ಭಲೆ ಬಲೆ

ಅಯ್ಯೋ ಜಮೀನಿಗೆ ಪಕ್ಷಿಗಳ ಕಾಟ ಎಂದು ರೈತರು ಇನ್ನು ಗೊಣಗಬೇಕಿಲ್ಲ. ಯಾಕೆಂದರೆ ಅದಕ್ಕೆ ಪರಿಹಾರ ಸುಲಭ, ಸರಳ ಉಂಟು...
ಭಲೆ ಬಲೆ
Updated on: 

ಅಯ್ಯೋ ಜಮೀನಿಗೆ ಪಕ್ಷಿಗಳ ಕಾಟ ಎಂದು ರೈತರು ಇನ್ನು ಗೊಣಗಬೇಕಿಲ್ಲ. ಯಾಕೆಂದರೆ ಅದಕ್ಕೆ ಪರಿಹಾರ ಸುಲಭ, ಸರಳ ಉಂಟು.
ಸಾಮಾನ್ಯವಾಗಿ ಹಣ್ಣಿನ ಹಾಗೂ ತರಕಾರಿ ತೋಟಕ್ಕೆ ಗಿಳಿ, ಬಾವಲಿ, ಗೊರವಂಕ ಮತ್ತಿತರ ಪಕ್ಷಿಗಳ ಕಾಟ ಜಾಸ್ತಿ. ಹಾಗಾಗಿ ಪಕ್ಷಿಗಳನ್ನು ಓಡಿಸಲು ಸದಾ ಯಾರಾದರೂ ತೋಟದಲ್ಲಿ ಇರಬೇಕು. ಹಲವರು ಬೆದರುಬೊಂಬೆ ನಿಲ್ಲಿಸುತ್ತಾರೆ. ಕೆಲವರು ಡಬ್ಬ ಬಡಿಯುತ್ತಾ ಪಕ್ಷಿ ಓಡಿಸುತ್ತಾರೆ. ಹಲವರಂತೂ ನಿರಂತರವಾಗಿ ರೇಡಿಯೋ ಹಾಕುತ್ತಾರೆ. ಇಷ್ಟೆಲ್ಲ ಸರ್ಕಸ್ ಮಾಡಿದರೂ ಪಕ್ಷಿ ಕಾಟ ಕಡಿಮೆಯಾಯಿತೇ? ಊಹುಂ, ಇಲ್ಲ ಎಂಬ ಉತ್ತರ.
ನಿರಂತರವಾಗಿ ಇಂತಹ ಸಮಸ್ಯೆ ಎದುರಿಸುತ್ತಿರುವ ರೈತರಿಗೆ ಬಲೆಯೇ ಪರಿಹಾರ. ಮಾರುಕಟ್ಟೆಯಲ್ಲಿ ನಾನಾ ನಮೂನೆ. ಬಲೆಗಳು ಲಭ್ಯ. ಅವುಗಳಲ್ಲಿ ಗರ್ವಾರೆ ಬಲೆಯೂ ಒಂದು. ಹಾಗಿದ್ದರೆ ಈ ಬಲೆ ಬಗ್ಗೆ ರೈತರಿಗೆ ಒಂದಷ್ಟು ಮಾಹಿತಿ ಅರಿತುಕೊಳ್ಳೋಣ.

ಖರ್ಚು, ಬಾಳಿಕೆ
ಒಂದು ಗರ್ವಾರೆ ಪಕ್ಷಿ ಬಲೆ ಖರೀದಿಸಲು ಸುಮಾರು 16 ಸಾವಿರ ಖರ್ಚು(ಒಂದು ಎಕರೆಗೆ) ಆಗುತ್ತೆ. ವಾರ್ಷಿಕ ಖರ್ಚು ಸುಮಾರು 3200. ಈ ಬಲೆ ಸುಮಾರು ಐದು ವರ್ಷ ಬಾಳಿಕೆ ಬರುತ್ತದೆ. ಅದನ್ನು ಬಾಡಿಗೆಗೂ ಪಡೆಯಬಹುದು. ಆದರೆ, ಬಲೆಯನ್ನು ಬಾಡಿಗೆ ಪಡೆದರೆ ವರ್ಷಕ್ಕೆ ಸುಮಾರು 45 ಸಾವಿರ ಖರ್ಚಾಗುತ್ತದೆ. ಹಾಗಾಗಿ ಬಲೆಯನ್ನು ಕೊಳ್ಳುವುದೇ ಲೇಸು ಎಂಬುದು ರೈತರ ಅಭಿಪ್ರಾಯ.

