

ಬೇಲಿಯಿಂದ ಆದಾಯ ಸಿಗುತ್ತಾ?
ಹೌದು ಕಣ್ರೀ, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ಗೊಲ್ಲರಹಟ್ಟಿಯ ಬೋರಮ್ಮ ಎಂಬ ವೃದ್ಧೆ ಇದಕ್ಕೆ ತಾಜಾ ನಿದರ್ಶನ.
ಬಿಡಾಡಿ ದನಗಳಿಂದ ಬೆಳೆ ರಕ್ಷಣೆಗೆ ಬೇಲಿ ಅನಿವಾರ್ಯ. ಇದಕ್ಕೆ ಬಳ್ಳಾರಿ ಜಿಲ್ಲೆಯ ರೈತರು ಬಳ್ಳಾರಿ ಜಾಲಿಯನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ. ಕೆಲವರು ಅರಣ್ಯದಲ್ಲಿ ಸಿಗುವ ಮುಳ್ಳಿನ ಗಿಡ- ಗಂಟೆ ಬಳಸುತ್ತಾರೆ. ಹೀಗೆ ಹಾಕಿದ ಬೇಲಿಯನ್ನು ಕೇವಲ ಬೆಳೆ ರಕ್ಷಣೆಗೆ ಮಾತ್ರ ಸೀಮಿತಗೊಳಿಸುವ ರೈತರೇ ಹೆಚ್ಚು.
ಅಂಥದ್ದರಲ್ಲಿ ಬೋರಮ್ಮ ವಿಭಿನ್ನ ಹಾದಿ ಹಿಡಿದಿದ್ದಾರೆ. ಆಕೆಗೆ ಇರೋದು ಅರ್ಧ ಎಕರೆ ತುಂಡು ಜಮೀನು. ಅದರಲ್ಲಿ ಕೃಷಿ ಮಾಡಲು ಮಕ್ಕಳು ಭೂಮಿ ಹದ ಮಾಡಿ ಕೊಡುತ್ತಾರೆ. ಬೋರಮ್ಮ ಮಿತ ಜಮೀನು, ಜಿನುಗುವ ಪಂಪ್‌ಸೆಟ್‌ಗೆ ಸರಿಹೊಂದುವಂತೆ ಕೈತೋಟ ಮಾಡಿ, ಅದರಲ್ಲಿ ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ಸೊಪ್ಪು ಸೇರಿದಂತೆ ತರಹೇವಾರಿ ತರಕಾರಿ ಬೆಳೆಯುತ್ತಾರೆ.
ಜಮೀನಿನ ಸುತ್ತ ಬೀಳು ಹೊಲಗಳೇ ಇವೆ. ಹೀಗಾಗಿ ಬಿಡಾಡಿ ದನಗಳ ಉಪದ್ರವದ ಮುಕ್ತಿಗಾಗಿ ಜಮೀನಿನ ಸುತ್ತ ಬೇಲಿ ಕಟ್ಟಿದ್ದಾರೆ. ಹೀಗಿರುವ ಬೇಲಿಯನ್ನು ಖಾಲಿ ಏಕೆ ಬಿಡಬೇಕು ಎಂಬ ಯೋಚನೆ ಬಂದಿದ್ದೇ ತಡ, ಮಾರುಕಟ್ಟೆಯಿಂದ ಚಳ್ಳಂಬರೆ, ಹಾಲುಕುಂಬಳ, ಕುಂಬಳಕಾಯಿ, ಹಾಗಲಕಾಯಿ, ಹಿರೇಕಾಯಿ ಸೇರಿದಂತೆ ಹತ್ತಾರು ಬಗೆಯ ತರಕಾರಿ ಬಳ್ಳಿಗಳ ಬೀಜ ತಂದು ಹಾಕಿದ್ದಾರೆ.
