿಂಗಳ ನಂತರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಗಿಡದಿಂದ ಗಿಡಕ್ಕೆ ಸಾಕಷ್ಟು ಅಂತರ ಅಗತ್ಯ. ಆರಂಭದ 10 ತಿಂಗಳು ಅಧಿಕ ಹೂವು ದೊರೆಯುತ್ತದೆ. ಅಲ್ಲದೆ, ಬೇಸಿಗೆಯಲ್ಲಿ ಅಧಿಕ ಇಳುವರಿ ಲಭಿಸುತ್ತದೆ.
ರಾಸಾಯನಿಕ ಗೊಬ್ಬರ ಹಾಕಲ್ಲ
ಈ ಗಿಡಗಳಿಗೆ ಯಾವುದೇ ರಾಸಾಯನಿಕ ಹಾಕದೆ ಕೇವಲ ಹಟ್ಟಿ ಗೊಬ್ಬರ ಮತ್ತು ತಿಂಗಳಿಗೊಮ್ಮೆ ನೆಲಕಡ್ಲೆ ಹಿಂಡಿ ಹಾಕುತ್ತಾರೆ. ಪ್ರತಿದಿನ 7- 8 ಬುಟ್ಟಿಗಳಷ್ಟು ಹೂವು ಬಿಡುತ್ತದೆ. ದಿನಪತ್ರಿಕೆಯಲ್ಲಿನ ದರ ನೋಡಿ ಸ್ಥಳೀಯ ಮಾರುಕಟ್ಟೆಗೆ ಮಲ್ಲಿಗೆ ಒಯ್ಯುತ್ತಾರೆ. ಸರಿಯಾದ ನೀರಿನ ವ್ಯವಸ್ಥೆ ಇದ್ದರೆ ಇಡೀ ವರ್ಷ ಮಲ್ಲಿಗೆ ಕೃಷಿ ಕೈಗೊಳ್ಳಬಹುದು. ಆದರೆ, ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ರಾಸಾಯನಿಕದ ಮೊರೆ ಹೋದರೆ ನಷ್ಟ ಅನುಭವಿಸಬೇಕಾದಿತು ಎಂಬುದು ವೆಲೇರಿಯನ್ ಅನುಭವದ ಮಾತು. ರೋಗಬಾಧೆಯಿಂದ ಸಂರಕ್ಷಿಸಿ ಗಿಡ ನೋಡಿಕೊಂಡರೆ ರೈತರಿಗೆ ಖಂಡಿತಾ ನಷ್ಟವಿಲ್ಲ. ಕಡಿಮೆ ಶ್ರಮದಲ್ಲಿ ಅಧಿಕ ಲಾಭ ಗಳಿಸಲು ಮಲ್ಲಿಗೆ ಕೃಷಿಯು ಒಂದು ಉತ್ತಮ ದಾರಿ. ಇವರ ಎಲ್ಲ ಕೃಷಿ ಚಟುವಟಿಕೆಗಳಲ್ಲಿಯೂ ಪತ್ನಿ ಗ್ರೇಸಿ ಉತ್ತಮ ಸಹಕಾರ ನೀಡುತ್ತಾರೆ. ವೆಲೇರಿಯನ್ ದಂಪತಿ ಇಂದೊಬ್ಬ ಯಶಸ್ವಿ ಮಲ್ಲಿಗೆ ಬೆಳೆಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ.
- ಚೈತ್ರಾ ಕುಕ್ಕಿಲಾ