ಗರ್ವಾರೆ ಪಕ್ಷಿ ಬಲೆ
ಇದು ಪಕ್ಷಿ ನಿರೋಧಕ ಬಲೆ. ಇದನ್ನು ದ್ರಾಕ್ಷಿ, ದಾಳಿಂಬೆ ಮತ್ತಿತರ ಹಣ್ಣಿನ ಬೆಳೆಯಲ್ಲಿ ಉಪಯುಕ್ತ.

ಗರ್ವಾರೆ ಮೊನೊ ಶೆಡ್ ನೆಟ್
ಇದು ದೀರ್ಘ ಬಾಳಿಕೆಯ ನೆಟ್. ಸೂರ್ಯನ ಅತಿನೇರಳೆ ಕಿರಣಗಳಿಂದ ರಕ್ಷಿಸಬಹುದು, ಸಾಮಾನ್ಯ ಟೇಪ್ ಶೆಡ್ ನೆಟ್‌ಗಿಂತ ಉತ್ತಮ.

ಗರ್ವಾರೆ ಪಾಲಿಟಾರ್
ಇದು ಟೊಮೆಟೊ ಮತ್ತಿತರ ತರಕಾರಿ ಕಟ್ಟಲು ಉಪಯೋಗಿಸುವ ಎಚ್‌ಡಿಪಿಇ ದಾರ. 1 ಕಿಲೋದಲ್ಲಿ 450 ಮೀ. ಉದ್ದದ ಗಟ್ಟಿಯಾದ ದಾರ ಸಿಗುತ್ತದೆ. ಕಬ್ಬಿಣದ ತಂತಿಗಿಂತ ಕಡಿಮೆ ವೆಚ್ಚ, ಹಗುರ ಹಾಗೂ ಉಪಯೋಗಿಸಲು ಸುಲಭ. ಈ ಬಲೆಯನ್ನು ಬಳಸಿರುವ ಬ್ಯಾತ ಗ್ರಾಮದ ರೈತ ಬಸವರಾಜು ಸೊಣ್ಣಪ್ಪ ಬಲೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಲೆ ಬೇಕಿದ್ದಲ್ಲಿ 080- 22222786 ಸಂಪರ್ಕಿಸಿ.

ಎಲ್ಲೆಲ್ಲಿ ಬಲೆ?
-ದ್ರಾಕ್ಷಿ ಒಣಗಿಸುವ ಬಲೆ, ದ್ರಾಕ್ಷಿ ಬೆಳೆಗೆ
-ಕಾರ್ನೇಷನ್ ಹೂವಿನ ಬೆಳೆಗೆ ಆಧಾರ ನೀಡಲು
-ಹಾಗಲಕಾಯಿ, ಸೌತೆಕಾಯಿ ಮತ್ತಿತರ ತರಕಾರಿ ಬೆಳೆಗಳಿಗೂ ಉಪಯುಕ್ತ
ಏನೇನು ಲಾಭ?
-ಕಡಿಮೆ ಬೆಲೆ ಹಾಗೂ ಉತ್ತಮ ಗುಣಮಟ್ಟದ ಬಲೆ ಲಭ್ಯ. ಇದರಿಂದ ಪಕ್ಷಿಗಳ ಕಾಟ ತಪ್ಪುತ್ತದೆ. ಬೆಳೆ ನಾಶ ತಡೆಯುತ್ತೆ.
-ಕೂಲಿಯಾಳುಗಳ ಖರ್ಚು ಕಡಿಮೆ, ಸಮಯದ ಉಳಿತಾಯ, ಬಳಸುವುದು ಸುಲಭ.

- ಶಾಂತ ತಮ್ಮಯ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com