ಉಪಟಳಕ್ಕೆ ಉತ್ತರ
ನೋಡ-ನೋಡುತ್ತಲೇ ಬಳ್ಳಿಗಳು ಇಡೀ ಬೇಲಿಯನ್ನೇ ಆಕ್ರಮಿಸಿದವು. ಬಳ್ಳಿಗಳಲ್ಲಿ ಫಸಲು ಭರ್ಜರಿಯಾಗಿ ಬಂತು. ಅರ್ಧ ಎಕರೆಯಲ್ಲಿ ಗಳಿಸಿದ ಹಣ ಹಾಗೂ ಬೇಲಿ ಮೇಲಿನ ತರಕಾರಿಗಳನ್ನು ಮಾರಿ ಬಂದ ಹಣ ಹೆಚ್ಚು- ಕಮ್ಮಿ ಸಮನಾಗಿತ್ತು. ಈಗ ಈ ಪ್ರಯೋಗ ಮೂರು ವಸಂತ ಕಂಡಿದೆ. ಇದರಿಂದ ಈಗ ಇವರ ಕೈ ತೋಟದ ಬೇಲಿ ಅಕ್ಷಯ ಪಾತ್ರೆ. ಈ ನಡುವೆ ಬೋರಮ್ಮ ಇದರಲ್ಲಿ ಮತ್ತಷ್ಟು ಪ್ರಯೋಗಗಳಿಗೆ ತೆರೆದುಕೊಂಡಳು. ಬೇಲಿಗೆ ಹಬ್ಬಿಸುವ ಬಳ್ಳಿಗಳ ಬೀಜಗಳನ್ನು ನೀರು ಹರಿಯುವ ಕಾಲುವೆಗೆ ಹೊಂದಿಕೊಂಡಂತೆ ಹಾಕುವುದರಿಂದ ಪ್ರತ್ಯೇಕವಾಗಿ ನೀರುಣಿಸುವ ಪ್ರಮೇಯವಿಲ್ಲ. ಆರೈಕೆಯೂ ಅಷ್ಟಕಷ್ಟೆ. ಇಷ್ಟೇ ಅಲ್ಲದೆ, ದನಕರುಗಳು ಮುಟ್ಟದ ಬಳ್ಳಿಗಳನ್ನು ತರಕಾರಿ ಬಳ್ಳಿಗಳೊಡನೆ ಹಬ್ಬುವಂತೆ ಮಾಡಿ ಅವುಗಳ ಉಪಟಳಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ.
ಇದು ಇವಳ ಕೈತೋಟಕ್ಕೆ ಮತ್ತಷ್ಟು ರಕ್ಷಣೆ ನೀಡುತ್ತಿದೆ. ಜೊತೆಗೆ ಬೋರಮ್ಮ ಸೀಜನ್‌ಗೆ ತಕ್ಕಂತೆ ಬಳ್ಳಿ ಹಬ್ಬಿಸುವುದು. ಇಳುವರಿಯಲ್ಲಿ ಇಳಿಮುಖ ಕಂಡಕೂಡಲೇ ಅದರ ಬುಡದಲ್ಲಿ ಮತ್ತೊಂದು ಬಳ್ಳಿ ಎದ್ದು ನಿಲ್ಲುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಬಹುತೇಕ ಬಾರಿ ಇವಳ ಕೈತೋಟದ ಜಾಗ ಬೆಳೆಯಿಲ್ಲದೇ ಖಾಲಿ ಬಿಟ್ಟ ಉದಾಹರಣೆಗಳಿವೆ. ಆದರೆ, ತೋಟದ ಬೇಲಿ ಮಾತ್ರ ತರೇಹವಾರಿ ತರಕಾರಿ ಬಳ್ಳಿಗಳಿಂದ ನಳನಳಿಸುತ್ತಿರುತ್ತದೆ.
ಅಲ್ಲದೆ, ಇವಳ ಕೈತೋಟದ ಕೃಷಿ ಸಂಪೂರ್ಣ ಸಾವಯವದಿಂದ ಕೂಡಿದೆ. ಕೈತೋಟಕ್ಕೆ ಹೊಂದಿಕೊಂಡು ಕೂಡ್ಲಿಗಿ- ಸಂಡೂರು ರಸ್ತೆ ಇದೆ. ಈ ರಸ್ತೆ ಬಳಸಿಯೇ ದನ- ಕರುಗಳು ಕಾಡಿಗೆ ಹೋಗಬೇಕು. ಹಾಗಾಗಿ ದಾರಿಯಲ್ಲಿ ಬಿದ್ದ ಸಗಣಿ ಸಂಗ್ರಹಿಸಿ ಕೈತೋಟಕ್ಕೆ ಗೊಬ್ಬರವಾಗಿ ಬಳಸುತ್ತಾರೆ. ಕೈತೋಟದಲ್ಲಿ ಒಣಗಿದ ಬಳ್ಳಿ, ಅವಧಿ ಮುಗಿದ ಸೊಪ್ಪು, ತರಕಾರಿಯ ಗಿಡ ಕೊಳೆಸಿ, ತೋಟದ ಮಣ್ಣಿಗೆ ಬೆರೆಸುತ್ತಾರೆ. ಇದರಿಂದ ಸಮೃದ್ಧ, ತಾಜಾ ಫಸಲು ಕೈ ಸೇರುತ್ತಿದೆ. ಇಂಥ ಉತ್ಕೃಷ್ಟ ಫಸಲಿಗೆ ಸಹಜವಾಗಿ ಬೇಡಿಕೆ ಇರುವುದರಿಂದ ಬೇಜಾನ್ ಲಾಭ ಮಾಡಿಕೊಳ್ಳುತ್ತಿದ್ದಾರೆ.
- ಸ್ವರೂಪಾನಂದ ಎಂ. ಕೊಟ್ಟೂರು